Advertisement

ಪಾರಂಪರಿಕ ಶಾಲೆಗೆ ಪರಿಸರ ಪ್ರೀತಿಯ ಸ್ವರೂಪ

10:45 PM Jul 05, 2019 | mahesh |

ಉಪ್ಪಿನಂಗಡಿ: ಬರೊಬ್ಬರಿ 183 ವರ್ಷಗಳ ಇತಿಹಾಸವಿರುವ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆ ಪುರಾತನ ಪಾರಂಪರಿಕ ಪಟ್ಟವನ್ನಲಂಕರಿಸಿದ ಬೆನ್ನಿಗೆ ಸರಕಾರ ಸುಣ್ಣ – ಬಣ್ಣ ಬಳಿಯಲು ಕೊಟ್ಟ 2.50 ಲಕ್ಷ ರೂ. ಅನುದಾನ ದಲ್ಲಿ ಶಾಲೆಯನ್ನು ಕಾನನದೊಳಗಿನ ಆಕರ್ಷಕ ವಿದ್ಯಾಲಯವನ್ನಾಗಿ ಶಾಲಾಭಿವೃದ್ಧಿ ಸಮಿ ರೂಪಿಸಿದೆ.

Advertisement

ಶತಮಾನವನ್ನು ಪೂರೈಸಿದ ಶಾಲೆ ಗಳಿಗೆ ಪಾರಂಪರಿಕ ಪಟ್ಟವನ್ನು ಸರಕಾರ ನೀಡಿದ್ದು, ಇದರನ್ವಯ 1836ರಲ್ಲಿ ಆಂಗ್ಲರ ಆಡಳಿತ ಕಾಲದಲ್ಲೇ ಸ್ಥಾಪನೆ ಯಾದ ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯೂ ಮಾನ್ಯತೆ ಪಡೆಯಿತು.

ಸರಕಾರ ಕೊಟ್ಟ 2.50 ಲಕ್ಷ ರೂ. ಅನುದಾನದಲ್ಲಿ 1.50 ಲಕ್ಷ ರೂ.ಗಳನ್ನು ಸುಣ್ಣ – ಬಣ್ಣಕ್ಕೆ, 70 ಸಾವಿರ ರೂ. ಶೌಚಾಲಯ ನಿರ್ಮಾಣಕ್ಕೆ, ಉಳಿದ 30 ಸಾವಿರ ರೂ. ಕಿಟಕಿ, ಬಾಗಿಲುಗಳ ದುರಸ್ತಿಗೆ ಎಂದು ವಿಂಗಡಿಸಲಾಗಿತ್ತು.

ಕಾನನದೊಳಗಿರುವ ಭಾವನೆ
ಶಾಲೆಯ ಗೊಡೆಯಲ್ಲಿ ಕಾಡಿನ ಚಿತ್ರವನ್ನು ಬಿಡಿಸಲಾಗಿದ್ದು, ವಿದ್ಯಾರ್ಥಿ ಗಳು ಸುಂದರವಾದ ಕಾಡಿನೊಳಗೆ ಪ್ರವೇಶಿಸುವ ಅನುಭವ ಪಡೆಯುತ್ತಾರೆ. ಪ್ರಾಕೃತಿಕ ಪರಿಸರ ಕಲಿಕೆಗೆ ಪೂರಕ ಹಾಗೂ ಆಹ್ಲಾದಕರ ವಾತಾವರಣ ನಿರ್ಮಿಸುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳಿದ ಹಿನ್ನೆಲೆಯಲ್ಲಿ ಗೋಡೆಗಳಲ್ಲಿ ಕಾಡಿನ ಚಿತ್ರಣ ರೂಪಿಸಲಾಗಿದೆ.

