Advertisement

ರೈತ ಹೋರಾಟಕ್ಕೆ ಮುಚಳಂಬಿ ಕೊಡುಗೆ ಅಪಾರ

05:41 PM Oct 18, 2021 | Team Udayavani |

ಬೆಳಗಾವಿ: ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ರೈತ ಹೋರಾಟಗಾರ ಕಲ್ಯಾಣರಾವ್‌ ಮುಚಳಂಬಿ ಅವರು ರೈತರ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದರು. ರೈತರ ಅಭಿವೃದ್ಧಿಗೆ ಅನೇಕ ಹೋರಾಟಗಳನ್ನು ಮಾಡಿದ ಮುಚಳಂಬಿ ಅವರು ರೈತರ ಹೋರಾಟಕ್ಕೆ ನೀಡಿದ ಕೊಡುಗೆ ಅಪಾರ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಜರುಗಿದ ದಿ. ಕಲ್ಯಾಣರಾವ್‌ ಮುಚಳಂಬಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಾಡಿ ಅವರು, ರೈತ ಕುಟುಂಬದಿಂದ ಬಂದ ಮುಚಳಂಬಿ ಅವರು ರೈತರ ಬಗ್ಗೆ ಚಿಂತನೆ ನಡೆಸಿ, ರೈತರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸುವ ಉದ್ದೇಶದಿಂದ ಹಸಿರುಕ್ರಾಂತಿ ಪತ್ರಿಕೆ ಆರಂಭಿಸಿ ರೈತರ ಸಮಸ್ಯೆಗಳಿಗೆ ಒತ್ತು ನೀಡಿದರು. ಅಲ್ಲದೆ ರೈತ ಸಂಘದ ರಾಜ್ಯದ ಮುಖಂಡರಾಗಿ ರೈತರ ಸಲುವಾಗಿ ಹೋರಾಟ ಮಾಡಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸದಾ ಶ್ರಮಿಸಿದ ವ್ಯಕ್ತಿಯಾಗಿದ್ದರು ಎಂದರು.

ಸಮಾಜದ ಬಗ್ಗೆ ಚಿಂತನೆ ಮಾಡಿ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದಲ್ಲದೆ ಅದರ ಮೂಲಕ ಧಾರ್ಮಿಕ, ಸಾಂಸ್ಕೃತಿಕ, ಶೆ„ಕ್ಷಣಿಕ, ವಚನ ಸಾಹಿತ್ಯ, ನಾಡಹಬ್ಬ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರು ಒಬ್ಬ ವ್ಯಕ್ತಿಯಾಗದೆ ಸಮಾಜದ ಶಕ್ತಿಯಾಗಿದ್ದರು ಎಂದು ಕಡಾಡಿ ಹೇಳಿದರು.

ಮಾಜಿ ಸಚಿವ ಶಶಿಕಾಂತ ನಾಯಕ ಮಾತನಾಡಿ, ಕಲ್ಯಾಣರಾವ್‌ ಮುಚಳಂಬಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಸದಾ ಕಾಲ ರೈತರ ಪರ ಚಿಂತನೆ ಮಾಡಿ ಹೋರಾಟದ ಮೂಲಕ ರೈತರ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಮುಂದಾಗುತ್ತಿದ್ದರು. ಅವರ ರೈತ ಪರ ಹೋರಾಟ ಅವಿಸ್ಮರಣೀಯವಾದದ್ದು ಎಂದರು. ರಾಜಕೀಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಮುಚಳಂಬಿ ಅವರು ಒಬ್ಬ ಪತ್ರಕರ್ತರಾಗಿ, ರೈತ ಹೋರಾಟಗಾರರಾಗಿ, ಸಮಾಜದ ಚಿಂತಕರಾಗಿ ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದರು ಎಂದು ಹೇಳಿದರು.

ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಕಲ್ಯಾಣರಾವ್‌ ಮುಚಳಂಬಿ ರೈತರ ಬಗ್ಗೆ ಕಾಳಜಿ ವಹಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಹೋರಾಟದಲ್ಲಿ ಮುಂದಾದ ಕಾರ್ಯ ಶ್ಲಾಘನೀಯ. ಅವರ ಆದರ್ಶ ಎಲ್ಲರಿಗೂ ದಾರಿದೀಪವಾಗಲಿ ಎಂದರು. ಹಿರಿಯ ಮುಖಂಡ ರಾಮಣ್ಣ ಹುಕ್ಕೇರಿ ಮಾತನಾಡಿ, ಮುಚಳಂಬಿಯವರು ಒಂದು ಶಕ್ತಿ, ತಾವು ದುಡಿಯಬೇಕು, ಎಲ್ಲರಿಗೂ ದುಡಿಯಲು ಹಚ್ಚಬೇಕು ಎಂಬ ಮಹಾತ್ವಾಕಾಂಕ್ಷೆಯುಳ್ಳವರು.ಅವರು ಶ್ರಮಜೀವಿಯಾಗಿದ್ದರು. ಪತ್ರಿಕಾ ರಂಗದಲ್ಲಿ ನೂರಾರು ಜನರಿಗೆ ಕೆಲಸ ಮಾಡಲು ಅವಕಾಶವಿತ್ತವರು ಎಂದು ಸ್ಮರಿಸಿದರು.

Advertisement

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರೈತ ಮುಖಂಡರಾದ ಸಿದ್ದಗೌಡ ಪಾಟೀಲ, ಶಿವಪುತ್ರ ಜಕಬಾಳ, ಯಲ್ಲಪ್ಪಾ ಕಪ್ಪಲಗುದ್ದಿ, ಶ್ರೀಕಾಂತ ಶಿರಹಟ್ಟಿ, ಎಸ್‌.ಪಿ.ಮತ್ತಿಕೊಪ್ಪ ಮೊದಲಾದವರು ಉಪಸ್ಥಿತರಿದ್ದರು. ಶಿವಾಪೂರ ಕಾಡಸಿದ್ದೇಶ್ವರ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರೈತ ಧುರೀಣ ಸಿದಗೌಡ ಮೋದಗಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next