ಬೆಂಗಳೂರು: ಮನೆಯ ಸಮೀಪದ ತೋಟ ನೋಡಿಕೊಂಡು ಬರಲು ತೆರಳಿದ್ದ ವೃದ್ಧರೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಚನ್ನನಾಯಕನಹಳ್ಳಿ ನಿವಾಸಿ ಮುನಿಯಪ್ಪ (87) ಕೊಲೆಯಾದವರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು ಕೆಲ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಣಕಾಸು ವ್ಯವಹಾರ, ಜಮೀನು ವಿವಾದ ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಚನ್ನನಾಯಕನಹಳ್ಳಿಯ ನಿವಾಸದ ಸ್ವಲ್ಪ ದೂರದಲ್ಲಿಯೇ ಮುನಿಯಪ್ಪ ಅವರಿಗೆ ಒಂದೂವರೆ ಎಕರೆ ಕೃಷಿ ಜಮೀನಿದೆ. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಎಂದಿನಂತೆ ತೋಟಕ್ಕೆ ಹೋಗಿಬರುವುದಾಗಿ ಪತ್ನಿ ಪುಟ್ಟಮ್ಮ ಅವರಿಗೆ ತಿಳಿಸಿ ತೆರಳಿದವರು 11 ಗಂಟೆಯಾದರೂ ವಾಪಸ್ ಬಂದಿಲ್ಲ.
ಹೀಗಾಗಿ ತೋಟಕ್ಕೆ ಹೋಗಿ ನೋಡಿಕೊಂಡು ಬರುವಂತೆ ಪುಟ್ಟಮ್ಮ ಅವರು, ಮನೆ ಕೆಲಸದಾತನಿಗೆ ಹೇಳಿ ಕಳುಹಿಸಿದ್ದರು. ಅದರಂತೆ ಆತ ತೋಟದ ಪಂಪ್‌ಸೆಟ್ ಕೊಠಡಿಯಲ್ಲಿ ನೋಡಿದಾಗ ಮುನಿಯಪ್ಪ ಅವರ ಮೃತದೇಹ ರಕ್ತದ ಮಡುವಲ್ಲಿ ಬಿದ್ದಿತ್ತು. ಕೂಡಲೇ ಆತ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ.
ವಿಷಯ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಶ್ವಾನದಳ ಕೂಡ ಪರಿಶೀಲನೆ ನಡೆಸಿದೆ. ಮಾರಕಾಸ್ತ್ರಗಳಿಂದ ಮುನಿಯಪ್ಪ ಅವರ ತಲೆಗೆ ಹೊಡೆದಿರುವ ಗುರುತುಗಳಿವೆ. ಪೂರ್ವನಿಯೋಜಿತವಾಗಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖಾ ಭಾಗವಾಗಿ ಮುನಿಯಪ್ಪ ಅವರ ದೂರವಾಣಿ ಕರೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮುನಿಯಪ್ಪ ದಂಪತಿಗೆ ಆರು ಮಂದಿ ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳಿದ್ದು, ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡಲಾಗಿದೆ. ಜಮೀನು ನಿರ್ವಹಣೆ ಅವರೇ ಮಾಡುತ್ತಿದ್ದರು. ಕೆಲ ವ್ಯಕ್ತಿಗಳ ಜತೆ ಹಣಕಾಸು ಲೇವಾದೇವಿ ವ್ಯವಹಾರ ನಡೆಸುತ್ತಿದ್ದು, ಊರಿನ ಕೆಲವರ ಜತೆ ಈ ಹಿಂದೆ ಜಗಳವಾಗಿತ್ತು ಎಂದು ಅವರ ಪತ್ನಿ ಪುಟ್ಟಮ್ಮ ಹೇಳಿಕೆ ನೀಡಿದ್ದಾರೆ.
ಹಣಕಾಸು ವ್ಯವಹಾರ ಹಾಗೂ ಜಮೀನು ವಿವಾದಕ್ಕೆ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.