ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಾಹನ ಚಾಲಕರನ್ನು ದುಷ್ಕರ್ಮಿಗಳು ದಾರುಣವಾಗಿ ಹತ್ಯೆಗೈದಿರುವ ಘಟನೆ ಮಂಗಳವಾರ ನಡೆದಿದೆ. ದರೋಡೆಗೆ ಪ್ರತಿರೋಧ ತೋರಿದ ಕ್ಯಾಬ್ ಚಾಲಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬೈಯಪ್ಪನಹಳ್ಳಿಯ ನಾಗಾವಾರಪಾಳ್ಯದಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.
ಹಾಸನದ ಅರಸೀಕೆರೆ ಮೂಲದ ಮೋಹನ್ ಕುಮಾರ್ (28) ಹತ್ಯೆಯಾದ ಚಾಲಕ. ಮೋಹನ್ ಕೆಲ ವರ್ಷಗಳಿಂದ ನಗರದಲ್ಲಿ ಕ್ಯಾಬ್ ಚಾಲಕನಾಗಿದ್ದು, ಲಗ್ಗೆರೆಯಲ್ಲಿ ವಾಸವಾಗಿದ್ದಾರೆ. ಸೋಮವಾರ ತಡರಾತ್ರಿ ಬೈಯಪ್ಪನಹಳ್ಳಿಯ ನಾಗವಾರ ಪಾಳ್ಯದ ರೆಸ್ಟೋರೆಂಟ್‌ವೊಂದರಲ್ಲಿ ಮೋಹನ್ ಕುಮಾರ್ ಹಾಗೂ ಸ್ನೇಹಿತ ಸಂದೀಪ್ ಊಟ ಮುಗಿಸಿ ನಡೆದು ಹೋಗುತ್ತಿದ್ದರು. ಮಾರ್ಗಮಧ್ಯೆ ಅಂಗಡಿಯೊಂದರಲ್ಲಿ ಸಿಗರೇಟ್ ತರಲು ಹೋದಾಗ, ಅಲ್ಲಿದ್ದ ನಾಲ್ವರು ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಸ್ಥಳದಲ್ಲಿದ್ದ ಸ್ಥಳೀಯರು ಎರಡು ಗುಂಪಿನವರನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ.
ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದಿನಿಂದ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮೋಹನ್ ಮತ್ತು ಸಂದೀಪ್ ಬಳಿಯಿದ್ದ ಮೊಬೈಲ್, ನಗದು ದೋಚಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ ಮೋಹನ್ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸಂದೀಪ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
ಕಲ್ಲು ಎತ್ತಿಹಾಕಿ ಬಸ್ ಚಾಲಕನ ಕೊಲೆ: ಮನೆಗೆ ನುಗ್ಗಿದ ದುಷ್ಕರ್ಮಿಗಳು ಖಾಸಗಿ ಶಾಲಾ ವಾಹನ ಚಾಲಕರೊಬ್ಬರನ್ನು ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಪೀಣ್ಯ ಠಾಣಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಬಳಿ ಮಂಳವಾರ ನಡೆದಿದೆ. ಗದಗ ಜಿಲ್ಲೆಯ ಹನುಮಂತೇಗೌಡ (30) ಕೊಲೆಯಾದ ಚಾಲಕ. ಕೆಲ ವರ್ಷಗಳಿಂದ ನಗರದಲ್ಲಿ ವಾಹನ ಚಾಲಕರಾಗಿರುವ ಹನುಮಂತೇಗೌಡ ದೊಡ್ಡಬಿದರಕಲ್ಲು ಸಮೀಪದ ಮುನೇಶ್ವರ ಬ್ಲಾಕ್‌ನಲ್ಲಿ ವಾಸವಾಗಿದ್ದರು.
ಮಂಗಳವಾರ ಬೆಳಗ್ಗೆ ಮನೆಯವರು ಹನುಂತೇಗೌಡ ಮೊಬೈಲ್‌ಗೆ ಹತ್ತಾರು ಬಾರಿ ಕರೆ ಮಾಡಿದ್ದಾರೆ. ಅವರು ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಬೆಂಗಳೂರಿನಲ್ಲೇ ಇರುವ ಅವರ ಸಹೋದರನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಹೋದರ ಹನುಮಂತೇಗೌಡರ ಮನೆಗೆ ಬಂದು ನೋಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಪೀಣ್ಯ ಠಾಣೆಯಲ್ಲಿ ದಾಖಲಾಗಿದೆ.