ಶಾಲೆಯ ಇನ್ನೊಂದು ಕಟ್ಟಡದಲ್ಲಿ ಐದು ದಶಕಗಳ ಹಿಂದೆ ಇದ್ದ ಶಾಲೆಯ ಕಟ್ಟಡದ ಚಿತ್ರವನ್ನು ಹಾಗೂ ಇತ್ತೀಚಿನ ಚಿತ್ರವನ್ನು ಆಕರ್ಷಕವಾಗಿ ಬಿಡಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು ಆಗಮಿಸಿದರೆ, ತಾವು ಕಲಿಯುತ್ತಿದ್ದ ದಿನಗಳನ್ನು ನೆನಪಿಸಿ, ಆನಂದ ಮೂಡಿಸುವಂತೆ ಈ ಚಿತ್ರವಿದೆ. ಕಟ್ಟಡದ ಗೋಡೆಗಳಲ್ಲಿ ಶಾಲೆಯ ಹಾಲಿ ಸ್ವರೂಪವನ್ನು ಚಿತ್ರಿಸಿದ್ದರಿಂದ ಶಾಲೆಯೊಳಗೊಂದು ಶಾಲೆ ಎಂಬ ಭಾವನೆ ಮೂಡುವಂತಿದೆ.

Advertisement

ಖಾಸಗಿ ಶಾಲೆಗಳಿಗಿಂತ ಮುಂದೆ
ಸರಕಾರದ ಹೊಸ ನೀತಿಯಂತೆ ಈ ಬಾರಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿದ್ದು, ಈ ಬಾರಿ 53 ವಿದ್ಯಾರ್ಥಿಗಳು ಒಂದನೇ ತರಗತಿಗೆ ಸೇರಿದ್ದಾರೆ. ಎಲ್ಲರಿಗೂ ಆಂಗ್ಲ ಮಾಧ್ಯಮದ ತರಗತಿಯ ಪ್ರವೇಶಾವಕಾಶ ನೀಡಲಾಗಿದೆ.

ಎಲ್ಕೆಜಿಗೆ 87 ಮಕ್ಕಳು
ಸರಕಾರದಿಂದ ಅನುಮತಿ ದೊರೆಯದೇ ಇದ್ದರೂ ಹೆತ್ತವರ ಆಗ್ರಹದಿಂದಾಗಿ ಎಸ್‌ಡಿಎಂಸಿ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ವಿಭಾಗಗಳನ್ನು ಆರಂಭಿಸಿದೆ. ಈ ಬಾರಿ ಎಲ್ಕೆಜಿಗೆ 87 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಓಇಲ್ಲಿನ ಮೂವರು ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ಎಸ್‌ಡಿಎಂಸಿಯೇ ವೇತನ ಪಾವತಿಸಬೇಕಾಗಿದೆ. ಹೀಗಾಗಿ, ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳ ಹೆತ್ತವರಿಂದ ನಿರ್ವಹಣ ಶುಲ್ಕವಾಗಿ ಮಾಸಿಕ 500 ರೂ.ಗಳನ್ನು ಸ್ವೀಕರಿಸಲಾಗುತ್ತಿದೆ. ಹೆತ್ತವರೂ ಸಂತೋಷದಿಂದಲೇ ಸಮ್ಮತಿಸಿ, ಎಸ್‌ಡಿಎಂಸಿಯ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ಪ್ರಸಕ್ತ ಶಾಲೆಯಲ್ಲಿ 11 ಸರಕಾರಿ ಶಿಕ್ಷಕರಿದ್ದು, ಎಸ್‌ಡಿಎಂಸಿ ಗೌರವಧನ ಪಾವತಿಸುತ್ತಿರುವ 6 ಶಿಕ್ಷಕರಿದ್ದಾರೆ.

