ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಅಣ್ಣನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಲಿಂಗರಾಜಪುರದ ಕರಿಯಣ್ಣನ ಪಾಳ್ಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಆಸ್ಕರ್ ರಿಜೋರಿಯಾ (49) ಕೊಲೆಯಾದವ. ಈ ಸಂಬಂಧ ಈತನ ತಮ್ಮ ರಾಯಸನ್ ರಿಜೋರಿಯಾ (40) ಎಂಬಾತನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆ ಬೀಗ ಹಾಕಿಕೊಂಡು ಹೋಗಿದ್ದ ಎಂಬ ಕಾರಣಕ್ಕೆ ಅಣ್ಣ ನ ಮೇಲೆ ಜಗಳ ಆರಂಭಿಸಿದ ತಮ್ಮ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಆಂಧ್ರಪ್ರದೇಶದ ಗುಂತಕಲ್ ಮೂಲದವರಾದ ಇವರು 17 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆಸ್ಕರ್ ಫ್ಲಂಬರ್ ಕೆಲಸಕ್ಕೆ ಹೋಗುತ್ತಿದ್ದು, ರಾಯಸನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದ.
ಬುಧವಾರ ರಾತ್ರಿ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ತಾಯಿಯನ್ನು ರಾಯಸನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲೇ ಇದ್ದ ಅಣ್ಣ ಆಸ್ಕರ್, ಮೊಟ್ಟೆ ತರಲು ಅಂಗಡಿಗೆ ಹೋಗಿದ್ದ. ಈ ನಡುವೆ ಆಸ್ಪತ್ರೆಯಿಂದ ತಾಯಿಯನ್ನು ಕರೆತಂದ ಆರೋಪಿ, ಮನೆ ಬೀಗ ಹಾಕಿದ್ದರಿಂದ ಆಸ್ಕರ್‌ಗೆ ಫೋನ್ ಮಾಡಿದ್ದು, ಆತ ಕರೆ ಸ್ವೀಕರಿಸಿಲ್ಲ.
ಆಸ್ಕರ್ ಬರುವವರೆಗೂ ತಾಯಿ, ಮಗ ಮನೆ ಜಗಲಿ ಮೇಲೇ ಕುಳಿತಿದ್ದು, ಆಸ್ಕರ್ ಬರುತ್ತಿದ್ದಂತೆ, ರಾಯಸನ್ ಜಗಳ ತೆಗೆದಿದ್ದಾನೆ. “ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದೆ. ಹೀಗಾಗಿ, ಕರೆ ಸ್ವೀಕರಿಸಿಲ್ಲ’ ಎಂದು ಆಸ್ಕರ್ ಹೇಳಿದರೂ ಕೇಳದ ಆರೋಪಿ, ಆಸ್ಕರ್ ಮೇಲೆ ಎರಗಿದ್ದಾನೆ.
ಕೋಪಗೊಂಡ ಆಸ್ಕರ್ ರಾಯಸನ್ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದರಿಂದ ಇನ್ನಷು ಆಕ್ರೋಶಗೊಂಡ ರಾಯಸನ್ ಚಾಕು ತಂದು ಆಸ್ಕರ್ ಹೊಟ್ಟೆಗೆ ಇರಿದಿದ್ದಾನೆ. ಘಟನೆ ವೇಳೆ ಇಬ್ಬರೂ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.