Advertisement

ಜಿಲ್ಲೆಯಲ್ಲಿ ಕೋಟ್ಪಾ ಅನುಷ್ಠಾನ ಹೆಸರಿಗೆ ಮಾತ್ರ

07:00 AM Apr 01, 2018 | |

ಸುಳ್ಯ: ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣಕ್ಕೆಂದು (ಕೋಟ್ಪಾ) ಅಳವಡಿಸಿದ ಫಲಕದ ಮುಂದೆಯೇ ಸಿಗರೇಟು ಎಳೆದು ಧಮ್‌ ಬಿಟ್ಟರೂ ತಂಬಾಕು ಉತ್ಪನ್ನಗಳನ್ನು ಜಗಿದು ನಡು ರಸ್ತೆಯಲ್ಲಿಯೇ ಉಗುಳಿದರೂ ರಸ್ತೆ ಬದಿಯಲ್ಲಿ ನಿಂತು ಮಾರಾಟ ಮಾಡಿದರೂ ವ್ಯಕ್ತಿಗೆ ಏನೂ ಆಗುವುದಿಲ್ಲ ಅನ್ನುವ ಪರಿಸ್ಥಿತಿ ಕೋಟ್ಪಾ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ರಾಜ್ಯದ ನಾಲ್ಕನೇ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ!

Advertisement

ದಕ್ಷಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ಕೋಟಾ³ ಕಾಯಿದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಕೋಟಾ³ ಅನುಷ್ಠಾನಿತ ಜಿಲ್ಲೆ ಎಂಬ ಹೆಗ್ಗಳಿಕೆ ಕಡತದಲ್ಲೇ ಬಂಧಿ ಆಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆ, ಮಾರಾಟ ನಿಯಂತ್ರಣಕ್ಕೆ ಸಿಕ್ಕಿಲ್ಲ. ಅದು ಎಗ್ಗಿಲ್ಲದೆ ಸಾಗುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದವರು ಮೌನವಾಗಿದ್ದಾರೆ.

ನಾಲ್ಕನೇ ಜಿಲ್ಲೆ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಕೋಟ್ಪಾ ಯಶಸ್ಸು ಪಡೆದ ಕಾರಣ ನಾಲ್ಕನೇ ಜಿಲ್ಲೆಯಾಗಿ 3ವರ್ಷಗಳ ಹಿಂದೆ ದಕ್ಷಿಣ ಕನ್ನಡವನ್ನು ಆಯ್ಕೆ ಮಾಡಲಾಗಿತ್ತು. ಈ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಕೋಟ್ಪಾ ಅನುಷ್ಠಾನಿತ  ಜಿಲ್ಲೆಯನ್ನಾಗಿಸಲು ಉದ್ದೇಶಿಸಲಾಗಿತ್ತು.

ಆರಂಭದ ಹೆಜ್ಜೆಯಾಗಿ ಪುತ್ತೂರಿನಲ್ಲಿ 10 ದಿನಗಳ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ತಂಬಾಕು ಸೇವನೆ ಮಾಡುವವರನ್ನು ಪತ್ತೆ ಹಚ್ಚಿ 65 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅನಂತರ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಜಾಗೃತಿ ಮೂಡಿಸುವ ಸಭೆ ನಡೆಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಕಮಿಷನರೇಟ್‌ ವ್ಯಾಪ್ತಿಯೊಳಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದರಿಸಲಾಗಿತ್ತು.

ಎಚ್ಚರಿಕೆ ಫಲಕ: ಸಾರ್ವಜನಿಕ ಸ್ಥಳಗಳಲ್ಲಿ, ಸರಕಾರಿ ಕಚೇರಿ, ಹೊಟೇಲ್‌, ಶಿಕ್ಷಣ ಸಂಸ್ಥೆ, ಬಸ್‌ ನಿಲ್ದಾಣ ಮೊದಲಾದೆಡೆ ಈ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ಕಂಡರೆ ಕರೆ ಮಾಡಿ ಎಂದು ಪೊಲೀಸರ ನಂಬರ್‌ ಅನ್ನು ದಾಖಲಿಸಲಾಗಿತ್ತು. ಮೊದಲ ವರ್ಷದಲ್ಲಿ ಸಾಕಷ್ಟು ಫಲಕ ಕಂಡರೂ ಬಳಿಕ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇತ್ತ ಕರೆ ಮಾಡುವವರೂ ಇಲ್ಲ, ಅತ್ತ ದಾಳಿ ನಡೆಸುವವರೂ ಇಲ್ಲ; ಹೀಗಾಗಿ ಕೋಟಾ³ ಕಟ್ಟುನಿಟ್ಟಿನ ಜಾರಿ ಪ್ರಯತ್ನ ಕೇವಲ ಫಲಕಕ್ಕೆ ಸೀಮಿತವಾಗಿದೆ.

