ಶ್ರೀ ವಿಜಯ ಪ್ರಧಾನ ವೇದಿಕೆ: ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಚಿವ ಸಂಪುಟ ವಿಸ್ತರಣೆಯದ್ದೇ ಮಾತು. ಕನ್ನಡ ಸಾಹಿತ್ಯ ಸಮ್ಮೇಳನವೂ ಅದಕ್ಕೆ ಹೊರತಾಗಲಿಲ್ಲ. ಪ್ರಧಾನ ವೇದಿಕೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲೇ ಉತ್ತರ ಕರ್ನಾಟಕಕ್ಕೆ ಕನಿಷ್ಠ 17 ಸಚಿವಸ್ಥಾನ ನೀಡಲೇಬೇಕು ಎಂಬ ಒತ್ತಾಯ ಕೇಳಿಬಂತು. ಅದರ ಜೊತೆಗೆ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿರುವುದಕ್ಕೂ ಟೀಕೆ ಕೇಳಿಬಂದವು.
ಹೆಸರು ಬದಲಾವಣೆಯಿಂದ ಏನು ಸಾಧಿಸಿದಂತಾಗುತ್ತದೆ? ಹಳೆಯ ಮದ್ಯವನ್ನು, ಹೊಸ ಬಾಟಲಿಯಲ್ಲಿ ತುಂಬಿದಂತಾಗುತ್ತದೆ ಅಷ್ಟೇ ಎಂದು ಡಾ.ಶ್ರೀನಿವಾಸ ಸಿರನೂರಕರ ಹೇಳಿದರು. ಕೆ.ನೀಲಾ ಅವರು, ಇತ್ತೀಚೆಗೆ ಹೆಸರು ಬದಲಾಯಿಸುವ ಹುಚ್ಚು ಶುರುವಾಗಿದೆ ಎಂದು ವ್ಯಂಗ್ಯವಾಡಿದರು. 371 ಜೆ ಅನುಷ್ಠಾನ ಮತ್ತು ಅಡಚಣೆಗಳು ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದ ಲೇಖಕ ಡಾ.ಶ್ರೀನಿವಾಸ ಸಿರಕೂರಕರ,
ಡಾ. ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ರಾಜ್ಯಸಂಪುಟದ ಶೇ.50ರಷ್ಟು ಸ್ಥಾನ ನೀಡಬೇಕು ಎಂದು ವರದಿ ನೀಡಿದೆ. ಅಂದರೆ ಕನಿಷ್ಠ 17 ಸ್ಥಾನಗಳು ಈ ಭಾಗಕ್ಕೆ ಸಿಗಬೇಕಾಗುತ್ತದೆ. ಆದರೆ ವಿವಿಧ ರಾಜಕೀಯ ಪಕ್ಷಗಳ ಅನಿವಾರ್ಯತೆ ಕಾರಣದಿಂದ ಅದು ಕೈಗೂಡುತ್ತಿಲ್ಲ. ಈಗಂತೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಕೇವಲ ಒಂದು ಜಿಲ್ಲೆಗೆ ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ ಎಂದು ಹೇಳಿದರು.
ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಲ್ಯಾಣ ಕರ್ನಾಟಕ ಭಾಗ 50 ವರ್ಷಗಳಷ್ಟು ಹಿಂದುಳಿಯಲು ಕಾರಣ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಭಾಗದ ತಾಲೂಕುಗಳೇ ಕೊನೆ ಸ್ಥಾನದಲ್ಲಿವೆ. ರಾಜ್ಯ ಸಂಪೂರ್ಣ ಏಕ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಲು ಪ್ರಾದೇಶಿಕ ಅಭಿವೃದ್ಧಿ ನೀತಿ ರೂಪಿಸುವುದು ಹೆಚ್ಚು ಸಮಂಜಸ ಎಂದು ಸಿರನೂರಕರ ಆಗ್ರಹಿಸಿದರು. ಕೆ.ನೀಲಾ, ಡಾ.ವೀರಣ್ಣ ದಂಡೆ, ಡಾ.ಅಮರೇಶ ಯತಗಲ್ ವಿಷಯ ಮಂಡನೆ ಮಾಡಿದರು. ಮಾಜಿ ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.
* ಹಣಮಂತರಾವ ಭೈರಾಮಡಗಿ