Advertisement

ಇಷ್ಟಾರ್ಥ ಪೂರೈಸುವ ಜಗದೊಡೆಯ ಸೀಮಿನಾಗನಾಥ

11:39 AM Nov 22, 2018 | Team Udayavani |

ಹುಮನಾಬಾದ: ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸೀಮಿನಾಗನಾಥ ದೇವರು ಇಷ್ಟಾರ್ಥ ಪೂರೈಸುವ ಮೂಲಕ ಸಕಲ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಸೀಮಿನಾಗನಾಥ ನಂಬಿದ ಭಕ್ತರನ್ನು ಕೈಬಿಡದಾತ ಎಂಬ ನಂಬಿಕೆ ಭಕ್ತರದು. ದೇವರ ಪವಾಡದಿಂದಾಗಿ ನಾಗನಾಥ ಇಲ್ಲಿ ಭಕ್ತರ ಆರಾಧ್ಯ ದೈವವಾಗಿ ನೆಲೆ ನಿಂತಿದ್ದಾರೆ. ಸಂತಾನ ಪ್ರಾಪ್ತಿ ನಂತರ ಹರಕೆ ತೀರಸದದಕ್ಕೆ ನಾಗನಾಥ ಕೊಟ್ಟ ಶಿಕ್ಷೆ, ದೇವಸ್ಥಾನದಲ್ಲಿನ ಬೆಳ್ಳಿ ನಾಗಮೂರ್ತಿ ಕದ್ದು ಸುಳ್ಳು ಹೇಳಿದ್ದ ಅರ್ಚಕರಿಗೆ ಆದ ಶಿಕ್ಷೆ, ದೇವರ ಗಂಟೆ ಕದ್ದ ಸಂಬಣ್ಣ ಅನುಭವಿಸಿರುವುದು ಹೀಗೆ ನೂರಾರು ಪವಾಡಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.

Advertisement

ಕೇವಲ ಗರ್ಭ ಗುಡಿಗೆ ಸೀಮಿತವಾಗಿದ್ದ ದೇವಸ್ಥಾನವನ್ನು ಭಕ್ತರ ದೇಣಿಯಿಂದಲೇ ಬೃಹತ್‌ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಾಗಿದೆ. 2003ರಲ್ಲಿ ಜಿಪಂ ಸದಸ್ಯರ ಅನುದಾನದಲ್ಲಿ ಭಕ್ತರ ವಿಶ್ರಾಂತಿಗಾಗಿ ಉದ್ಯಾನ ಸಹ ನಿರ್ಮಿಸಲಾಗಿದೆ.

ಭಕ್ತರ ಸಂಖ್ಯೆ ಗಮನಿಸಿದ ಸರ್ಕಾರ ಈ ದೇವಸ್ಥಾನವನ್ನು 2008ರಲ್ಲಿ ಮುಜರಾಯಿ ಇಲಾಖೆಗೆ ತೆಗೆದುಕೊಂಡಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಆರ್‌ಐಡಿಎಲ್‌ ಅಧ್ಯಕ್ಷರಾಗಿದ್ದ ಶಾಸಕ ರಾಜಶೇಖರ ಬಿ. ಪಾಟೀಲ ಅವರು ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣ ಸಂಬಂಧ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರತಿನಿತ್ಯ ಅನ್ನ ದಾಸೋಹ ವ್ಯವಸ್ಥೆ ಇದೆ.

ನಾಗೇಶ್ವರ ಮಾಲಾಧಾರಿಗಳು: ಸೀಮಿನಾಗನಾಥ ದೇವಸ್ಥಾನದಲ್ಲಿ 2004ರಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿ ಮಾದರಿಯಲ್ಲೇ ನಾಗೇಶ್ವರ ಮಾಲಾಧಾರಿಗಳ ಭಕ್ತಿ ಸೇವೆ ಆರಂಭವಾಯಿತು. 2004ರಲ್ಲಿ ಕೇವಲ 55 ವೃತಾಧಾರಿಗಳಿಂದ ಆರಂಭವಾದ ಮಾಲಾಧಾರಿಗಳ ಸಂಖ್ಯೆ ಈಗ 555ಕ್ಕೆ ತಲುಪಿದೆ.