Advertisement

ದಾಳಿ ಇಲ್ಲ!: ಇಲ್ಲಿ ದಾಳಿ ಮಾಡುವವರು ಯಾರೆಂಬ ಜಿಜ್ಞಾಸೆ ಇದೆ. ಕಾಯಿದೆ ಅನುಷ್ಠಾನಕ್ಕೆ 18 ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು. ಮುಖ್ಯವಾಗಿ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್‌, ಕಂದಾಯ ಇಲಾಖೆಗೆ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು. ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ನಡೆಯುವ ಅಪರಾಧ ಸಮೀಕ್ಷೆ ಸಭೆಯಲ್ಲಿ ಕೋಟ್ಪಾ ಅನುಷ್ಠಾನ ವರದಿ ಲಗತ್ತಿಸಬೇಕು ಎಂಬ ಆದೇಶವೂ ಇತ್ತು. ಆದರೆ ಪೊಲೀಸರು ನಮ್ಮ ಜತೆಗೆ ಬಂದರೆ ನಾವು ದಾಳಿ ನಡೆಸಿ ದಂಡ ವಿಧಿಸಬಹುದು ಎನ್ನುತ್ತದೆ ಆರೋಗ್ಯ ಇಲಾಖೆ. ಇನ್ನು ಉಳಿದ ಇಲಾಖೆಗಳಿಗೆ ನಿಯಂತ್ರಣಕ್ಕೆ  ಸಂಬಂಧಿಸಿ ತಮ್ಮ ತಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ಮಾಹಿತಿಯೇ ಇಲ್ಲ.

ದಂಡದ ವಿವರ: ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯ ತಾಲೂಕುಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳದಲ್ಲಿ 2015 ರಲ್ಲಿ ಒಟ್ಟು 2203, 2016ರಲ್ಲಿ 554, 2017ರಲ್ಲಿ 2,433 ಮಂದಿಗೆ ದಂಡ ವಿಧಿಸಲಾಗಿತ್ತು. ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ 2015ರಲ್ಲಿ 2,711, 2016ರಲ್ಲಿ 9,235 ಮತ್ತು 2017ರಲ್ಲಿ 6,492 ಮಂದಿಗೆ ದಂಡ ವಿಧಿಸಲಾಗಿತ್ತು. 

ಧೂಮಮುಕ್ತಿ ಇಲ್ಲ!: ಜಿಲ್ಲಾ ಎಸ್‌ಪಿ ವ್ಯಾಪ್ತಿ ಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾದ ಪ್ರಕರಣ ಹೆಚ್ಚಳಗೊಂಡಿದ್ದರೆ, ಕಮಿಷನರೆಟ್‌ ವ್ಯಾಪ್ತಿಯಲ್ಲಿ ಇಳಿಕೆಗೊಂಡಿದೆ. ಆದರೆ ಈ ಎರಡೂ ವ್ಯಾಪ್ತಿಯಲ್ಲಿ ಧೂಮಪಾನಿಗಳು, ತಂಬಾಕು ಸೇವನೆ ಮಾಡುವ ವರು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ತಂಬಾಕು ಸೇವನೆ ನಿರಾತಂಕವಾಗಿ ಸಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿಯೂ ತಂಬಾಕು ಉತ್ಪನ್ನ ಮಾರಾಟ ವ್ಯವಸ್ಥಿತವಾಗಿ ಸಾಗಿದೆ. ಇದು ನಿಯಂತ್ರಣಕ್ಕೆ ಬಂದಿಲ್ಲ ಅನ್ನುವುದು ವಾಸ್ತವ.

ಏನಿದು ಕೋಟ್ಪಾ?
ಕೋಟ್ಪಾ ಎಲ್ಲೆಡೆ ಜಾರಿಯಲ್ಲಿದ್ದರೂ ರಾಜ್ಯದ ಗದಗ, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳನ್ನು ಕೋಟ್ಪಾ ಅನುಷ್ಠಾನಿತ ಜಿಲ್ಲೆ ಎಂದು ಘೋಷಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ತಂಬಾಕು, ಸಿಗರೇಟು ಇತ್ಯಾದಿಗಳ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇವನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಾಗಿ ತಡೆಯುವ ಪ್ರಯತ್ನ ಸಿಗರೇಟು ಮತ್ತು ಅನ್ಯ ತಂಬಾಕು ಉತ್ಪನ್ನಗಳ (ನಿಷೇಧ) ಕಾಯಿದೆ “ಕೋಟ್ಪಾ’. ಅಂತಹ ಪ್ರಕರಣ ಕಂಡುಬಂದರೆ ಅದಕ್ಕೆ ಈ ಕಾನೂನಿನ ಅಡಿಯಲ್ಲಿ ದಂಡ, ಶಿಕ್ಷೆ ವಿಧಿಸಬಹುದಾಗಿದೆ.

ದಂಡ ಇದೆ; ದಂಡಿಸುವವರಿಲ್ಲ!
ಕಾಯಿದೆ ಅನ್ವಯ ನಿಷೇಧಿತ ಎಂದು ಗುರುತಿಸಲಾದ ಸಾರ್ವಜನಿಕ ಸ್ಥಳಗಳಿಂದ  100 ಮೀ. ಒಳಗಡೆ ಇಂತಹ ತಂಬಾಕು ಉತ್ಪನ್ನಗಳನ್ನು ಬಳಸಿದರೆ 200 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಅವಕಾಶ ಇದೆ. ಇಲ್ಲಿ ಮುಖ್ಯವಾದ ಸಂಗತಿ ಅಂದರೆ ದಂಡ ಇದ್ದರೂ ದಂಡಿಸುವವರು ಇಲ್ಲ. ಹಾಗಾಗಿ ಇಲ್ಲಿ ದಂಡ ವಸೂಲಿಯೇ ಬಹುತೇಕ ಸ್ಥಾಗಿತ್ಯದತ್ತ ಸಾಗಿದೆ ಅನ್ನುತ್ತಾರೆ ಹಲವರು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next