Advertisement

ಸ್ವಾತಂತ್ರ್ಯದ ಆದರ್ಶಕ್ಕಾಗಿ ಸಾಲಗಾರರಾಗಿಯೇ ಮೃತಪಟ್ಟ ಎಂ.ಎಸ್‌.ಅಧಿಕಾರಿ

12:11 PM Aug 16, 2019 | Team Udayavani |

ಉಡುಪಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿ ಸೆರೆಮನೆ ವಾಸ ಅನುಭವಿಸಿದವರಲ್ಲಿ ಉಡುಪಿ ಸಮೀಪದ ಮಟ್ಟು ಮೂಲದ ಸುಬ್ರಾಯ ಅಧಿಕಾರಿ ಒಬ್ಬರು. ಇವರು ಎಂ.ಎಸ್‌.ಅಧಿಕಾರಿ ಎಂದೇ ಪ್ರಸಿದ್ಧರು.

Advertisement

ಆಗ ಮುಂಬಯಿ ಮತ್ತು ಮದ್ರಾಸ್‌ನಲ್ಲಿ ಮಾತ್ರ ಕಾನೂನು ಕಾಲೇಜು ಇದ್ದ ಕಾರಣ ಅಧಿಕಾರಿಯವರು ಮುಂಬಯಿಗೆ ತೆರಳಿ ಕಾನೂನು ಪದವೀಧರರಾದರು. ಆಗ ಸ್ವಾತಂತ್ರ್ಯದ ಹೋರಾಟದ ಕಾವು ಇತ್ತು. ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ಬೆಳಗ್ಗೆ ಪ್ರಭಾತ್‌ ಫೇರಿಯಲ್ಲಿ ಪಾಲ್ಗೊಂಡ ಅಧಿಕಾರಿಯವರನ್ನು ಬಂಧಿಸಿ ಯರವಾಡಾ ಜೈಲಿಗೆ ತಳ್ಳಲಾಯಿತು. ಆಗ ಕಾನೂನು ಕಟಕಟೆಯಲ್ಲಿ ಅಧಿಕಾರಿಯವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾದದ್ದು ಉಲ್ಲೇಖನೀಯ. ಇದು ನಡೆದದ್ದು 1930ರ ಡಿಸೆಂಬರ್‌ 7ರಂದು.

ಮುಂಬಯಿ ಉಚ್ಚ ನ್ಯಾಯಾ ಲಯಕ್ಕೆ ಬ್ರಿಟಿಷ್‌ ಸರಕಾರದ ವತಿಯಿಂದ ಮೇಲ್ಮನವಿ ಸಲ್ಲಿಕೆ ಯಾದದ್ದನ್ನು ಗಮನಿ ಸಿದರೆ ಕೆಳ ನ್ಯಾಯಾಲಯದಲ್ಲಿ ಅಧಿಕಾರಿ ಯವರಿಗೆ ನ್ಯಾಯದಾನವಾಗಿತ್ತು ಎಂದು ಅರ್ಥೈಸಬಹುದು. ಅಖೀಲ ಭಾರತ ಪ್ರಭಾತ್‌ ಫೇರಿ ಸಂಘವು ಕಾನೂನುಬಾಹಿರ ಸಂಘಟನೆ ಎಂಬ ಸರಕಾರದ ವಾದ, ಇದಕ್ಕೆ ಪ್ರತಿಯಾಗಿ ಪ್ರಭಾತ್‌ ಫೇರಿಗೆ ಧಾರ್ಮಿಕ ಆಯಾಮಗಳೂ ಇವೆ ಎಂಬ ಅಧಿಕಾರಿಯವರ ವಾದ ಇತ್ಯಾದಿಗಳು ದಾಖಲಾಗಿವೆ. ಚಳವಳಿಕಾರರ ಕೈಯಲ್ಲಿ ರಾಷ್ಟ್ರಧ್ವಜ, ತಾಳ ಗಳಿದ್ದವು. ರಾಷ್ಟ್ರಧ್ವಜ ಇದ್ದುದನ್ನು ಸರಕಾರವೂ ತಾಳವಿದ್ದದ್ದನ್ನು ಅಧಿಕಾರಿ ಯವರ ಪರವಾಗಿಯೂ ಉಲ್ಲೇಖೀ ಸಲಾಗುತ್ತದೆ. ಕೊನೆಗೆ ಅಧಿಕಾರಿಯವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಯಾಯಿತೆಂಬ ಮಾಹಿತಿ ದೊರಕುತ್ತದೆ.

‘ಜೈಲುವಾಸದ ಶಿಕ್ಷೆ ಆರು ತಿಂಗಳುಗಳಿಂದ ಮೂರು ತಿಂಗಳುಗಳಿಗೆ ಇಳಿಕೆಯಾಯಿತು’ ಎಂಬುದನ್ನು ಅವರ ಪುತ್ರ ರಾಂಚಿಯ ಕೋಲ್ ಇಂಡಿಯಾದ ನಿವೃತ್ತ ಮುಖ್ಯ ಎಂಜಿನಿಯರ್‌ ಪಾಂಡುರಂಗ ಅಧಿಕಾರಿಯವರು ಸ್ಮರಿಸಿಕೊಳ್ಳುತ್ತಾರೆ.

