ಮೈಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಆಧಾರ ರಹಿತವಾಗಿ ಸಾಲ ಸೌಲಭ್ಯ ಕಲ್ಪಿಸುವಂತೆ ಸಂಸದ ಪ್ರತಾಪ್ ಸಿಂಹ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಡೆದ ಜಿಲ್ಲೆಯ ಬ್ಯಾಂಕುಗಳ ತ್ರೆ„ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮುದ್ರಾ ಯೋಜನೆಯಡಿ ಜಿಲ್ಲೆಯ ಬಹುತೇಕ ಬ್ಯಾಂಕುಗಳು, ಜನಸಾಮಾನ್ಯರು ಸ್ವಂತ ಉದ್ಯೋಗ ಕಂಡುಕೊಳ್ಳಲು ಕನಿಷ್ಠ 50 ಸಾವಿರ ರೂಪಾಯಿ ಸಾಲವನ್ನೂ ನೀಡುತ್ತಿಲ್ಲ, ಹೀಗಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ತಾಕೀತು: ಪ್ರಧಾನಿ ನರೇಂದ್ರ ಮೋದಿಯವರು ಸಣ್ಣ-ಪುಟ್ಟ ವ್ಯಾಪಾರಿಗಳಿಗೂ ನೆರವಾಗಲಿ ಎಂಬ ಉದ್ದೇಶದೊಂದಿಗೆ ಮುದ್ರಾ ಯೋಜನೆ ಜಾರಿಗೆ ತಂದಿದ್ದಾರೆ. ಆ ಯೋಜನೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು. ದೊಡ್ಡ ದೊಡ್ಡ ಉದ್ಯಮಿಗಳಿಗೆ ಬ್ಯಾಂಕ್‌ನವರು ಸಾಲ ಸೌಲಭ್ಯ ಒದಗಿಸುವ ಮೊದಲು, ಬೀದಿಬದಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುವವರಿಗೆ ಕನಿಷ್ಠ 50 ಸಾವಿರ ರೂ. ಸಾಲ ಸೌಲಭ್ಯ ನೀಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಎನ್.ಶಿವಲಿಂಗಯ್ಯ ಮಾತನಾಡಿ, ಮುದ್ರಾ ಯೋಜನೆಯಡಿ ಆಧಾರರಹಿತವಾಗಿ ಸಾಲ-ಸೌಲಭ್ಯ ನೀಡಲು ಅವಕಾಶವಿದೆ. ಬ್ಯಾಂಕುಗಳ ನಿಯಮನುಸಾರ ಮುಂದಿನ ದಿನಗಳಲ್ಲಿ ಸಾಲಸೌಲಭ್ಯ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಫಸಲ್ ವಿಮಾ ಅರಿವು: ರೈತರಿಗೆ ಬೆಳೆ ಸಾಲ, ಬೆಳೆವಿಮೆ ಸೇರಿದಂತೆ ಬ್ಯಾಂಕ್‌ಗಳಲ್ಲಿ ದೊರೆಯುವ ಸೇವಾ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ 535 ಬ್ಯಾಂಕ್ ಶಾಖೆಗಳಿದ್ದು, ರೈತರ ಅನುಕೂಲಕ್ಕಾಗಿ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮಮಟ್ಟದ ಬ್ಯಾಂಕ್‌ಗಳಲ್ಲಿ ಫಸಲ್ ವಿಮಾ ಯೋಜನೆ ಕುರಿತು ಕಡ್ಡಾಯವಾಗಿ ಭಿತ್ತಿಪತ್ರ ಹಾಕಬೇಕು. ರೈತರಿಗೆ ಅದರಲ್ಲಿ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಕಾರ್ಯಾಗಾರ: ಕೇಂದ್ರ ಸರ್ಕಾರದ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬ್ಯಾಂಕ್ ವತಿಯಿಂದ ಜಿಲ್ಲೆ ಅಥವಾ ತಾಲೂಕಿಗೊಂದು ಕಾರ್ಯಾಗಾರ ನಡೆಸಬೇಕು ಎಂದು ಹೇಳಿದರು. ಜಿಪಂ ಸಿಇಒ ಪಿ.ಶಿವಶಂಕರ್, ಬ್ಯಾಂಕ್ ಅಧಿಕಾರಿಗಳಾದ ನಟರಾಜ್, ಅರುಣ್, ಮುರುಳೀಧರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಅನ್ನಭಾಗ್ಯ, ಹೊಸಬೆಳಕು ಮೊದಲಾದ ಕೇಂದ್ರ ಸರ್ಕಾರದ ಯೋಜನೆಗಳಿಗೆ ಭಾಗ್ಯ ಎಂದು ಹೆಸರಿಟ್ಟುಕೊಂಡು ರಾಜ್ಯ ಸರ್ಕಾರ ಕನ್ನಭಾಗ್ಯ ಮಾಡುತ್ತಿದೆ.
-ಪ್ರತಾಪ್ ಸಿಂಹ, ಸಂಸದರು