Advertisement

Paris ಭಾರತದ ಪ್ಯಾರಾ ದಿಗ್ವಿಜಯ: ಹೆಚ್ಚಿದ ಆತ್ಮವಿಶ್ವಾಸ

11:20 PM Sep 08, 2024 | Team Udayavani |

ಪ್ಯಾರಿಸ್‌ನಲ್ಲಿ 11 ದಿನಗಳ ಪ್ಯಾರಾಲಿಂಪಿಕ್ಸ್‌ ಕೂಟ ಮುಗಿದಿದೆ. 17ನೇ ಪ್ಯಾರಾಲಿಂಪಿಕ್ಸ್‌ ಭಾರತದ ಪಾಲಿಗೆ ಅತ್ಯಂತ ಆಶಾದಾಯಕ, ಭಾರೀ ಭರವಸೆ ಹುಟ್ಟಿಸಿದ ಕೂಟ. ಒಟ್ಟು 29 ಪದಕಗಳನ್ನು ಗೆದ್ದಿರುವ ಭಾರತೀಯ ದಿವ್ಯಾಂಗ ಕ್ರೀಡಾಪಟುಗಳು ಹಿಂದೆಂದೂ ಮಾಡದ ಸಾಧನೆ ಮಾಡಿದ್ದಾರೆ.

Advertisement

2016ರ ವರೆಗೆ ಹಿಂದಿನ ಅಷ್ಟೂ ಕೂಟಗಳು ಸೇರಿ ಭಾರತ ಗೆದ್ದಿದ್ದು ಕೇವಲ 12 ಪದಕ. ಟೋಕಿಯೋದಲ್ಲಿ ಪದಕಗಳ ಸಂಖ್ಯೆ 19ಕ್ಕೇರಿತು. ಈ ಬಾರಿಯಂತೂ 29 ಪದಕ ಗಳನ್ನು ಭಾರತೀಯರು ಗೆದ್ದಿದ್ದಾರೆ. ಪ್ಯಾರಿಸ್‌ಗೆ ತೆರಳುವ ಮುನ್ನ ಭಾರತೀಯರು 25 ಪದಕಗಳನ್ನು ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಈ ನಿರೀಕ್ಷೆಯನ್ನೂ ಮೀರಿದ ಸಾಧನೆ ಮಾಡಿದ್ದು ಭವಿಷ್ಯದಲ್ಲಿ ದೇಶದ ಕ್ರೀಡಾಪಟುಗಳು ಅತ್ಯುನ್ನತ ಸಾಧನೆ ಮಾಡಲಿದ್ದಾರೆ ಎನ್ನುವುದಕ್ಕೆ ಸಾಕ್ಷಿ.

ಈ ಬಾರಿ ಒಲಿಂಪಿಕ್ಸ್‌ಗೆ ಹೋಲಿಸಿದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ್ದು ಅದ್ಭುತ ಸಾಧನೆ. ಒಲಿಂಪಿಕ್ಸ್‌ನಲ್ಲಿ ಒಂದೂ ಚಿನ್ನ ಗೆಲ್ಲದ ಭಾರತ 1 ಬೆಳ್ಳಿ, 5 ಕಂಚಿನ ಪದಕಗಳೊಂದಿಗೆ ಒಟ್ಟು 6 ಪದಕ ಗಳಿಸಿತ್ತು. ಹಿಂದಿನ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ, 4 ಕಂಚುಗಳೊಂದಿಗೆ 7 ಪದಕ ಗೆದ್ದಿತ್ತು.

ಟೋಕಿಯೋಕ್ಕೆ ಹೋಲಿಸಿದರೆ ಪ್ಯಾರಿಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಸಾಮಾನ್ಯ ಸಾಧನೆ ಮಾಡಿದ್ದಾರೆ. ಆದರೆ ಪ್ಯಾರಾಲಿಂಪಿಕ್ಸ್‌ ವಿಚಾರದಲ್ಲಿ ವಿಕಾಸದಿಂದ ಇನ್ನಷ್ಟು ವಿಕಾಸ ಎನ್ನುವಂತೆ ಸಾಧನೆ ದಾಖಲಾಗಿದೆ. ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಗರಿಷ್ಠ 17 ಪದಕಗಳು ಬಂದಿವೆ. ಬ್ಯಾಡ್ಮಿಂಟನ್‌, ಶೂಟಿಂಗ್‌, ಬಿಲ್ಗಾರಿಕೆ, ಜೂಡೋ ಭಾರತ ಪದಕ ಗೆದ್ದಿರುವ ಇನ್ನಿತರ ಕ್ರೀಡೆಗಳು. ಇನ್ನೂ ಹಲವು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲದಿದ್ದರೂ, ಗೆಲ್ಲುವ ಅಂಚಿಗೆ ತಲುಪಿದೆ.

