Advertisement

ರಕ್ತಪಿಪಾಸು ನಕ್ಸಲೀಯರಿಗೆ ತಕ್ಕ ಪಾಠ ಕಲಿಸಲೇ ಬೇಕು

01:58 AM Apr 06, 2021 | Team Udayavani |

ಛತ್ತೀಸ್‌ಗಢ‌ದ ಬಸ್ತಾರ್‌ ಅರಣ್ಯದಲ್ಲಿ ಭದ್ರತ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 22 ಯೋಧರು ವೀರ ಮರಣವನ್ನಪ್ಪಿದ್ದು, ಇದು ಇತ್ತೀಚಿನ ದಿನಗಳಲ್ಲಿ ಕೆಂಪು ಉಗ್ರರು ಎನ್ನಿಸಿಕೊಂಡಿರುವ ನಕ್ಸಲೀಯರು ನಡೆಸಿದ ಭೀಕರ ದಾಳಿಯಾಗಿದೆ. ಸುಮಾರು 400 ನಕ್ಸಲೀಯರು ಈ ದಾಳಿ ನಡೆಸಿದ್ದು, ಮಾನವೀಯತೆ ಮೀರಿ ರಕ್ಕಸರಂತೆ ನಕ್ಸಲೀಯರು ವರ್ತನೆ ಮಾಡಿದ್ದಾರೆ. ಅದರಲ್ಲೂ ಕೆಲವು ಯೋಧರ ಕೈಗಳನ್ನೇ ಕತ್ತರಿಸಿರುವಂಥದ್ದು ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

Advertisement

2020ರ ಮಾರ್ಚ್‌ನಲ್ಲಿ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಮಿನಾ³ ಅರಣ್ಯದಲ್ಲಿ ನಡೆದ ದಾಳಿಯಲ್ಲಿ 17 ವೀರಯೋಧರು ಹುತಾತ್ಮರಾಗಿದ್ದರು. ಆಗ 23 ನಕ್ಸಲೀಯರನ್ನೂ ಕೊಲ್ಲಲಾಗಿತ್ತು. ಇದಕ್ಕೂ ಒಂದು ವರ್ಷ ಹಿಂದೆ ಅಂದರೆ, 2019ರ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಗಡಚಿರೋಲಿ ಅರಣ್ಯದಲ್ಲಿ ನಕ್ಸಲರು 15 ಪೊಲೀಸರನ್ನು ಹತ್ಯೆ ಮಾಡಿದ್ದರು. ಆಗ ಐಇಡಿ ಸ್ಫೋಟಿಸಿದ ಪರಿಣಾಮ ಈ ಪೊಲೀಸರು ಹುತಾತ್ಮರಾಗಿದ್ದರು.

ಕಳೆದ ಎರಡು ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ನಕ್ಸಲೀಯರ ದಾಳಿ ಪ್ರಕರಣಗಳು ಇವಾಗಿವೆ. ಇವುಗಳನ್ನು ಬಿಟ್ಟರೆ ಈಗ, ಛತ್ತೀಸ್‌ಗಢದ ಅರಣ್ಯದಲ್ಲಿ ನಕ್ಸಲೀಯರು ಅಟ್ಟಹಾಸ ಮೆರೆದಿದ್ದಾರೆ. ಈ ದಾಳಿಯಲ್ಲಿ 30 ನಕ್ಸಲೀಯರನ್ನೂ ಹೊಡೆದುರುಳಿಸಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿದೆ. ಆದರೂ 22 ಮಂದಿ ಭದ್ರತ ಪಡೆಯ ಯೋಧರ ವೀರ ಮರಣವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಕ್ಸಲೀಯರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯನ್ನೂ ಇನ್ನಷ್ಟು ಬಲಗೊಳಿಸುವುದಾಗಿ ಹೇಳಿದ್ದಾರೆ. ರಾಯ್ಪುರಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಆರ್‌ಪಿಎಫ್ ಯೋಧರ ಆರೋಗ್ಯ ವಿಚಾರಿಸಿರುವ ಅವರು, ನಕ್ಸಲೀಯರ ವಿರುದ್ಧ ಗುಡುಗಿದ್ದಾರೆ.
ಗೃಹ ಸಚಿವರು ಹೇಳಿದ ಹಾಗೆ, ನಕ್ಸಲೀಯರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳದೇ ಬೇರೆ ದಾರಿ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ನಕ್ಸಲೀಯರ ಉಪಟಳದಿಂದ ಸಾವಿರಾರು ಸಾರ್ವಜನಿಕರು ಮತ್ತು ಪೊಲೀಸ್‌ ಸಿಬಂದಿ ಅಸುನೀಗಿದ್ದಾರೆ. ಕೊಲ್ಲುವುದನ್ನೇ ಕಾಯಕ ಮಾಡಿಕೊಂಡಿರುವ ನಕ್ಸಲೀಯರ ವಿರುದ್ಧ ತಾಳ್ಮೆ, ಸಹನೆ ಅಗತ್ಯವೇ ಇಲ್ಲ. ಅದರಲ್ಲೂ ಛತ್ತೀಸ್ಗಢ ಘಟನೆಯಲ್ಲಿ ನಕ್ಸಲೀಯರು ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ. ಹೀಗಾಗಿ ಇವರನ್ನು ಆದಷ್ಟು ಬೇಗನೇ ನಿಯಂತ್ರಿಸಬೇಕಾದದ್ದು ಸರಕಾರದ ಕರ್ತವ್ಯವಾಗಿದೆ.

ಇನ್ನು ಘಟನೆಯಾಗುತ್ತಿದ್ದಂತೆ, ಈಗ ಗುಪ್ತಚರ ವೈಫಲ್ಯದ ಬಗ್ಗೆ ಚರ್ಚೆಗಳಾಗುತ್ತಿವೆ. ನಕ್ಸಲೀಯರೇ ಭದ್ರತ ಪಡೆಗಳಿಗೆ ಸುಳ್ಳು ಮಾಹಿತಿ ನೀಡಿ ಕರೆಸಿಕೊಂಡು ಈ ದಾಳಿ ನಡೆಸಿವೆ ಎಂಬ ಅಂಶಗಳು ಬಹಿರಂಗವಾಗಿವೆ. ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಸ್ತಾವಿಸಿದ್ದು, ಗುಪ್ತಚರ ವೈಫಲ್ಯ ಏಕೆ ಆಯಿತು ಎಂದು ಪ್ರಶ್ನಿಸಿದ್ದಾರೆ. ಆದರೆ ಗುಪ್ತಚರ ವೈಫಲ್ಯವಾಗಿಲ್ಲ ಎಂದು ಸಿಆರ್‌ಪಿಎಫ್ ಸ್ಪಷ್ಟನೆಯನ್ನೂ ನೀಡಿದೆ. ಇದರ ನಡುವೆಯೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಇಂಥ ಸಮಯದಲ್ಲಿ ಇಂಥ ಬೆಳವಣಿಗೆಗಳು ಉತ್ತಮ ಕೂಡ ಅಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next