ಕುಂದಾಪುರ ಪೇಟೆಯಿಂದ 5 ಕಿ.ಮೀ., ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ 3 ಕಿ.ಮೀ., ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ 2 ಕಿ.ಮೀ. ದೂರದಲ್ಲಿ ನೇರಂಬಳ್ಳಿ ಮಠವಿದೆ. ಇಲ್ಲಿನ ಪ್ರಧಾನ ದೇವರು ಗೋಪಾಲಕೃಷ್ಣ ಮತ್ತು ಮುಖ್ಯಪ್ರಾಣ. ಮಧ್ವಾಚಾರ್ಯರ 8 ಮಂದಿ ಯತಿಶಿಷ್ಯರಲ್ಲಿ ಕೃಷ್ಣಾಪುರ ಮಠ ಪರಂಪರೆಯಲ್ಲಿ ಶ್ರೀಜನಾರ್ದನ ತೀರ್ಥರು ಮೊದಲಿನವರು. ಇವರ ಶಿಷ್ಯ ಶ್ರೀವತ್ಸಾಂಕತೀರ್ಥರು 2ನೆಯವರು. ತಪೋ ನಿಧಿಗಳಾದ ಇವರಿಗೆ ಸ್ವಪ್ನ ಸೂಚನೆಯಂತೆ ಸಿಕ್ಕಿದ ದೇವರ ವಿಗ್ರಹವೇ ಗೋಪಾಲಕೃಷ್ಣ. ಬಸ್ರೂರಿನ ರಾಜ ನೇರವಾಗಿ ಉಂಬಳಿ ಬಿಟ್ಟ ಕಾರಣ ನೇರಂಬಳ್ಳಿ ಎಂಬ ಹೆಸರು ಬಂದಿದೆ.
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಪರ್ಯಾಯ ಪೂಜೆಯನ್ನು ನಿರ್ವಹಿಸಲಿರುವ ಸರದಿ ಕೃಷ್ಣಾಪುರ ಮಠದ್ದು. ಈ ಮಠವನ್ನು ಹಿಂದೆ ಕರೆಯುತ್ತಿದ್ದುದು ನೇರಂಬಳ್ಳಿ ಮಠವೆಂದು. ಇದು ಇರುವುದು ಕುಂದಾಪುರ ತಾಲೂಕಿನಲ್ಲಿ. ಹಂಗಳೂರು ಗ್ರಾ.ಪಂ. ವ್ಯಾಪ್ತಿಯ ನೇರಂಬಳ್ಳಿ ಗ್ರಾಮದಲ್ಲಿ ಈ ಪ್ರಾಚೀನ ಮಠವಿದೆ.
ನೇರಂಬಳ್ಳಿ ಮಠದ ಪ್ರಾಚೀನತೆ ಯನ್ನು ಮಠದ ಆವರಣದಲ್ಲಿರುವ ಆರು ಪುರಾತನ ವೃಂದಾವನಗಳು ಸಾರುತ್ತಿವೆ. ಮಠದ 2ನೇ ಯತಿ ಶ್ರೀವತ್ಸಾಂಕತೀರ್ಥರ ವೃಂದಾವನ ಇಲ್ಲಿದೆ.
ಉಡುಪಿ ಪ್ರದೇಶದಲ್ಲಿ ಮಧ್ವಾಚಾರ್ಯರ ಪ್ರಶಿಷ್ಯರೊಬ್ಬರ ವೃಂದಾವನ ಸಿಗುವುದು ಇವರದು ಮಾತ್ರ.ಇವರ ಬಳಿಕ ಕ್ರಮವಾಗಿ ಶ್ರೀವಾಗೀಶತೀರ್ಥರು, ಶ್ರೀಲೋಕೇಶ ತೀರ್ಥರು, ಶ್ರೀಲೋಕನಾಥ ತೀರ್ಥರು, ಶ್ರೀಲೋಕಪೂಜ್ಯ ತೀರ್ಥರು, ಶ್ರೀವಿದ್ಯಾ ರಾಜತೀರ್ಥರ ವೃಂದಾವನಗಳು ಇಲ್ಲಿವೆ. ಮಧ್ವಾಚಾರ್ಯರ ನೇರ ಯಾವ ಶಿಷ್ಯರ ವೃಂದಾವನಗಳೂ ನಮಗೆ ಸಿಗುವುದಿಲ್ಲ.
ಪ್ರಾಯಃ ಆ ಕಾಲದಲ್ಲಿ ನದಿಯಲ್ಲಿ ವಿಸರ್ಜಿಸುತ್ತಿದ್ದರೆಂಬ ಮಾತಿದೆ. 2ನೆಯವರಿಂದ ಹಿಡಿದು ಅನಂತರ 7 ಯತಿಗಳವರೆಗಿನ ವೃಂದಾವನಗಳು ಒಂದೇ ಕಡೆ ಕಾಣ ಸಿಗುವುದು ಇಲ್ಲಿ ಮಾತ್ರ. 8ನೆಯವರ ವೃಂದಾವನ ಶ್ರೀಕೃಷ್ಣಮಠದ ವೃಂದಾವನ ಸಮುಚ್ಚಯದಲ್ಲಿದೆ.
ಈಗ ಕೃಷ್ಣಾಪುರ ಮಠವೆಂದು ಕರೆಯುತ್ತಾರೆ. ಪ್ರಾಯಃ ಶ್ರೀವಾದಿರಾಜ ಸ್ವಾಮಿಗಳ ಅನಂತರ ಬೇರೆ ಬೇರೆ ಮಠಗಳು ಸಂಸ್ಥಾಪನೆಗಳಾಗಿ ಬೆಳೆದು ಬಂದವು. ಹೀಗೆ ಕೃಷ್ಣಾಪುರ ಮಠದ ಹೆಸರು ಚಾಲ್ತಿಗೆ ಬಂದಿರಬಹುದು.