ಬೆಂಗಳೂರು: ಆರ್ಥಿಕ ಹಿಂಜರಿತದ ಬಗ್ಗೆ ಯುಜ ಜನತೆ ಜಾಗೃತರಾಗಬೇಕಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ಜನಾಂದೋಲನ ರೂಪಿಸಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಹೇಳಿದರು. ಬಹುಜನ ವಿದ್ಯಾರ್ಥಿ ಸಂಘ ಭಾನುವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ “ಭಾರತದ ಆರ್ಥಿಕ ಹಿಂಜರಿತ ಕಾರಣ -ಪರಿಣಾಮ- ಪರಿಹಾರ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಾರ್ಮಿಕರ ಸಮಸ್ಯೆ ಬಗ್ಗೆ ಮಾತನಾಡಿದರೆ ಕಮ್ಯುನಿಸ್ಟರು ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಆದರೆ, ಅದೇ ಕಾರ್ಮಿಕ ವರ್ಗ ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತಿದೆ. ಕಾರ್ಮಿಕ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡದಿದ್ದರೆ ದೇಶದ ಆರ್ಥಿಕತೆ ಚೇತರಿಕೆ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಷ್ಟಿ ಮಾಡದಿದ್ದರೆ ಅವರೆಲ್ಲಾ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಾರೆ. ನಗರ ಪ್ರದೇಶಗಳಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಗಳು ವಿಫಲವಾಗುತ್ತವೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗಕ್ಕೆ ಒತ್ತು ನೀಡುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ಸರ್ಕಾರ ಒತ್ತು ನೀಡಿದರೆ ಮಾತ್ರ ಆರ್ಥಿಕತೆ ಚೇತರಿಕೆ ಸಾಧ್ಯ ಎಂದರು.
ಪ್ರಾಧ್ಯಾಪಕಿ ಎಂ.ಶೈಲಜಾ ಮಾತನಾಡಿ, ನೋಟು ಅಮಾನ್ಯ, ಜಿಎಸ್‌ಟಿ, ಬ್ಯಾಂಕ್‌ಗಳ ಎನ್‌ಪಿಎ, ಉದ್ಯೋಗ ಸೃಷ್ಟಿ ವೈಫಲ್ಯ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಸೇರಿ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಇಂದಿನ ಆರ್ಥಿಕ ಹಿಂಜರಿತಕ್ಕೆ ಕಾರಣ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ರಾಮಾಂಜಿನೇಯಲು, ಸರ್ಕಾರಗಳು ಆಡಳಿತ ನಡೆಸುವಲ್ಲಿ ವಿಫಲವಾಗಿರುವುದೇ ಇಂದಿನ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಜಿಡಿಪಿ ಕುಸಿತವನ್ನು ಕೇವಲ ಉತ್ಪಾದನಾ ಪ್ರಮಾಣ ಆಧರಿಸಿ ಲೆಕ್ಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿವಿಎಸ್ ಮುಖಂಡ ಎ.ಹರಿರಾಮ್, ಮಹೇಶ್ ದಾಸ್, ಎಚ್‌ಎಎಲ್ ನೌಕರರ ಸಂಘದ ಪದಾಧಿಕಾರಿ ಶಿವಲಿಂಗ ಮತ್ತು ಹೊಸಕೋಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಚ್.ಎಸ್.ಸುಬ್ಬರಾಜು ಉಪಸ್ಥಿತರಿದ್ದರು.