Advertisement

ದ್ವೇಷದ ಕಿಚ್ಚು ಹೆಚ್ಚಿಸಿದ ಲಕ್ಷ್ಮಣನ ಕೊಲೆ

06:15 AM Mar 15, 2019 | |

ಬೆಂಗಳೂರು: ರೌಡಿ ಲಕ್ಷ್ಮಣನ ಹತ್ಯೆಯಾಗುತ್ತಿದ್ದಂತೆ ನಗರದಲ್ಲಿ ಮತ್ತೆ ರೌಡಿಗಳ ನಡುವಿನ ಪರಸ್ಪರ ದ್ವೇಷ ಚಿಗುರೊಡೆಯ ತೊಡಗಿದೆ. ಒಂದು ಕಾಲದಲ್ಲಿ ಲಕ್ಷ್ಮಣನ ಜತೆ ಗುರುತಿಸಿಕೊಂಡು ಲಕ್ಷ್ಮಣನನ್ನೇ ಹತ್ಯೆಗೈದ ರೂಪೇಶ್‌ ಮತ್ತು ತಂಡದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಲಕ್ಷ್ಮಣನ ಬೆಂಬಲಿಗರು ಪಣ ತೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಅಲ್ಲದೆ, 2006ರಲ್ಲಿ ಕೊರಂಗು ಕೃಷ್ಣನ ಸಹಚರ ಮಚ್ಚ ಅಲಿಯಾಸ್‌ ಮಂಜನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಕ್ಷ್ಮಣನ ಹತ್ಯೆಗೆ 13 ವರ್ಷಗಳಿಂದ ಕಾಯುತ್ತಿದ್ದ ಮಂಜುನ ಸಹಚರ ಹೇಮಂತ್‌ ಅಲಿಯಾಸ್‌ ಹೇಮಿ, ಲಕ್ಷ್ಮಣನನ್ನು ಕೊಂದು ಪ್ರತಿಕಾರ ತೀರಿಸಿಕೊಂಡಿದ್ದಾನೆ.

ಇದಕ್ಕೆ ಪ್ರತಿಯಾಗಿ ಇದೀಗ ಲಕ್ಷ್ಮಣನ ಪರಮಾಪ್ತ ಸಂತೋಷ್‌ ಅಲಿಯಾಸ್‌ ಆ್ಯಪಲ್‌ ಸಂತು, ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದು, ಈಗಾಗಲೇ ತನ್ನ ಸಹಚರರಿಗೆ ತಿಳಿಸಿದ್ದಾನೆ. ಮಾತ್ರವಲ್ಲ, ಲಕ್ಷ್ಮಣನ ಸಮಾಧಿ ಬಳಿ ತೆರಳಿ ಆತನ ಸಾವಿನ ಸೇಡು ತೀರಿಸಿಕೊಳ್ಳುವುದಾಗಿ ಶಪಥ ಕೂಡ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಆ್ಯಪಲ್‌ ಸಂತು ತನ್ನ ಸಹಚರರ ಜತೆ ರೂಪೇಶ್‌ ಪ್ರೇಯಸಿಯ ಸಂಬಂಧಿಕರಿಗೆ ಸೇರಿದ್ದೆನ್ನಲಾದ ತುಮಕೂರಿನಲ್ಲಿರುವ ಫಾರ್ಮ್ಹೌಸ್‌ ಧ್ವಂಸ ಮಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ, ಅದನ್ನು ನಿರಾಕರಿಸಿರುವ ಸಿಸಿಬಿ ಪೊಲೀಸರು ಅಂತಹ ಯಾವುದೇ ಘಟನೆ ನಡೆದಿಲ್ಲ. ಲಕ್ಷ್ಮಣನ ಸಹಚರರ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಬೇನಾಮಿ ಆಸ್ತಿ ಮೇಲೆ ಕಣ್ಣು: ಹುಲಿಯೂರುದುರ್ಗ ಮೂಲದ ರಾಮ ಮತ್ತು ಲಕ್ಷ್ಮಣ ಸಹೋದರರು 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಬಳಿಕ  ರೌಡಿಶೀಟರ್‌ ಮುಲಾಮನ ಜತೆ ಗುರುತಿಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು.

Advertisement

ಲಕ್ಷ್ಮಣ ನೂರಾರು ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾನೆ. ಈ ಆಸ್ತಿ ಮೇಲೆ ಆತನ ವಿರೋಧಿ ಬಣ ಹಾಗೂ ಕೆಲ ರೌಡಿಗಳಿಗೆ ಕಣ್ಣಿತ್ತು. ಇದೀಗ ಲಕ್ಷ್ಮಣ ಹತ್ಯೆಯಾಗಿರುವುದರಿಂದ ಕೆಲ ರೌಡಿಗಳು ಆತನ ಬೇನಾಮಿ ಆಸ್ತಿ ಕಬಳಿಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇದೆ.

ಕೊಲೆಗೆ ಬಳಸಿದ್ದ ವಾಹನ ಕನಕಪುರ ಬಳಿ ಪತ್ತೆ: ಹತ್ಯೆ ನಡೆದ ದಿನ ಕುಖ್ಯಾತ ರೌಡಿ ಲಕ್ಷ್ಮಣ ಚಾಲನೆ ಮಾಡಿಕೊಂಡು ಹೋಗುತ್ತಿದ್ದª ವಾಹನವನ್ನು ಹಿಂಬಾಲಿಸಲು ಹಂತಕರು ಬಳಸಿದ್ದ ಎರಡು ಕಾರುಗಳ ಪೈಕಿ ಒಂದು ಸ್ಕಾರ್ಪಿಯೋ ವಹನವನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ.7ರಂದು ಲಕ್ಷ್ಮಣನನ್ನು ಕೊಂದ ಬಳಿಕ ಆರೋಪಿಗಳು ಸ್ಕಾರ್ಪಿಯೋ ಮತ್ತು ಟಾಟಾ ಇಂಡಿಕಾ ಕಾರುಗಳಲ್ಲಿ ಪಾರಾರಿಯಾಗಿದ್ದರು. ಈ ಪೈಕಿ ಸ್ಕಾರ್ಪಿಯೋ ಕಾರನ್ನು ಕನಕಪುರ ತಾಲೂಕಿನ ಸಾತನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರ್ಗಮಧ್ಯೆ ನಿಲ್ಲಿಸಿರುವ ಆರೋಪಿಗಳು, ಅಲ್ಲಿಂದ ಖಾಸಗಿ ಬಸ್‌ನಲ್ಲಿ ಪರಾರಿಯಾಗಿದ್ದಾರೆ.

ಸ್ಥಳೀಯ ಪೊಲೀಸರ ಸಹಕಾರದಿಂದ ಸಿಸಿಬಿ ಪೊಲೀಸರು ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಕೆಯಾಗಿದ್ದ ಟಾಟಾ ಇಂಡಿಕಾ ಕಾರು ನಗರದ ವ್ಯಾಪ್ತಿಯಲ್ಲೇ ಇದೆ ಎಂಬ ಮಾಹಿತಿಯಿದೆ. ಶೋಧ ಕಾರ್ಯ ಮುಂದುವರಿದಿದೆ. ಈ ಕಾರನ್ನು ಕ್ಯಾಟ್‌ ರಾಜ ಕೊಂಡೊಯ್ದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next