Advertisement

ಬಂದೂಕಿನಿಂದ ಸಾಹಿತ್ಯ ಲೋಕದ ಕೊಲೆ: ಕೋಡಿಹಳ್ಳಿ

03:13 PM Sep 07, 2017 | Team Udayavani |

ಹರಪನಹಳ್ಳಿ: ಬಂದೂಕು ಕೇವಲ ಸಾಹಿತ್ಯ ಲೋಕ ಅಷ್ಟೇ ಅಲ್ಲ, ಇದೀಗ ಪತ್ರಿಕಾ ಲೋಕ ಹಾಗೂ ಮಹಿಳೆಯನ್ನು ನಿರ್ದಾಕ್ಷಿಣ್ಯವಾಗಿ ಬಲಿ ತೆಗೆದುಕೊಳ್ಳುವ ಮೂಲಕ ಅಕ್ಷರ ಲೋಕ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದು ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಗೌರಿ ಲಂಕೇಶ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್‌ ಮೂಢನಂಬಿಕೆ ವಿರೋಧಿಸಿ, ನಕ್ಸಲ್‌ ಚಳವಳಿಯಲ್ಲಿ ತೊಡಗಿಕೊಂಡವರ ಮನಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು ಎಂದರು.

ಪತ್ರಿಕೆ ಮೂಲಕ ಸಮಾಜದಲ್ಲಿನ ಅನಿಷ್ಠಗಳನ್ನು ಬಹಿರಂಗವಾಗಿ ಖಂಡಿಸುತ್ತಾ ಸಮ ಸಮಾಜದ ನಿರ್ಮಾಣಕ್ಕೆ ತಂದೆ ಲಂಕೇಶ್‌ ಹಾದಿಯಲ್ಲಿಯೇ ಸಾಗಿದ್ದರು. ಕೋಮು ಸೌಹಾಧ್ಯìತೆ ಕಾಪಾಡುವುದು ಅವರ ಮುಖ್ಯ ಉದ್ದೇಶವಾಗಿತ್ತು. ಇಂದು ಸತ್ಯವನ್ನು ಬಹಿರಂಗವಾಗಿ ಹೇಳಲು ಪ್ರಗತಿಪರರು, ಚಿಂತಕರು ಆಲೋಚನೆ ಮಾಡಬೇಕಾದಂತಹ ಅಪಾಯಕಾರಿ ದಿನಗಳು ಬಂದಿರುವುದು ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಗತಿಪರ ಚಿಂತಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಗೌರಿ ಲಂಕೇಶ್‌ ನಮ್ಮೊಂದಿಗಿಲ್ಲ. ಆದರೆ ನಮ್ಮ ನಿಜ ಶತೃಗಳು ಯಾರು ಎಂದು ಸ್ಪಷ್ಟವಾಗಿ ಗುರುತಿಸಿಕೊಂಡರೆ ಹೋರಾಟಕ್ಕೆ ಒಂದು ಶಕ್ತಿ ಬರುತ್ತದೆ. ಸಾಮಾಜಿಕ ಪರಿವರ್ತನೆಗೆ ಹೋರಾಡಿದ ಚಿಂತಕರನ್ನು ಏನೆಲ್ಲಾ ಮಾಡಿ ಕೊಲ್ಲಲಾಗುತ್ತಿದೆ, ಆ ಪರಂಪಂರೆ ಮುಂದುವರೆಯುತ್ತಿರುವುದು ನೋವಿನ ಸಂಗತಿ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ್‌ ಸಂಗಪ್ಪನವರ್‌, ಕಸಾಪ ತಾಲೂಕು ಅಧ್ಯಕ್ಷ ಡಿ.ರಾಮನಮಲಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ಡಿ.ಬಿ.ಬಡಿಗೇರ್‌, ಪ್ರೊ| ತಿಮ್ಮಪ್ಪ, ಪ್ರಗತಿಪರ ಮುಖಂಡ ಎ.ಎಂ.ವಿಶ್ವನಾಥ, ಸಾಹಿತಿ ಇಸ್ಮಾಯಿಲ್‌ ಯಲಿಗಾರ, ಶಿಕ್ಷಕಿ ಸುಭದ್ರಮ್ಮ, ಕಸಾಪ ಕಾರ್ಯದರ್ಶಿ ಸಿ.ಗಂಗಾಧರ, ಎಚ್‌. ಎಂ.ಸಂತೋಷ್‌, ಉಪನ್ಯಾಸಕ ಪಿ.ದುರುಗೇಶ್‌, ಕಲಾಮನೆ ಭೀಮಪ್ಪ, ಶಿಕಾರಿ ಬಾಲಪ್ಪ, ಎಸ್‌ಎಫ್‌ಐ ಸಿ.ಈಶ್ವರನಾಯ್ಕ, ಗುಡಿಹಳ್ಳಿ ಹಾಲೇಶ್‌, ಕರಿಬಸಪ್ಪ, ಅಂಜಿನಪ್ಪ  ಮಾತನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷ ದೇವೇಂದ್ರಗೌಡ, ಜಿ.ಪದ್ಮಲತಾ, ಕಸಾಪ ಕಾರ್ಯದರ್ಶಿ ಹೇಮಣ್ಣ ಮೋರಿಗೇರಿ, ತಾಪಂ ಸದಸ್ಯ ಓ.ರಾಮಣ್ಣ, ರೇಣುಕಾಬಾಯಿ, ಮಂಜುನಾಥ, ಪತ್ರಕರ್ತ ಇರ್ಫಾನ್‌ ಮುದಗಲ್‌, ಜಾವೀದ್‌, ಎಸ್‌.ಜಾಕೀರ್‌, ಎ.ಮುಸಾಸಾಬ್‌ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next