Advertisement

ನಗರಸಭೆ ಅಧಿಕಾರಕ್ಕೆ ಮೂರು ಪಕ್ಷಗಳ ಕಸರತ್ತು

09:46 PM Feb 05, 2020 | Lakshmi GovindaRaj |

ಹುಣಸೂರು: ನಗರಸಭೆ ಚುನಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಇದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಭಾರೀ ಕಸರತ್ತು ನಡೆಸುತ್ತಿವೆ. ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ.

Advertisement

ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳುತ್ತಿದ್ದರೆ, ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಕೆಲ ವಾರ್ಡ್‌ಗಳಿಗೆ ಭೇಟಿ ನೀಡಿ ಮುಖಂಡರೊಂದಿಗೆ ಚರ್ಚೆ ನಡೆಸಿ ಮತಯಾಚಿಸಿದರು. ಇವರೊಂದಿಗೆ ವಿವಿಧ‌ ಪಕ್ಷದಲ್ಲಿ ಟಿಕೆಟ್‌ ವಂಚಿತ ಪಕ್ಷೇತರರು ತಮ್ಮದೇ ಆದ ತಂತ್ರದಿಂದ ಮತ ಬೇಟೆಗಿಳಿದಿದ್ದು, ಚುನಾವಣಾ ಕಣ ರಂಗೇರಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಶಾಸಕ ಎಚ್‌.ಪಿ.ಮಂಜುನಾಥ್‌, ಬಿಜೆಪಿ ಪರವಾಗಿ ಮಾಜಿ ಸಚಿವರಾದ ಎಚ್‌.ವಿಶ್ವನಾಥ್‌, ಸಿ.ಎಚ್‌.ವಿಜಯಶಂಕರ್‌ ಹಾಗೂ ಜೆಡಿಎಸ್‌ ಪರವಾಗಿ ಕಳೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ದೇವರಹಳ್ಳಿ ಸೋಮಶೇಖರ್‌ ಹಾಗೂ ಮುಖಂಡರು ವಾರ್ಡ್‌ಗಳಿಗೆ ತೆರಳಿ ಮನೆ ಮನೆ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಪಕ್ಷಗಳಿಗೆ ಸೆಡ್ಡು ಹೊಡೆದಿರುವ ಪಕ್ಷೇತರ ಅಭ್ಯರ್ಥಿಗಳು ಮತ್ತು ಎಸ್‌ಡಿಪಿಐ ಪಕ್ಷವು ಇತರೆ ಪಕ್ಷಗಳಿಗೇನೂ ಕಮ್ಮಿ ಇಲ್ಲವೆಂಬಂತೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಪ್ರಚಾರ: ನಗರದ ವಿವಿಧ ವಾರ್ಡ್‌ಗಳಲ್ಲಿ ಬೆಂಬಲಿಗರೊಂದಿದೆ ಅಬ್ಬರದ ಪ್ರಚಾರ ನಡೆಸುತ್ತಿರುವ ಶಾಸಕ ಎಚ್‌.ಪಿ.ಮಂಜುನಾಥ್‌ ಆಯಾ ವಾರ್ಡ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದಾರೆ. ತಾವೇ ಅಧಿಕಾರದಲ್ಲಿದ್ದು, ನಾಗರೀಕರಿಗೆ ನರಕವೆನಿಸಿರುವ ನಗರಸಭೆಯನ್ನು ಶುದ್ಧಿಗೊಳಿಸಬೇಕಿದೆ ಹಾಗೂ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.

ನಿವೇಶನ ರಹಿತರಿಗೆ, ಬಡವರಿಗೆ ಸೂರು ಒದಗಿಸಬೇಕಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮುದ್ರೆ ಒತ್ತುವ ಮೂಲಕ ಅಭಿವೃದ್ಧಿಗೆ ನೆರವಾಗಿ ಎಂದು ಮನವಿ ಮಾಡಿದರು. ಪ್ರಚಾರ ಕಾರ್ಯದಲ್ಲಿ ಶಾಸಕರೊಂದಿಗೆ ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಶಿವಯ್ಯ, ಜಿಪಂ ಉಪಾಧ್ಯಕ್ಷೆ ಗೌರಮ್ಮಸೋಮಶೇಖರ್‌ ಸೇರಿದಂತೆ ಆಯಾ ವಾರ್ಡ್‌ಗಳ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.

