ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ತಮ್ಮ ಅಧಿಕಾರದ ಆಸೆಗಾಗಿ ಬಾಳಾಸಾಹೇಬ ಠಾಕ್ರೆ ಅವರ ವಿಚಾರಧಾರೆಗಳಿಗೆ ತಿಲಾಂಜಲಿ ಇಟ್ಡಿದ್ದಾರೆ ಎಂದು ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ನೇರ ಆರೋಪ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಬಾಳಾಸಾಹೇಬ ಅವರು ಹಿಂದುತ್ವದ ವಿಚಾರಧಾರೆಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಆದರೆ ಈಗ ಅವರ ಪುತ್ರ ಉದ್ಧವ ಠಾಕ್ರೆ ಅವರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಮುಖ್ಯಮಂತ್ರಿ ಪದವಿ ಆಸೆಗಾಗಿ ತಂದೆಯವರ ವಿಚಾರಧಾರೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದರು.
ಇದನ್ನೂ ಓದಿ : ಮಹಾರಾಷ್ಟ್ರ ಸರ್ಕಾರ ಉರುಳಿಸಲು ಬಿಜೆಪಿ ಸಂಚು: ಜಿ.ಪರಮೇಶ್ವರ್
ಮಹಾರಾಷ್ಟ್ರ ದಲ್ಲಿ ಶಿವಸೇನೆ ಮುಗಿಸಲು ಎನ್ ಸಿ ಪಿ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮೈತ್ರಿ ಸರಕಾರದಲ್ಲಿ ಶಿವಸೇನೆ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಇದರಿಂದ ಆಡಳಿತ ಪಕ್ಷದ ಶಾಸಕರು ಬೇಸರಗೊಂಡಿದ್ದಾರೆ. ಈ ಕಡೆ ಅನುದಾನವೂ ಇಲ್ಲ. ಅಭಿವೃದ್ಧಿ ಸಹ ಆಗುತ್ತಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶಿವಸೇನೆ ಶಾಸಕರು ಸರಕಾರದಿಂದ ಹೊರಬಂದಿದ್ದಾರೆ ಎಂದರು.
ಶಿವಸೇನೆ ನಾಯಕ ಏಕನಾಥ ಶಿಂಧೆ ಅವರು ಕೆಳಮಟ್ಟದಲ್ಲಿ ಬೆಳೆದು ಬಂದ ನಾಯಕ. ಅದೇ ಸಂಜಯ ರಾವುತ್ ಹಿಂಬಾಗಿಲಿನಿಂದ ಬಂದು ಅಧಿಕಾರ ಅನುಭವಿಸುತ್ತಿರುವ ನಾಯಕ. ಏಕನಾಥ ಶಿಂಧೆ ಅವರಿಗೆ ಕಾರ್ಯಕರ್ತರ ಬೆಂಬಲವಿದೆ ಎಂದು ಹೇಳಿದರು.