Advertisement

ಸಹಿಷ್ಣುತಾ ಭಾವನೆ ಅಗತ್ಯ: ಡಾ|ಘಂಟಿ

02:26 PM Aug 17, 2017 | |

ರಿಪ್ಪನ್‌ಪೇಟೆ: ಪ್ರಾಚೀನ ಧರ್ಮಗಳ ಅಧ್ಯಯನದಿಂದ ಇಂದಿನ ಜನರಲ್ಲಿ ಸಾಮರಸ್ಯದ ಕಲ್ಪನೆ ಮೂಡಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಎಸ್‌. ಘಂಟಿ ಅಭಿಪ್ರಾಯಪಟ್ಟರು.

Advertisement

ಸಮೀಪದ ಹುಂಚ ಜೈನಮಠದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಶ್ರೀ ಅಬೇರಾಜ್‌ ಬಲ್ಡೋಟಾ ಜೈನ ಸಂಸ್ಕೃತಿ ಅಧ್ಯಯನ ಪೀಠ ಮತ್ತು ಹೊಂಬುಜ ಜೈನ ಮಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಾಚೀನ ಕರ್ನಾಟಕದ ಜೈನ ನೆಲೆಗಳು, ವೈಶಿಷ್ಟ ಮತ್ತು ಅನನ್ಯತೆ ವಿಷಯದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನುಕುಲವೆಂಬುದು ಸಹಜವಾಗಿ ಮಾತಿಗೆ ಮಾತ್ರ ಬಳಸುವ ಪದವಾಗಿದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಹಿಂದಿನ ರಾಜರ ಆಳ್ವಿಕೆಯಲ್ಲಿ ಎಲ್ಲಾ ಧರ್ಮದವರನ್ನು ಸಮನಾಗಿ ಕಾಣುವ ಸಹಿಷ್ಣುತಾ ಭಾವ ಇತ್ತು. ಈಗಿನ ಆಡಳಿತ ವ್ಯವಸ್ಥೆಯವರಲ್ಲಿ ಇದು ಕಾಣಿಸುತ್ತಿಲ್ಲ ಎಂಬುದು ಆತಂಕದ ಸಂಗತಿ. ಹೊಸ ಮತ್ತು ಹಳೆ ತಲೆಮಾರಿನ ಸಮ್ಮಿಲನದ ಅಧ್ಯಯನದಿಂದ ಪ್ರಾಚೀನ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಕನ್ನಡ ವಿಶ್ವವಿದ್ಯಾನಿಲಯದಲ್ಲಿ 12 ಅಧ್ಯಯನ ಶಾಖೆಗಳಿದ್ದು ಇತರರೊಂದಿಗೆ ಸೇರಿ ಪ್ರಚುರ ಪಡಿಸುವ ಉದೇಶದಿಂದ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ಡಾ| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಹುಂಚ ಕ್ಷೇತ್ರದಲ್ಲಿ ಪ್ರಾಚೀನ ಕಾಲದಲ್ಲಿ ನಡೆದ ಜೈನದರ್ಶನ ಗ್ರಂಥಗಳ ರಚನೆ ಇಲ್ಲಿನ ಅರಸೊತ್ತಿಗೆಯ ಸಾಹಿತ್ಯ ರಚನೆಗೆ ನೀಡಿದ ಪ್ರೋತ್ಸಾಹಗಳನ್ನು ನೆನಪಿಸಿಕೊಂಡು ಪ್ರಾಚೀನ ಕರ್ನಾಟಕದ ಜೈನ ನೆಲೆಗಳ ಬಗ್ಗೆ ವಿಷಯವನ್ನು ಮಂಡಿಸುವ ವಿಶಿಷ್ಟ ವಿಚಾರ ಸಂಕಿರಣಕ್ಕೆ ಸಂತಸ ವ್ಯಕ್ತಪಡಿಸಿದರು. ಶಿಖರೋಪನ್ಯಾಸ ನೀಡಿದ ಡಾ| ನಾಡೋಜ ಹಂಪ ನಾಗರಾಜಯ್ಯ, ಕರ್ನಾಟಕದ ಭೂವಿಸ್ತಾರದಲ್ಲಿ 5ನೇ ಶತಮಾನದಲ್ಲಿಯೇ ಜೈನ ಸಂಸ್ಕೃತಿ ನೆಲೆಗೊಂಡಿತ್ತು. ಕದಂಬರ ಕಾಲದಲ್ಲಿ ಜೈನಧರ್ಮವು ರಾಜ್ಯ ಧರ್ಮವಾಗಿ ಗೌರವಿಸಲ್ಪಟ್ಟಿತ್ತು. ಅಂದಿನ ಕಾಲದಲ್ಲಿ ಬಸದಿ ನಿರ್ಮಾಣ ಕಾರ್ಯದಲ್ಲಿ ವಿಶೇಷವಾಗಿ ಮುತುವರ್ಜಿಯನ್ನು ವಹಿಸಿದವರಲ್ಲಿ ಮಹಿಳೆಯರು ಎಂಬುದನ್ನು ಮನಗಾಣಬೇಕಿದೆ ಎಂದರು. 

 ಹಂಪಿ ವಿವಿಯ ಯೋಜನಾ ನಿರ್ದೇಶಕ ಡಾ| ಎಸ್‌.ಪಿ. ಪದ್ಮಪ್ರಸಾದ್‌, ಡಾ| ತಾರೇಹಳ್ಳಿ ಹನುಮಂತಪ್ಪ, ಡಾ|ಬಿ. ಪಾಂಡುರಂಗಬಾಬು, ಡಾ| ಉಪೇಂದ್ರಕುಮಾರ ಸುಬೇದಾರ್‌ ಇನ್ನಿತರರಿದ್ದರು.

ಗೋಷ್ಠಿ: ಮಧ್ಯಾಹ್ನ ನಡೆದ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ| ಎನ್‌.ಎಸ್‌. ರಂಗರಾಜು ವಹಿಸಿದ್ದರು. ಪೂರ್ಣಿಮಾ ಡಿ., ಡಾ| ಉಮಾನಾಥ ಶೆಣೈ, ಡಾ| ಎಂ.ಎಂ. ಕೊಟ್ರಸ್ವಾಮಿ, ಡಾ| ಕೆ.ಜಿ. ಭಟ್‌ಸೂರಿ ಅವರು ಪ್ರಾಚೀನ ಕರ್ನಾಟಕದ
ಜೈನನೆಲೆಗಳು ವೈಶಿಷ್ಟ ಮತ್ತು ಅನನ್ಯತೆ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.  ನಂತರ 4 ಗಂಟೆಗೆ ನಡೆದ ಎರಡನೇ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಮತ್ತು ವಿದ್ವಾಂಸ ಡಾ| ಎಂ.ಎ. ಜಯಚಂದ್ರ ವಹಿಸಿದ್ದರು. ಗೋಷ್ಠಿಯಲ್ಲಿ ಡಾ| ತಾರಿಹಳ್ಳಿ ಹನುಮಂತಪ್ಪ, ರಂಜಿತ್‌ ಆರ್‌., ಹನುಮಾಕ್ಷಿ ಗೋಗಿ, ಡಾ| ಜಿನದತ್ತ ಹಡಗಲಿ, ಡಾ| ದೇವರೆಡ್ಡಿ ಹದ್ಲಿ ಪ್ರಬಂಧ ಮಂಡಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next