ಹುಮನಾಬಾದ: ಪತ್ನಿ ಪ್ರೋತ್ಸಾಹವಿಲ್ಲದೇ ಪತಿ ಸಾಧನೆ ಅಸಾಧ್ಯ ಎಂದು ಪ್ರೇಮಾ ಪಾಟೀಲ ಹೇಳಿದರು. ಪಟ್ಟಣದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತಿ ಶ್ರೇಯಸ್ಸು, ಉನ್ನತ ಸ್ಥಾನಮಾನಕ್ಕಾಗಿ ಅವರಿಗೆ ಗೊತ್ತಿಲ್ಲದೇ ದೇವರಿಗೆ ಹತ್ತಾರು ಹರಕೆ ಹೊತ್ತು ಉಪವಾಸ ಉಳಿದು ಪ್ರಾರ್ಥಿಸಿ, ಯಶಸ್ಸು ಸಾಧಿಸುತ್ತೇವೆ. ಅವರಿಗೆ ದಕ್ಕುವ ಸ್ಥಾನಮಾನಗಳಲ್ಲೇ ತೃಪ್ತಿಪಡುತ್ತೇವೆ. ನಮಗಾಗಿ ಎಂದು ನಾವೂ ಏನನ್ನೂ ಮಾಡಿಕೊಳ್ಳುವುದಿಲ್ಲ. ಅದೇನಿದ್ದರೂ ಅವರಿಗಾಗಿಯೇ ಎಂದು ಹೇಳಿದರು.
ಮುಖ್ಯತಿಥಿಯಾಗಿದ್ದ ಮೀನಾಕುಮಾರಿ ಬೋರಾಳ್ಕರ ಮಾತನಾಡಿ, ಮಹಿಳೆ ಮೌಡ್ಯ ತೊರೆದು ವೈಜ್ಞಾನಿಕ, ವೈಚಾರಿಕ ಮನೋಭಾವ ಮೈಗೂಡಿಸಿಕೊಂಡು ತಾನು ಅಸಹಾಯಕಳಲ್ಲ, ಅವಕಾಶ ಸಿಕ್ಕರೆ ಪರುಷರಿಗಿಂತಲೂ ಹೆಚ್ಚಿನದನ್ನು ಸಾಧಿಸಿ ತೋರಿಸುವ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಸಲಹೆ ನೀಡಿದರು.
ವೈದ್ಯೆ ಡಾ| ಸಂಗೀತಾ ಹುಲಸೂರೆ ಮಾತನಾಡಿ, ವಿದ್ಯೆ, ಹುದ್ದೆ, ಸ್ಥಾನಮಾನ ಇತ್ಯಾದಿಗಳಲ್ಲಿ ಪುರುಷರಿಗೆ ಸಮಾನ ಸ್ಪರ್ಧೆಯೊಡ್ಡಬೇಕು. ಮಹಿಳೆ ಯಾವುದರಲ್ಲೂ ಕಡಿಮೆಯಿಲ್ಲ. ಒಂದೇ ಮನೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳೆಂದು ಪಾಲಕರು ತಾರತಮ್ಯ ಧೋರಣೆ ಅನುಸರಿಸುವುದನ್ನು ವಿರೋಧಿ ಸಿ, ಅವರಿಗಿಂತ ಹೆಚ್ಚಿನದನ್ನು ಸಾಧಿಸಿ ತೋರಿಸುವ ಮೂಲಕ ತಾನು ಅಸಹಾಯಕಳಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಮಂದಾಕಿನಿ ಮಾತನಾಡಿ, ಭಾರತದ ಮಹಿಳೆ ಇಡೀ ವಿಶ್ವಕ್ಕೆ ಮಾದರಿ. ಯಾವ ಭೂಮಿಯಲ್ಲಿ ಸ್ತ್ರೀಯನ್ನು ಗೌರವಿಸಲಾಗುತ್ತದೋ ಆ ದೇಶ ಸಕಲ ಸಮೃದ್ಧಿಯಿಂದ ಕಂಗೊಳಿಸುತ್ತದೆ ಎಂದರು.
ಉಮಾದೇವಿ ಪಾಟೀಲ, ಡಾ| ಸುಜಾತಾ ಹಾರೂRಡೆ, ಪ್ರೀತಿ ಪಾಟೀಲ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಇಸ್ಸಾ ಬೇಗಂ, ವಿದ್ಯಾ ಪಾಟೀಲ, ತನುಜಾ ಘಂಟೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಹಿಳೆಯರನ್ನು ಸನ್ಮಾನಿಸಿ, ಗೌರವಿಸಲಾಯಿತು.