Advertisement

ಸೌಲಭ್ಯ ನೀಡುವಲ್ಲಿ ನಗರಪಾಲಿಕೆ ಮುಂದು

12:38 PM Jun 26, 2017 | Team Udayavani |

ದಾವಣಗೆರೆ: ಅಂಗವಿಕಲ, ಹಿಂದುಳಿದ, ದಲಿತ ವರ್ಗದವರಿಗೆ ಸರ್ಕಾರ ಸೌಲಭ್ಯ ದೊರಕಿಸುವಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಭಾನುವಾರ ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆಯ ಶೇ.3ರ ಅನುದಾನದಲ್ಲಿ ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಿಸಿ ಅವರು ಮಾತನಾಡಿದರು. 

Advertisement

ರಾಜ್ಯ ಸರ್ಕಾರ ಹಿಂದುಳಿದವರಿಗೆ ಶೇ. 24.1ರ ಅನುದಾನದಲ್ಲಿ, ಅಂಗವಿಕಲರಿಗೆ ಶೇ. 3ರ ಅನುದಾನದಲ್ಲಿ ಅನೇಕ ಸೌಲಭ್ಯ ನೀಡುತ್ತಿದೆ. ಇವುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮುಂಚೂಣಿಯಲ್ಲಿದೆ ಎಂದರು. ಅಂಗವಿಕಲರಿಗೆ ಇಂದು ಒಟ್ಟು 47 ಲಕ್ಷ ರೂ. ಅನುದಾನದ ವಿವಿಧ ಸೌಲಭ್ಯ ನೀಡಲಾಗಿದೆ.

ಒಟ್ಟು 341 ಜನ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇಂದು 120 ಜನಕ್ಕೆ ಸೌಲಭ್ಯ ನೀಡಲಾಗಿದೆ. ಉಳಿದವರಿಗೆ ಸರಿಯಾದ ಸಮಯಕ್ಕೆ ಸೌಲಭ್ಯ ನೀಡಬೇಕು. ನಗರಪಾಲಿಕೆಯಿಂದ ನೀಡಲಾಗುವ ಗುಣಮಟ್ಟದ ಸಲಕರಣೆಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು  ಎಂದು ತಿಳಿಸಿದರು. 

ಅಂಗವಿಕಲರ ಉದ್ಧಾರಕ್ಕೆ ಲಯನ್ಸ್‌, ರೋಟರಿ ಕ್ಲಬ್‌ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಕಾರ್ಯ ನಿರ್ವಹಿಸುವತ್ತಿವೆ. ಎಲ್ಲರೂ ಅಂಗವಿಕಲರ ಸೇವೆ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಅವರ ಏಳ್ಳೆಗೆ ಶ್ರಮಿಸಬೇಕು ಎಂದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿದರು.

ನಗರಪಾಲಿಕೆಯ ಒಟ್ಟು ಅನುದಾನದ ಶೇ. 3ರಷ್ಟು ಅನುದಾನದಲ್ಲಿ ಅಂಗವಿಕಲರ ಜೀವನ ನಿರ್ವಹಣೆಗೆ ಸಹಾಯಕವಾಗುವಂತಹ ಸಲಕರಣೆಗಳನ್ನು  ವಿತರಿಸಲಾಗುತ್ತಿದೆ. ಪಾಲಿಕೆಯವರು ಅರ್ಹರನ್ನು ಆಯ್ಕೆ ಮಾಡಿ ಸರಿಯಾದ ಸಮಯಕ್ಕೆ ಸಲಕರಣೆ ನೀಡುತ್ತಿರುವುದು ಖುಷಿಯ ಸಂಗತಿ.