ಸದಾಶಿವ ಶಿವಗಿರಿ ಕೈಚಳಕ
ಪಾರಂಪರಿಕ ಪಟ್ಟದ ಶಾಲೆಗೆ ಯಾವ ರೀತಿಯಲ್ಲಿ ವಿಶಿಷ್ಟ ಶೈಲಿಯ ಬಣ್ಣ ಬಳಿಯಬಹುದೆಂದು ಎಸ್‌ಡಿಎಂಸಿ ಅಧ್ಯಕ್ಷ ಮೊಯ್ದಿನ್‌ ಕುಟ್ಟಿ ಅವರು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಸದಾಶಿವ ಶಿವಗಿರಿ ಕಲ್ಲಡ್ಕ ಅವರ ಸಲಹೆ ಕೇಳಿದ್ದರು. ಮಕ್ಕಳ ಕಲಿಕೋತ್ಸಾಹ ಹೆಚ್ಚಿಸುವ ಕಾನನದ ಸ್ಥಿರ ಚಿತ್ರವನ್ನು ಬಿಡಿಸುವಂತೆ ಸದಾಶಿವ ಅವರು ಸಲಹೆ ನೀಡಿದ್ದಲ್ಲದೆ, ಅವುಗಳನ್ನು ಸೊಗಸಾಗಿ ಬಿಡಿಸುವ ಕಲಾವಿದರನ್ನೂ ಒದಗಿಸಿಕೊಟ್ಟರು. ಚಿತ್ರಗಳ ರಚನೆಗೆ ಮಾರ್ಗದರ್ಶನವನ್ನ ನೀಡಿದರು. ಹೀಗಾಗಿ, ಶಾಲೆಯ ಪಾರಂಪರಿಕ ಪಟ್ಟಕ್ಕೆ ಒಂದು ಘನತೆ ಪ್ರಾಪ್ತವಾಗಿದೆ.

ಮೊಯ್ದಿನ್‌ ಕುಟ್ಟಿ ಪರಿಶ್ರಮ
ಉಪ್ಪಿನಂಗಡಿ ಮಾದರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಮೊಯ್ದಿನ್‌ ಕುಟ್ಟಿ, ಶಾಲೆಯ ಅಭಿವೃದ್ಧಿಗಾಗಿ ಸತತವಾಗಿ ಪರಿಶ್ರಮಪಡುತ್ತಿದ್ದಾರೆ. ಅದಕ್ಕಾಗಿ ಹೋರಾಟವನ್ನೂ ಮಾಡುತ್ತಿದ್ದಾರೆ. ಸಮರ್ಪಣ ಭಾವದಿಂದ ದಾನಿಗಳ ಸಂಪರ್ಕ, ಶಾಲಾ ಮಕ್ಕಳ ಯೋಗಕ್ಷೇಮ ವಿಚಾರಣೆ, ಶಾಲೆಯ ಅಭಿವೃದ್ಧಿ ಕಾರ್ಯಗಳನ್ನು ಖುದ್ದಾಗಿ ಉಪಸ್ಥಿತರಿದ್ದು ನಿರ್ವಹಿಸುತ್ತಿರುವುದು ಅವರ ಶಾಲಾಪ್ರೀತಿಯ ದ್ಯೋತಕ. ಸರಕಾರಿ ಶಾಲೆ ಎಂದರೆ ಬಡವರ ಮಕ್ಕಳ ಶಾಲೆಯಲ್ಲ ಎಂಬುದನ್ನು ಅವರು ನಿರೂಪಿಸಿದ್ದು, ಪೇಟೆಯ ಶ್ರೀಮಂತರ ಮಕ್ಕಳೂ ಇಲ್ಲಿ ಸೇರ್ಪಡೆಗೊಂಡು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

2.5 ಲಕ್ಷ ರೂ. ಬಿಡುಗಡೆ

ಜಿಲ್ಲೆಯಲ್ಲಿ ಮೂರು ಶಾಲೆಗಳನ್ನು ಸರಕಾರ ಆಯ್ಕೆ ಮಾಡಿಕೊಂಡಿದೆ. ಈ ಪೈಕಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರಕಾರಿ ಉನ್ನತೀಕರಿಸಿದ ಶಾಲೆಯೂ ಒಂದು. ಸರಕಾರ ಈಗಾಗಲೇ 2.5 ಲಕ್ಷ ರೂ.ಗಳನ್ನು ಪಾರಂಪರಿಕ ಯೋಜನೆಯಡಿ ಬಿಡುಗಡೆಗೊಳಿಸಿದ್ದು, ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿಗಳು ಸಂಗ್ರಹಿಸಿದ ದೇಣಿಗೆಯಲ್ಲಿ ಈ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಇಂತಹ ಯೋಜನೆಯನ್ನು ಆಯಾ ಶಾಲೆಗಳ ಬೇಡಿಕೆಗೆ ಅನುಗುಣವಾಗಿ ಬಳಸಿಕೊಂಡರೆ ಉತ್ತಮ.
– ಕೃಷ್ಣ ಪ್ರಸಾದ್‌ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಎಂ.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next