ಕಾನೂನು ಪದವಿ ಪಡೆದ ಅನಂತರ ಅಧಿಕಾರಿಯವರು ಕಾರ್ಕಳಕ್ಕೆ ಬಂದು ನೆಲೆಸಿದರು. ಕಾರ್ಕಳದ ರಾಮಸಮುದ್ರದ ಬಳಿ ಕುಷ್ಠ ರೋಗ ನಿವಾರಣ ಸಂಘವನ್ನು ಸ್ಥಾಪಿಸಿ ಅಲ್ಲಿ ಕುಷ್ಠ ರೋಗಿಗಳಿಗೆ ಔಷಧೋಪಚಾರ ನಡೆಸಿದರು. ಖಾದಿ, ಗಾಂಧಿ ಟೋಪಿ ಪ್ರಚಾರವನ್ನು ನಡೆಸುತ್ತಿದ್ದ ಅಧಿಕಾರಿಯವರು ಚಳವಳಿ, ಪ್ರಭಾತ್‌ ಫೇರಿಯಲ್ಲಿ ಕಾರ್ಕಳದಲ್ಲಿ ನಡೆಸುತ್ತಿದ್ದ ಸಮಯದಲ್ಲಿ ಪತ್ನಿ ಇಂದಿರಾಬಾಯಿ ಅಧಿಕಾರಿಯವರೂ ಚಿಕ್ಕಮಗುವನ್ನೂ ಕರೆದುಕೊಂಡು ಹೋಗುತ್ತಿದ್ದರು.

Advertisement

ಜನಪ್ರತಿನಿಧಿಗಳಾದ ಎ.ಬಿ. ಶೆಟ್ಟಿ, ಯು. ಶ್ರೀನಿವಾಸ ಮಲ್ಯರಂತವರು ಅಧಿಕಾರಿ ಯವರ ಸಂಪರ್ಕ ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ ಸರಕಾರದಲ್ಲಿ ಮಂತ್ರಿಗಳಾಗಿದ್ದ ಕೆ.ಆರ್‌.ಕಾರಂತರ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಉಡುಪಿ ಕಾನೂನು ಮಹಾವಿದ್ಯಾಲಯವನ್ನು ಡಾ| ಟಿ.ಎಂ.ಎ.ಪೈ ಅವರು ಸ್ಥಾಪಿಸಿದ ಬಳಿಕ ಕೆಲಕಾಲ ಉಪ ಪ್ರಾಂಶುಪಾಲರಾಗಿದ್ದರು. ಇದು ಸುಮಾರು 1960ರ ಸಮಯ.

‘ಎಂಜಲೆಲೆ ಕೊಂಡೊಯ್ಯಬಾರದು’

ಆ ಕಾಲದಲ್ಲಿ ತೀರಾ ಹಿಂದುಳಿದ ಕೊರಗ ಸಮುದಾಯದವರು ಇತರರು ಊಟ ಮಾಡಿದ ಎಲೆಯನ್ನು ಕೊಂಡೊಯ್ಯುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಶ್ರಾದ್ಧ ಮೊದಲಾದ ವಿಶೇಷಗಳು ನಡೆಯುವಾಗ ಕೊರಗ ಬಂಧುಗಳನ್ನು ಕರೆದು ಊಟ ಹಾಕಿ ಎಂಜಲೆಲೆಯನ್ನು ಕೊಂಡೊಯ್ಯಬಾರದು ಎಂದು ಕಿವಿಮಾತನ್ನೂ ಹೇಳುತ್ತಿದ್ದರು ಎನ್ನುತ್ತಾರೆ ಈಗ ಉಡುಪಿ ಅಜ್ಜರ ಕಾಡಿನಲ್ಲಿ ನೆಲೆಸಿರುವ ಪುತ್ರ ಪಾಂಡುರಂಗ ಅಧಿಕಾರಿಯವರು.

ಒಂದು ಇಂಚು ಆಸ್ತಿ ಉಳಿಸಲಿಲ್ಲ

ಈಗಲೂ ಹಿರಿಯ ತಲೆಮಾರಿನವರು ಸಿಕ್ಕಿದಾಗ ನಮ್ಮ ತಂದೆಯ ಬಗೆಗೆ ಅಭಿಮಾನದಿಂದ ಹೇಳುತ್ತಾರೆ. ಅವರು 65ನೆಯ ವರ್ಷದಲ್ಲಿ ಸಾಲಗಾರರಾಗಿಯೇ 1967ರಲ್ಲಿ ನಿಧನ ಹೊಂದಿದರು. ಒಂದು ಇಂಚು ಆಸ್ತಿಯನ್ನೂ ಉಳಿಸಿಕೊಂಡಿರಲಿಲ್ಲ. ಕಾನೂನು ಪದವೀಧರರಾದರೂ ವಕೀಲಿ ವೃತ್ತಿಯಲ್ಲಿ ಆಸಕ್ತರಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿಯೇ ಶಕ್ತಿಯನ್ನು ವಿನಿಯೋಗಿಸಿದರು.

  • ಪಾಂಡುರಂಗ ಅಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next