Advertisement

ಬದುಕಿಗೆ ಎಲ್ಲವನ್ನೂ ಕೊಟ್ಟ ಪ್ರಕೃತಿ ಮಾನವನಿಂದಲೇ ನಾಶ

07:29 AM Feb 20, 2019 | Team Udayavani |

ರಾಮನಗರ: ಮಾನವ ಸಂಕುಲಕ್ಕೆ ಬೇಕಾದನ್ನು ಕೊಟ್ಟ ಪ್ರಕೃತಿಯ ವಿನಾಶಕ್ಕೆ ಮಾನವನೇ ಮುಂದಾಗಿರುವುದರ ಬಗ್ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿಷಾದಿಸಿದರು.

Advertisement

ಇಲ್ಲಿನ ಜಾನಪದ ಲೋಕದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವದ ಅಂಗವಾಗಿ ಬಯಲು ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಸರದ ಬಗ್ಗೆ ಕಾಳಜಿವಹಿಸುವಂತೆ ಅವರು ಸಲಹೆ ನೀಡಿ, ವಿಜ್ಞಾನ, ತಂತ್ರಜ್ಞಾನದಿಂದ ನಮಗೆ ಹಲವು ರೀತಿಯ ಅನುಕೂಲಗಳಾಗಿವೆ. ಆದೇ ವಿಜ್ಞಾನ, ತಂತ್ರಜ್ಞಾನದ ದುರುಪಯೋಗದಿಂದಾಗಿ ಇಂದು ಪ್ರಕೃತಿ ನಾಶಕ್ಕೂ ಕಾರಣವಾಗಿದೆ ಎಂದು ಹೇಳಿದರು. 

ಇತ್ತೀಚಿನ ವರ್ಷಗಳಲ್ಲಿ ಜೀವನದಲ್ಲಿ ಅಶಿಸ್ತು ಹೆಚ್ಚಾಗಿದೆ. ನಿಸರ್ಗದ ನಿಯಮಗಳಿಗೆ ಬದ್ಧವಾಗಿ ಜೀವನ ನಡೆಸಿದರೆ ಮಾನವರು ಸುಮಾರು 300 ವರ್ಷಗಳು ಬದುಕುವುದು ಸಾಧ್ಯವಿದೆ. ಆದರೆ, ಪರಿಸರವನ್ನು ಧಿಕ್ಕರಿಸಿ, ದುರಾಭ್ಯಾಸಗಳನ್ನು ರೂಢಿಸಿಕೊಂಡು ಮಾನವ ತನ್ನ ಜೀವಿತಾವಧಿಯನ್ನು ಕಡಿಮೆ ಮಡಿಕೊಂಡಿದ್ದಾನೆ ಎಂದು ತಿಳಿಸಿದರು. 

ಜನಪದ ಸಾಹಿತ್ಯ, ಕಲೆಗಳಲ್ಲಿ ಉತ್ತಮವಾದ ಸಂದೇಶಗಳಿವೆ. ಜನಪದ ತಮ್ಮ ಸಂಸ್ಕೃತಿಯ ಬೇರಾಗಿದೆ. ಈ ಬೇರನ್ನು ಉಳಿಸಿಕೊಳ್ಳಬೇಕಾಗಿದೆ, ಜನಪದ ಸಾಹಿತ್ಯ, ಸಂಸ್ಕೃತಿ, ಕಲೆ ಮನುಷ್ಯನ ಜೀವನದ ಭಾಗವಾದಾಗ ಮಾತ್ರ ಉಳಿಯಲು ಸಾಧ್ಯ ಎಂದರು. 

ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಮಾತನಾಡಿ, ದೂರದರ್ಶನದ ಪ್ರಭಾವದಿಂದಾಗಿ ಗ್ರಾಮೀಣ ಭಾಗಗಳಲ್ಲೂ ಜನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ, ರೈತರ ಬದುಕು ಬರಡಾಗುತ್ತಿದೆ ಎಂದರು. 

Advertisement

ಪ್ರವಾಸಿ ಜಾನಪದ ಲೋಕೋತ್ಸವದಂತಹ ಕಾರ್ಯಕ್ರಮಗಳು ಪ್ರತಿ ತಾಲೂಕು ಮಟ್ಟದಲ್ಲೂ ನಡೆಯಬೇಕು ಎಂದು ಅವರು ಆಶಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಜಾನಪದ ಲೋಕ ಕಾರ್ಯನಿರತವಾಗಿದೆ ಎಂದರು. 

ವಿಧಾನ ಪರಿಷತ್‌ ಸದಸ್ಯರಾದ ಅ. ದೇವೇಗೌಡ, ಸಿ.ಎಂ.ಲಿಂಗಪ್ಪ, ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಜಾನಪದ ವಿದ್ವಾಂಸರಾದ ಡಾ.ಹಿ.ಶಿ.ರಾಮಚಂದ್ರೇಗೌಡ, ಪೊ›. ಜಯಪ್ರಕಾಶ ಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಮೇನೆಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ, ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜ, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಉಪಸ್ಥಿತರಿದ್ದರು. 
 
ಪ್ರಶಸ್ತಿ ಪುರಸ್ಕೃತರು: ಜೇನುಕುರುಬರ ಮರಿ (ಸೋರೆಬುರುಡೆ ಜನಪದ ಗೀತೆ ಕಲಾವಿದ), ಪಿ.ಕೆ.ರಾಜಶೇಖರ್‌, ಸಣ್ಣಮ್ಮ, ಹನುಮಕ್ಕ, ಚೌಡಪ್ಪದಾಸ, ಬುಗ್ಗಪ್ಪ ಮಾಸ್ಟರ್‌ ಬಿಬ್ಬಳ್ಳಿ, ಕುಟ್ಟಿ ಬಜಕೂಡ್ಲು, ಜಗದೀಶ್ಚಂದ್ರ ಅಂಚನ್‌, ಗುರುಮಲ್ಲಪ್ಪ, ಮಾಯಮ್ಮ, ಎಚ್‌.ಕೆ.ಕಾರಮಂಚಪ್ಪ, ಮಲ್ಲಕಾರಿ ಸಂಗಪ್ಪ ಕಟಗೇರಿ, ಹಾಸನ ರಘು, ಸದಾಶಿವ ಸಂಗಪ್ಪ ಯತ್ನಾಳ, ಸರೋಜಮ್ಮ,

ಹಸನ್ಸಾಬ್‌ ಮೌಲಾಸಾಬ್‌ ನದಾಫ್, ರೇವಣಪ್ಪ ನಿಂಗಪ್ಪ, ನಂಜಮ್ಮ , ವೀರಣ್ಣ ಕುಂಬಾರ, ಮಲ್ಲಯ್ಯ ಸ್ವಾಮಿ, ಎಚ್‌.ಬಿ. ಮಹಾದೇವ ಶೆಟ್ಟಿ, ಎಸ್‌.ಒ.ಗುರುಸಿದ್ಧ ನಾಯಕ, ಮುರುಗೇಶ ಹುಣಸಗಿ, ಕುಮಾರಯ್ಯ, ಶಿವಣ್ಣ, ಆರ್‌.ಎಂ.ಶಿವಮಲ್ಲೇಗೌಡ, ಕೆ.ಬಿ.ಸ್ವಾಮಿ, ಎಚ್‌.ಕೆ.ಪುಟ್ಟೇಗೌಡ, ಡಾ.ಎಸ್‌.ಎಂ.ಮುತ್ತಯ್ಯ ಅವರಿಗೆ 2019ನೇ ಸಾಲಿನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next