Advertisement

ಬಾರ್‌ ಬಾಗಿಲಿಗೆ ಅಡ್ಡ ನಿಂತವನ ಕೊಲೆ

12:26 PM Aug 26, 2018 | Team Udayavani |

ಬೆಂಗಳೂರು: ಬಾರ್‌ ಒಳಗೆ ಹೋಗಲು ಜಾಗ ಬಿಡಲಿಲ್ಲ ಎಂದು ಆಕ್ರೋಶಗೊಂಡ ಮೂವರು ದುಷ್ಕರ್ಮಿಗಳು ಓಲಾ ಕ್ಯಾಬ್‌ ಚಾಲಕನನ್ನು ಸಾರ್ವಜನಿಕರೆದುರೇ ಬರ್ಬರವಾಗಿ ಹತ್ಯೆಗೈದ ಘಟನೆ ಕುಮಾರಸ್ವಾಮಿ ಲೇಔಟ್‌ನ ಕದಿರೇನಹಳ್ಳಿ ಬಳಿಯ ಆರ್‌.ಕೆ.ಬಾರ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಬನಶಂಕರಿ ನಿವಾಸಿ ಚಂದ್ರು (35) ಕೊಲೆಯಾದ ಕ್ಯಾಬ್‌ ಚಾಲಕ. ಘಟನೆ ಸಂಬಂಧ ನಯಾಜ್‌ (32), ನದೀಮ್‌ (36) ಮತ್ತು ಫ‌ಯಾಜ್‌ (30) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪ ಒಂದರಲ್ಲಿ ಹಿಂದೆ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದು ಓಲಾ ಕ್ಯಾಬ್‌ ಚಾಲನೆ ನಡೆಸುತ್ತಿದ್ದ ಚಂದ್ರು, ಪ್ರತಿ ನಿತ್ಯ ಮದ್ಯ ಸೇವಿಸಲು ಕದಿರೇನಹಳ್ಳಿಯಲ್ಲಿರುವ ಆರ್‌.ಕೆ.ಬಾರ್‌ಗೆ ಹೋಗುತ್ತಿದ್ದ.

ಶುಕ್ರವಾರ ಕೂಡ ರಾತ್ರಿ 11 ಗಂಟೆ ಸುಮಾರಿಗೆ ಇದೇ ಬಾರ್‌ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದ. ಬಳಿಕ ಬಾರ್‌ ಮುಂಬಾಗಿಲ ಬಳಿಯಿದ್ದ ಕ್ಯಾಶ್‌ ಕೌಂಟರ್‌ನಲ್ಲಿ ನಿಂತು ಹಣ ಪಾವತಿಸುತ್ತಿದ್ದ. ಇದೇ ವೇಳೆ ಮೂವರು ಆರೋಪಿಗಳು ಬಾರ್‌ಗೆ ಬಂದಿದ್ದಾರೆ.

ಬಾರ್‌ನ ಮುಂಬಾಗಿಲು ಕಿರಿದಾಗಿದ್ದರಿಂದ ಚಂದ್ರುಗೆ ಜಾಗ ಬಿಡುವಂತೆ ಆರೋಪಿಗಳು ಸೂಚಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಚಂದ್ರು ಕೆಲ ಹೊತ್ತು ಅಲ್ಲೇ ಕಾಯುವಂತೆ ಏರುಧ್ವನಿಯಲ್ಲಿ ಹೇಳಿದ್ದಾನೆ. ಇದರಿಂದ  ಆಕ್ರೋಶಗೊಂಡ ಆರೋಪಿಗಳು, ಚಂದ್ರುನನ್ನು ಪಕ್ಕಕ್ಕೆ ತಳ್ಳಿ ಒಳ ಪ್ರವೇಶಿಸಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿ ನಯಾಜ್‌ ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರು ಕುತ್ತಿಗೆ ಹಾಗೂ ಭುಜಕ್ಕೆ ಇರಿದಿದ್ದಾನೆ.

ಬಳಿಕ ನದೀಮ್‌ ಮತ್ತು ಫ‌ಯಾಜ್‌ ಚಂದ್ರು ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ಚಂದ್ರುನನ್ನು ಬಾರ್‌ ಸಿಬ್ಬಂದಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕೆ.ಎಸ್‌.ಲೇಔಟ್‌ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಜತೆಗೆ ತಡರಾತ್ರಿ 1 ಗಂಟೆ ಸುಮಾರಿಗೆ ಬಾರ್‌ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಆರೋಪಿಗಳ ವಿಳಾಸ ತಿಳಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮನೆಗಳಲ್ಲಿ ಅವಿತು ಕುಳಿತಿದ್ದ ಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರು ವಿರುದ್ಧ ಕೊಲೆ ಪ್ರಕರಣ: ಹತ್ಯೆಗೀಡಾದ ಚಂದ್ರು ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದು ಓಲಾ ಕ್ಯಾಬ್‌ ಚಾಲಕನಾಗಿದ್ದಾನೆ. ಕೆಲ ವರ್ಷಗಳ ಹಿಂದೆ ಚಪ್ಪಲಿ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ್‌ಗೌಡ ಎಂಬಾತ ರೌಡಿಶೀಟರ್‌ ಪಳನಿಯನ್ನು ಕೊಲೆಗೈದಿದ್ದ. ಇದಕ್ಕೆ ಪ್ರತೀಕಾರವಾಗಿ ಪಳನಿ ಸಹೋದರ ಕುಮಾರ್‌ 2007ರಲ್ಲಿ ಚಂದ್ರು ಮೂಲಕ ಲಕ್ಷ್ಮಣ್‌ಗೌಡನನ್ನು ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ಚಂದ್ರು ಜೈಲು ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಹುಟ್ಟುಹಬ್ಬ: ಆರೋಪಿಗಳ ಪೈಕಿ ಫ‌ಯಾಜ್‌ ನಗರದಲ್ಲಿ ಟೈಲ್ಸ್‌ ಅಳವಡಿಸುವ ಕೆಲಸ ಮಾಡುತ್ತಿದ್ದು, ನಯಾಜ್‌ ಮೈಸೂರಿನಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ. ನದೀಮ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶುಕ್ರವಾರ ಫ‌ಯಾಜ್‌ ಹುಟ್ಟುಹಬ್ಬ ಇತ್ತು. ಈ ಹಿನ್ನೆಲೆಯಲ್ಲಿ ತನ್ನ ಇಬ್ಬರು ಸ್ನೇಹಿತರ ಜತೆ ಫ‌ಯಾಜ್‌ ಆರ್‌.ಕೆ.ಬಾರ್‌ನಲ್ಲಿ ಮದ್ಯ ಸೇವಿಸಲು ಬಂದಿದ್ದ. ಈ ವೇಳೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next