ಈ ಎಲ್ಲ ಫ‌ಲಿತಾಂಶಗಳು ಕ್ರೀಡೆಯಲ್ಲಿ ದೇಶ ಸಾಧಿಸಿದ ಅಸಾಮಾನ್ಯ ಪ್ರಗತಿಯ ಸೂಚಕವಾಗಿದೆ. ಸರಿಯಾಗಿ ತರಬೇತಿ ನೀಡಿದರೆ, ಹಣ, ಸೌಲಭ್ಯ ನೀಡಿದರೆ ಭಾರತದ ಕ್ರೀಡಾಪಟುಗಳು ಜಾಗತಿಕ ವೇದಿಕೆಯಲ್ಲಿ ಮಿಂಚಬಲ್ಲರು ಎನ್ನುವುದನ್ನು ಪ್ಯಾರಾ ಕ್ರೀಡಾಪಟುಗಳು ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ಇದು ಮಾಮೂಲಿ ಕ್ರೀಡಾಪಟುಗಳು ಅರ್ಥಾತ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೂ ಸ್ಫೂರ್ತಿ ನೀಡುವ ಸಂಗತಿ. ರಿಯೋ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ವರೆಗೂ ಈ ವೇದಿಕೆಗಳಲ್ಲಿ ಭಾರತೀಯ ಸಾಧನೆ ತೀರಾ ಕಳಪೆಯಾಗಿತ್ತು. ಭಾರತೀಯರಿಗೆ ಇಂತಹ ವಿಶ್ವ ಕೂಟಗಳಲ್ಲಿ ಅದ್ಭುತ ಸಾಧನೆ ತೋರುವ ಸಾಮರ್ಥ್ಯವೇ ಇಲ್ಲವೇನೋ ಎಂಬ ಕೀಳರಿಮೆಯೂ ಉಂಟಾಗಿತ್ತು. ಟೋಕಿಯೋದಿಂದೀಚೆಗೆ ಮನೋಭಾವದಲ್ಲೇ ದೊಡ್ಡ ಬದಲಾವಣೆಯಾಗಿದೆ. ಭಾರತೀಯರು ಯಾವುದೇ ಕ್ರೀಡೆಗಳಲ್ಲಿ ಅಮೆರಿಕ, ಚೀನಕ್ಕೆ ಸರಿಸಾಟಿ ನಿಲ್ಲಬಲ್ಲರು ಎಂಬ ಆತ್ಮವಿಶ್ವಾಸ ಬಂದಿದೆ.

Advertisement

ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯಗಳು ತಮ್ಮದೇ ರೀತಿಯಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿವೆ. ಹಿಂದೆ ಪದಕ ಗೆದ್ದ ಮೇಲೆ ಹಣ ನೀಡುವ ಪದ್ಧತಿಯಿತ್ತು. ಈಗ ಸರಕಾರಗಳು ಪೂರ್ವದಲ್ಲೇ ಅತ್ಯುನ್ನತ ತರಬೇತಿ, ಸವಲತ್ತುಗಳಿಗಾಗಿ ಹಣ ವೆಚ್ಚ ಮಾಡುತ್ತಿವೆ. ಅದರ ಸ್ಪಷ್ಟ ಫ‌ಲಿತಾಂಶವೇ ಭಾರತೀಯರ ಪ್ಯಾರಾಲಿಂಪಿಕ್ಸ್‌ ಸಾಧನೆಯಲ್ಲಿ ಕಂಡುಬಂದಿದೆ. ಕೇಂದ್ರ ಸರಕಾರ ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಯೋಜನೆಯಡಿ ಹಲವು ವರ್ಷಗಳಿಂದ ತರಬೇತಿ ನೀಡುತ್ತಿದೆ. ಅತ್ಯುನ್ನತ ವಿದೇಶಿ ಕೋಚ್‌ಗಳನ್ನು ಆ್ಯತ್ಲೀಟ್ಸ್‌ಗಳಿಗೆ ಒದಗಿಸಿದೆ. ಹಲವಾರು ಸವಲತ್ತುಗಳನ್ನು ನೀಡಿದೆ. ಅದರಿಂದ ಪರಿಣಾಮ ಪದಕ ಸಾಧನೆಯಲ್ಲಿ ವ್ಯಕ್ತವಾಗಿದೆ. ಇದೇ ಮಾದರಿಯನ್ನು ಹಲವು ರಾಜ್ಯ ಸರಕಾರಗಳೂ ಅನುಸರಿಸಿವೆ. ಈ ಬಾರಿ ಕೆಲವು ಕ್ರೀಡೆಗಳಲ್ಲಿ ಭಾರತ ಗೆದ್ದಿಲ್ಲ. ಇತ್ತ ಗಮನ ಹರಿಸಿದರೆ ಮುಂದಿನ ಕೂಟದಲ್ಲಿ ಭಾರತೀಯರ ಸಾಧನೆ ಅತ್ಯುತ್ತಮ ಗೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next