Advertisement

ಜೆಡಿಎಸ್‌ ಪ್ರಚಾರ: ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿರುವ 28 ವಾರ್ಡ್‌ಗಳಲ್ಲೂ ಪ್ರಚಾರ ನಡೆಸುತ್ತಿರುವ ಜೆಡಿಎಸ್‌ ಮುಖಂಡ ದೇವರಹಳ್ಳಿ ಸೋಮಶೇಖರ್‌ ಮತಯಾಚಿಸಿದರು. ಜೆಡಿಎಸ್‌ ಪಕ್ಷವು ಅಧಿಕಾರ ಹಿಡಿದ ವೇಳೆ ನಗರ ಅಭಿವೃದ್ಧಿಗೆ ಉತ್ತಮವಾಗಿ ಕೆಲಸ ಮಾಡಿದೆ. ಕಳೆದ ಬಾರಿ 9 ಸ್ಥಾನಗಳಿಸಿದ್ದ ಪಕ್ಷವು ಈ ಬಾರಿ ಮತ್ತೆ ಅಧಿಕಾರ ಹಿಡಿದು ನಾಗರಿಕರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇವೆ.

ಆಡಳಿತದ ಅನುಭವವಿರುವ ನಮ್ಮ ಪಕ್ಷವನ್ನು ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು. ಇವರೊಂದಿಗೆ ಪಕ್ಷದ ಮುಖಂಡರಾದ ಹೊಸೂರು ಅಣ್ಣಯ್ಯ, ಹಬ್ಬನಕುಪ್ಪೆ ಜಯರಾಂ, ಗೋವಿಂದೇಗೌಡ, ರುದ್ರೇಗೌಡ ಸೇರಿದಂತೆ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು, ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಣಾಳಿಕೆ ಜಾರಿಗೆ ಬಿಜೆಪಿ ಬೆಂಬಲಿಸಿ: ನಗರದ ಅಭಿವೃದ್ಧಿ ಮಾಡುವ ಅಜೆಂಡಾವನ್ನಿಟ್ಟುಕೊಂಡು 22 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿರುವ ಮಾಜಿ ಮಂತ್ರಿಗಳಾದ ಎಚ್‌.ವಿಶ್ವನಾಥ್‌, ಸಿ.ಎಚ್‌.ವಿಜಯಶಂಕರ್‌ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ.

ನಮ್ಮ ದೂರದೃಷ್ಟಿಯ ಹುಣಸೂರು ನಗರವನ್ನು ಸಮಗ್ರ ಅಭಿವೃದ್ಧಿ ಪಡಿಸಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಸರ್ಕಾರದ‌ ಮೇಲೆ ಒತ್ತಡ ತಂದು ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಸಂಕಲ್ಪ ತೊಡುತ್ತೇವೆ. ನೀವು ನೀಡುವ ಒಂದೊಂದು ಮತವೂ ನಗರದ ವೇಗದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.

ಇವರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಂದ್ರಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಚುನಾವಣಾ ಉಸ್ತುವಾರಿ ರಾಜೇಂದ್ರ, ಜಿಪಂ ಮಾಜಿ ಸದಸ್ಯ ರಮೇಶಕುಮಾರ್‌, ಪಕ್ಷದ ಪ್ರಮುಖರಾದ ನಾಗರಾಜ ಮಲ್ಲಾಡಿ, ಹನಗೋಡು ಮಂಜುನಾಥ್‌, ಮಹದೇವ ಹೆಗ್ಗಡೆ, ಸತ್ಯಪ್ಪ ಗಿಣಿಮಹದೇವ್‌, ಕುನ್ನೇಗೌಡ ಸೇರಿದಂತೆ ಆಯಾ ವಾರ್ಡ್‌ನ ಅಭ್ಯರ್ಥಿಗಳು, ಬೆಂಬಲಿಗರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next