ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ರಾಜಕೀಯ ನಡೆ ಸದ್ಯಕ್ಕೆ ಸಸ್ಪೆನ್ಸ್.
ರಾಜಕೀಯವಾಗಿ ಯಾವುದಾದರೊಂದು ರಾಷ್ಟ್ರೀಯ ಪಕ್ಷದ ಜತೆ ಗುರುತಿಸಿಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಜೆ.ಪಿ.ನಗರ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರೂ ಒಮ್ಮತಕ್ಕೆ ಬರಲು ಆಗಲಿಲ್ಲ.
ಬೆಂಬಲಿಗರ ಸಭೆಯ ಬಳಿಕ ಮಾತನಾಡಿದ ಸುಮಲತಾ, ಮುಂದಿನ ವಾರ ಮಂಡ್ಯದಲ್ಲಿ ಸಮಾವೇಶ ನಡೆಸಿ ತನ್ನ ನಿರ್ಧಾರವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಕೆಲವರು ಬಿಜೆಪಿ ಸೇರುವಂತೆ ಮತ್ತೆ ಕೆಲವರು ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದರಾದರೂ ಅಂತಿಮ ತೀರ್ಮಾನ ನಿಮ್ಮದು. ಅದಕ್ಕೆ ನಮ್ಮ ಸಹಮತ ಇದೆ ಎಂದೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ವೈಯಕ್ತಿಕವಾಗಿ ಸುಮಲತಾರಿಗೆ ಕಾಂಗ್ರೆಸ್ ಸೇರ್ಪಡೆಗೆ ಒಲವು ಇದೆಯಾದರೂ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಬಿಜೆಪಿ ಸೂಕ್ತ ಎಂದು ಕೆಲವು ಬೆಂಬಲಿಗರ ಒತ್ತಾಯವಾಗಿದೆ.
ಕೃಷ್ಣ ಜತೆ ಚರ್ಚೆ
ಹೀಗಾಗಿಯೇ ಬೆಂಬಲಿಗರ ಸಭೆಗೆ ಮುನ್ನ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ರಾಜಕೀಯವಾಗಿ ಮುಂದುವರಿಯಬೇಕಾದ ಮಾರ್ಗದ ಬಗ್ಗೆ ಸಲಹೆ ಕೇಳಿದರು. ಈ ಹಿಂದೆ ಮಂಡ್ಯದಲ್ಲೂ ಬೆಂಬಲಿಗರ ಸಭೆ ಕರೆದು ಪಕ್ಷ ಸೇರ್ಪಡೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರು. ಆಗಲೂ ಕೆಲವರು ಬಿಜೆಪಿ ಎಂದರೆ ಮತ್ತೆ ಕೆಲವರು ಕಾಂಗ್ರೆಸ್ ಸೂಕ್ತ ಎಂದು ಪ್ರತಿಪಾದಿಸಿದ್ದರು. ಆಗಲೂ ಒಮ್ಮತ ಮೂಡಿರಲಿಲ್ಲ.
ಈಗ ಮುಂದಿನ ವಾರ ಮಂಡ್ಯದಲ್ಲೇ ಬೃಹತ್ ಸಮಾವೇಶ ನಡೆಸಿ ಘೋಷಿಸುವುದಾಗಿ ತಿಳಿಸಿದ್ದು ಬಹುತೇಕ ವಿಧಾನಸಭೆ ಚುನಾವಣೆ ಅಧಿಸೂಚನೆಗೆ ಮುನ್ನವೇ ತೀರ್ಮಾನ ಪ್ರಕಟವಾಗಬಹುದು ಎಂದು ಹೇಳಲಾಗಿದೆ.