Advertisement

ಅಂಗವಿಕಲರು ಈ ಸಲಕರಣೆ ಬಳಸಿಕೊಂಡು ಸಾಮಾನ್ಯರಂತೆ ಜೀವನ ಮಾಡಲು ಮುಂದಾಗಬೇಕು ಎಂದರು. ಅಂಗವಿಕಲರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದೆ. ಓದುವ ಆಸಕ್ತಿ ಇರುವವರಿಗೆ ಸರ್ಕಾರಿ ವಸತಿ ಶಾಲೆಗಳಿಗೆ ನೇರ ಪ್ರವೇಶ ನೀಡಲಾಗುತ್ತಿದೆ. ನಗರದ ದೇವರಾಜ ಅರಸು ಬಡಾವಣೆಯ ನ್ಯಾಯಾಲಯ ಕಟ್ಟಡದ ಹಿಂಭಾಗದಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ಅಂಗವಿಕಲ ಪೋಷಕರು, ಸಂಘ, ಸಂಸ್ಥೆ, ಸಾರ್ವಜನಿಕರು ತಮಗೆ ಗೊತ್ತಿರುವ ಅಂಗವಿಕಲರನ್ನು ಈ ಕೇಂದ್ರಕ್ಕೆ ಸೇರಿಸಿ, ಅವರ ಜೀವನ ಸುಧಾರಣಗೆ ಅಗತ್ಯವಾದ ತರಬೇತಿ ಕೊಡಿಸಲು ಮುಂದಾಗಬೇಕು. ಕೇಂದ್ರದಲ್ಲಿ ನುರಿತ ತಜ್ಞರು ಅಗತ್ಯ ತರಬೇತಿ ನೀಡುತ್ತಾರೆ ಎಂದು ಹೇಳಿದರು. 

ನಗರಪಾಲಿಕೆ ಪ್ರಭಾರ ಆಯುಕ್ತ ಜಿ.ಎಂ. ರವೀಂದ್ರ ಮಾತನಾಡಿ, ಶೇ. 3ರ ಅನುದಾನದಲ್ಲಿ 27 ಲಕ್ಷ ರೂ.ನಲ್ಲಿ 38 ಸ್ಕೂಟರ್‌, 2 ಲಕ್ಷ ರೂ. ಮೌಲ್ಯದ 6 ಮೋಟಾರೈಸ್ಡ್ ಸೈಕಲ್‌, 1.5 ಲಕ್ಷ ರೂ. ವೆಚ್ಚದಲ್ಲಿ ಟ್ರೈ ಸೈಕಲ್‌, 1 ಲಕ್ಷ ರೂ. ವೆಚ್ಚದಲ್ಲಿ 10 ಮಕ್ಕಳ ವ್ಹೀಲ್‌ ಚೇರ್‌, 2 ಲಕ್ಷ ರೂ. ವೆಚ್ಚದಲ್ಲಿ 28 ವಯಸ್ಕರ ವ್ಹೀಲ್‌ ಚೇರ್‌, 2.5 ಲಕ್ಷ ರೂ. ವೆಚ್ಚದಲ್ಲಿ ಶ್ರವಣ ಸಾಧನ, 10 ಲಕ್ಷ ರೂ. ವೆಚ್ಚದಲ್ಲಿ 163 ಹೊಲಿಗೆ ಯಂತ್ರ ಸೇರಿದಂತೆ ಒಟ್ಟು 47 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಸಲಕರಣೆ ನೀಡಲಾಗಿದೆ ಎಂದರು. 

ಮೇಯರ್‌ ಅನಿತಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್‌ ಮಂಜಮ್ಮ, ಸದಸ್ಯರಾದ ದಿನೇಶ್‌ ಶೆಟ್ಟಿ, ಶಿವನಹಳ್ಳಿ ರಮೇಶ್‌, ಎಂ. ಹಾಲೇಶ್‌, ಪಿ.ಎನ್‌. ಚಂದ್ರಶೇಖರ್‌, ಅಶ್ವಿ‌ನಿ ವೇದಮೂರ್ತಿ, ಲಕ್ಷ್ಮೀದೇವಿ ಬಿ. ವೀರಣ್ಣ, ನಗರ ಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next