Advertisement

ನಾಡಿನ ಹೆಸರು ಜಗತ್ತಿನಾದ್ಯಂತ ಹರಡಲಿ

10:32 AM Nov 21, 2017 | Team Udayavani |

ಕಲಬುರಗಿ: ಕರುನಾಡಿನ ಹೆಸರು ಜಗತ್ತಿನಾದ್ಯಂತ ಹರಡುವಂತೆ ನಮ್ಮ ಕ್ರೀಡಾಪಟುಗಳು ಮಾಡಬೇಕು. ಅದಕ್ಕಾಗಿ ಇಂತಹ ವೇದಿಕೆಗಳನ್ನು ನಿರ್ಮಾಣ ಮಾಡಿ ಅವರಿಗೆ ತಮ್ಮ ಪ್ರತಿಭೆ ಗಟ್ಟಿಗಳಿಸಿಕೊಳ್ಳಲು ಉತ್ತಮ ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹೇಳಿದರು.

Advertisement

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಿಂದ ಆರಂಭವಾದ ರಾಜ್ಯ ಮಟ್ಟದ 14 ಮತ್ತು 17 ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಲಾನ್‌ ಟೆನಿಸ್‌ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ ಸೋಲು- ಗೆಲುವು ಪ್ರಮುಖ ಪಾತ್ರ ವಹಿಸುವುದಿಲ್ಲ. ತಮ್ಮ ಕ್ರೀಡೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಮುಂದುವರಿಸಿದಲ್ಲಿ ಒಂದಲ್ಲ ಒಂದು ದಿನ ಜಯಸಿಕ್ಕೆ ಸಿಗುತ್ತದೆ. ಅಲ್ಲಿಯವರೆಗೂ ಪರಿಶ್ರಮ ಪಡಬೇಕು.
ತರಬೇತಿ, ಏಕಾಗ್ರತೆ ಮತ್ತು ಶ್ರಮದಿಂದ ಉತ್ತಮ ಕ್ರೀಡಾಪಟು ಹೊರಬರುತ್ತಾನೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾರ ಮಲಾಜಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಪಾಟೀಲ, ಕ್ರೀಡೆಗಳು ಶಿಕ್ಷಣದ ಒಂದು ಪ್ರಮುಖ ಭಾಗವಾಗಿದೆ. ಈ ಕ್ಷೇತ್ರಕ್ಕೆ ಶಿಕ್ಷಣ ಇಲಾಖೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆ. ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ಅಗತ್ಯ ಮೂಲ ಸೌಕರ್ಯಕಲ್ಪಿಸಲಾಗುತ್ತಿದ್ದು, ಕ್ರೀಡಾಪಟುಗಳನ್ನು ಕ್ರೀಡಾಂಗಣಕ್ಕೆ ಕರೆ ತರಲು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ಕ್ರೀಡಾಪಟುಗಳ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಯಾವುದೇ ಕುಂದು-ಕೊರತೆಗಳನ್ನು ನೋಡಿಕೊಳ್ಳಲು 40 ಜನ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗಿದೆ. ರಾಜ್ಯದ 34 ಜಿಲ್ಲೆಗಳನ್ನು ಸಂಪರ್ಕಿಸಿ ಇಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೋರಲಾಗಿತ್ತು. ಆದರೆ, ಕ್ರೀಡಾಕೂಟದಲ್ಲಿ ಹೆಚ್ಚು ತಂಡಗಳು ಭಾಗವಹಿಸಿಲ್ಲ ಎಂದು ಹೇಳಿದರು.

Advertisement

ಜಿಲ್ಲಾ ಕ್ರೀಡಾಧಿಕಾರಿ ಟಿ. ರವೀಂದ್ರಕುಮಾರ, ದೈಹಿಕ ಶಿಕ್ಷಣಾಧಿಕಾರಿ ವಿಜಯಕುಮಾರ, ತಾಲೂಕು ಮಟ್ಟದ ದೈಹಿಕಶಿಕ್ಷಣಾ ಧಿಕಾರಿಗಳಾದ ಎಂ.ಜಿ. ಬಿರಾದಾರ, ಎ.ಎಸ್‌. ವಗ್ಗಿ, ವೀರಭದ್ರಪ್ಪ ದೊಡ್ಡಮನಿ, ಎಸ್‌.ಎಂ. ಚೌಧರಿ, ನೀಲಕಂಠಪ್ಪ, ಜಿಲ್ಲಾ ಗ್ರೇಡ್‌ ಒನ್‌ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಾ| ಶಿವಲಿಂಗಪ್ಪ ಗೌಳಿ, ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ, ಶಿವಶರಣಪ್ಪ ಮಂಠಾಳೆ ಪಾಲ್ಗೊಂಡಿದ್ದರು.

ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ರಟಕಲ್‌ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ. ಬಿರಾದಾರ ವಂದಿಸಿದರು. ಕ್ರೀಡಾ
ಕೋಚ್‌ ತರಬೇತಿದಾರ ವಿಶ್ವನಾಥ ಮತ್ತಿತರರು ಕ್ರೀಡಾಕೂಟ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next