ಮಾಲಾಧಾರಿಗಳಲ್ಲಿ ಹಲವರಿಗೆ ಸರ್ಕಾರಿ ನೌಕರಿ ಲಭಿಸಿರುವುದು ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಭಕ್ತಾದಿಗಳು. ಅಯ್ಯಪ್ಪಸ್ವಾಮಿ ಭಕ್ತರು ಕಪ್ಪು ವಸ್ತ್ರ ಧರಿಸಿದರೇ ಶ್ರೀ ನಾಗೇಶ್ವರ ಮಾಲಾಧಾರಿಗಳು (ಚಾಕಲೆಟ್‌)
ಕೆಂಪು ಕಂದು ಬಣ್ಣದ ವಸ್ತ್ರ ಬಳಸುತ್ತಾರೆ. 

Advertisement

ವಾರ ಕಾಲ ನಡೆಯುವ ಏಕೈಕ ಜಾತ್ರೆ: ಹೈ. ಕ ಭಾಗದ ನಾಗೇಶ್ವರ ದೇವಸ್ಥಾನದಲ್ಲಿ ಒಂದು ವಾರ ಕಾಲ ಜಾತ್ರೆ ನಡೆಯುವುದು ಕೇವಲ ಹಳ್ಳಿಖೇಡ(ಬಿ) ಸೀಮಿನಾಗನಾಥ ದೇವಸ್ಥಾನದಲ್ಲಿ ಮಾತ್ರ. ಜತೆಗೆ ರಥೋತ್ಸವ, ಪಲ್ಲಕ್ಕಿ ಒಳಗೊಂಡಂತೆ ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿ ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ

ದಶಕ ಹಿಂದೆ ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟ ಹಳ್ಳಿಖೇಡ(ಬಿ) ಸೀಮಿನಾಗನಾಥ ಜಾತ್ರೆ ನ.22ರಿಂದ 29ರ ವರೆಗೆ ನಡೆಯಲಿದೆ. ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರು, ಬೀದಿ ವಿದ್ಯುತ್‌ ದೀಪ, ಸ್ವತ್ಛತೆ ವ್ಯವಸ್ಥೆ ಸೇರಿದಂತೆ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಜಾತ್ರೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಿಕೊಂಡು ಬರುವಂತೆ ದೇವಸ್ಥಾನ ಕಾರ್ಯದರ್ಶಿ ಮತ್ತು ಇತರೆ ಸಿಬ್ಬಂದಿಗೆ ಸೂಚಿಸಲಾಗಿದೆ.  
 ಜ್ಞಾನೇಂದ್ರ ಗಂಗವಾರ, ಉಪವಿಭಾಗಾಧಿಕಾರಿ, ಬಸವಕಲ್ಯಾಣ

ಭಕ್ತರ ಇಷ್ಟಾರ್ಥ ಪೂರೈಸುವ ನಾಗೇಶ್ವರ ದೇವಸ್ಥಾನದಲ್ಲಿ 8 ದಶಕಕ್ಕೂ ಅಧಿಕ ಕಾಲ ನಮ್ಮ ತಂದೆ ಬಸಯ್ಯಸ್ವಾಮಿ ಹಾಲಾ
ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜೀವಿತಾವಧಿಯಲ್ಲೇ ನಾಗದೋಷ ಪೂಜೆಯ ಪ್ರತಿಯೊಂದು ವಿಧಿವಿಧಾನಧಾರೆ ಎರೆದಿದ್ದಾರೆ. ಕೇವಲ ಹಿಂದೂಗಳು ಮಾತ್ರವಲ್ಲದೇ ಎಲ್ಲ ಸಮುದಾಯದ ಜನರು ಹರಕೆ ಹೊರುತ್ತಾರೆ.

ಪರಿಹಾರವಾದ ನಂತರ ತಾವೇ ಉತ್ಸಾಹದಿಂದ ಬಂದು ತಪ್ಪದೇ ಹರಕೆ ತೀರಿಸುತ್ತಾರೆ. ಅಂತೆಯೇ ಈಗಲೂ ಪ್ರತಿ ಶನಿವಾರ ಕನಿಷ್ಠ  25-30ಜನ ನಾಗದೋಷ ಪೂಜೆ ನೆರವೇರುತ್ತವೆ. ಸಾವಿರಾರು ಭಕ್ತರು ಬಂದು ದರ್ಶನಾಶೀರ್ವಾದ ಪಡೆಯುತ್ತಾರೆ. 
 ಡಾ| ಅಶೋಕ ಬಿ. ಹಾಲಾ, ಪ್ರಧಾನ ಅರ್ಚಕರು, ಸೀಮಿನಾಗನಾಥ ದೇವಸ್ಥಾನ

„ಶಶಿಕಾಂತ ಕೆ. ಭಗೋಜಿ

Advertisement

Udayavani is now on Telegram. Click here to join our channel and stay updated with the latest news.