ಬೆಂಗಳೂರು: ಅನುತ್ಪಾದಕ ಆಸ್ತಿ (ಎನ್‌ಪಿಎ) ರೂಪದ ಸಾಲ ಪ್ರಮಾಣ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು “ರೋಗಗ್ರಸ್ಥ’ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಲ್‌ರಾಜ್ ಮಿಶ್ರಾ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ “ಸಣ್ಣ ಕೈಗಾರಿಕೆಗಳ ಕನ್ನಡ ಕೈಪಿಡಿ’ ಹಾಗೂ ಕಾಸಿಯಾ ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳಿಸಿದ ಅವರು, “ಇಡೀ ವಿಶ್ವ ನಮ್ಮ ದೇಶದ ಸಣ್ಣ ಕೈಗಾರಿಕಾ ಕ್ಷೇತ್ರದ ಮೇಲೆ ದೃಷ್ಟಿ ನೆಟ್ಟಿದೆ. ಅದಕ್ಕೆ ಪೂರಕವಾಗಿ ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಬೆಳೆಸಲು ಕೇಂದ್ರ ಸರ್ಕಾರ ಹಲವು ಹೆಜ್ಜೆಗಳನ್ನಿಟ್ಟಿದೆ.
ಸಣ್ಣ ಕೈಗಾರಿಕೆಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ರೂಪದ ಸಾಲ ಪ್ರಮಾಣ ಹೆಚ್ಚಾಗುತ್ತಿದ್ದು, ಸಣ್ಣ ಕೈಗಾರಿಕಾ ಕ್ಷೇತ್ರದ ಒಟ್ಟು ಸಾಲ 12 ಲಕ್ಷ ಕೋಟಿ ರೂ. ಇದೆ. ಅದರಲ್ಲಿ ಎನ್‌ಪಿಎ ಪ್ರಮಾಣ 54 ಸಾವಿರ ಕೋಟಿ ರೂ. ಇದೆ. ಇದರ ಪರಿಣಾಮವಾಗಿ ಅನೇಕ ಕೈಗಾರಿಕಾ ಘಟಕಗಳು ರೋಗಗ್ರಸ್ಥ ಘಟಕಗಳ ಸಾಲಿಗೆ ಸೇರುತ್ತಿವೆ. ಆದ್ದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ರೋಗಗ್ರಸ್ಥ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಆದ್ಯತಾ ವಿಷಯವಾಗಿದೆ,’ ಎಂದು ಮಿಶ್ರಾ ಹೇಳಿದರು.
ಸಣ್ಣ ಕೈಗಾರಿಕೆಗಳ ಸಾಲ ಮರುಹೊಂದಾಣಿಕೆ ಮತ್ತು ಪುನಶ್ಚೇತನಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆಗಳ 10 ಲಕ್ಷ ರೂ. ಮೇಲ್ಪಟ್ಟ ಎನ್‌ಪಿಎ ಮರುಹೊಂದಾಣಿಕೆಗೆ ಬ್ಯಾಂಕ್ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸಾಲ ಖಾತರಿ ಯೋಜನೆ ಮಿತಿಯನ್ನು 1 ಕೋಟಿ ರೂ.ಗಳಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಯೋಜನೆಯ ಆವರ್ತ ನಿಧಿ ಪ್ರಮಾಣವನ್ನು 2,500 ಕೋಟಿಯಿಂದ 7.500 ಕೋಟಿ ರೂ.ಗೆ ಏರಿಸಲಾಗಿದೆ. ಇದರಿಂದ ಇಲ್ಲಿವರೆಗೆ 22 ಲಕ್ಷ ಸಣ್ಣ ಕೈಗಾರಿಕಾ ಘಟಕಗಳು ಪ್ರಯೋಜನ ಪಡೆದುಕೊಂಡಿವೆ. ಸಣ್ಣ ಕೈಗಾರಿಕೆಗಳ ನೋಂದಣಿಗೆ ಡಾಟಾ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಲ್ಲಿವರೆಗೆ 30 ಲಕ್ಷ ಘಟಕಗಳು ನೋಂದಣಿ ಮಾಡಿಸಿಕೊಂಡಿವೆ ಎಂದು ಕಲ್‌ರಾಜ್ ಮಿಶ್ರಾ ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಅಧ್ಯಕ್ಷ ರವೀಂದ್ರನಾಥ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ವಿ. ಸಾವಿತ್ರಿ, ಕಾಸಿಯಾ ಅಧ್ಯಕ್ಷ ಎ. ಪದ್ಮನಾಭ, ಉಪಾಧ್ಯಕ್ಷ ಆರ್. ಹನುಮಂತೇಗೌಡ ಮತ್ತಿತರರು ಇದ್ದರು.