ಬೀದರ: ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪ್ರತಿ ವರ್ಷ 40 ಜನರಿಗೆ ಉಚಿತ ಪ್ರವೇಶ ಒದಗಿಸಲಾಗುತ್ತಿದೆ ಎಂದು ಮಾತೆ ಮಾಣಿಕೇಶ್ವರಿ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಹೇಳಿದರು.
ನಗರದ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ ದ್ವಿತೀಯ ಪಿಯು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವರೆಗೆ ಸಂಸ್ಥೆಯಿಂದ ಸುಮಾರು 400 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವುದೇ ಕಾಲೇಜಿನ ಮುಖ್ಯ ಧ್ಯೇಯವಾಗಿದೆ.
ಕಾಲೇಜಿನಲ್ಲಿ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನೂ ಹೇಳಿಕೊಡಲಾಗುತ್ತಿದೆ. ಕಾಲೇಜಿನಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆ, ವೈದ್ಯ, ಎಂಜಿನಿಯರ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲ ವಿದ್ಯಾರ್ಥಿಗಳಲ್ಲಿ ಇದ್ದರೆ ಸಾಧನೆ ಸಾಧ್ಯವಾಗುತ್ತದೆ. ಮಾತೆ ಮಾಣಿಕೇಶ್ವರಿ ಕಾಲೇಜು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಅಂದುಕೊಂಡದ್ದನ್ನು ಸಾಧಿಸಬಹುದು. ಸಾಧನೆಯ ಮಾರ್ಗದಲ್ಲಿ ಅಡ್ಡಿ ಆತಂಕಗಳು ಬರುವುದು ಸಹಜ. ಅವುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಬೇಕು. ಗುರಿ ಮುಟ್ಟುವವರೆಗೂ ವಿರಮಿಸಬಾರದು ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದೆ. ಯೋಜನಾ ಬದ್ಧವಾಗಿ ವ್ಯಾಸಂಗ ಮಾಡಿದರೆ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಬಹುದು ಎಂದು ಹೇಳಿದರು. ಖ್ಯಾತ ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ಚಟಾಕಿಗಳನ್ನು ಹಾರಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಸಂಗೀತ ಕಲಾವಿದ ಸಂಜುಕುಮಾರ ಸ್ವಾಮಿ ಹಾಗೂ ಅಂಗಡಿಗರು ಗಾಯನ ಪ್ರಸ್ತುತಪಡಿಸಿ ಮನ ರಂಜಿಸಿದರು.
ಮಾತೆ ಮಾಣಿಕೇಶ್ವರಿ ಕಾಲೇಜು ಪ್ರಾಚಾರ್ಯ ಸುರೇಶ ಕುಲಕರ್ಣಿ, ಐಇಎಸ್ ಅಧಿಕಾರಿ ಅನಿಲ ರಾಠೊಡ್, ನಾಗೇಶ ಪ್ರಭಾ, ವಿದ್ಯಾನಿ ಪ್ರೌಢಶಾಲೆಯ ಕಾರ್ಯದರ್ಶಿ ಗಣಪತಿ ಸೋಲಪೂರೆ, ರವೀಂದ್ರ ಪ್ರೌಢಶಾಲೆಯ ಅಧ್ಯಕ್ಷೆ ಪಿ. ಸ್ವರ್ಣಾ ಉಡುಪ, ಲಕ್ಷ್ಮೀಬಾಯಿ ಕಮಠಾಣೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ ಲಕ್ಕಶೆಟ್ಟಿ, ಜೀಜಾಮಾತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ, ಇಂದಿರಾಬಾಯಿ ಗುರುತಪ್ಪ ಶೆಟಕಾರ ಪೌಢಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ, ದಿ| ಮಿಲೇನಿಯಂ ಪ್ರೌಢಶಾಲೆಯ ಶಿವಕುಮಾರ ಬಿರಾದಾರ, ಗಂಗೋತ್ರಿ ಪ್ರೌಢಶಾಲೆಯ ಶಿಕ್ಷಕ ಷಣ್ಮುಖಯ್ಯ ಹಿರೇಮಠ, ಉದಯಕುಮಾರ ಬಿರಾದಾರ, ಅರುಣೋದಯ ಪ್ರೌಢಶಾಲೆಯ ನಿರ್ದೇಶಕ ಸಂತೋಷ ಮಂಗಳೂರೆ, ಆರತಿ ಆರ್. ಕುಲಕರ್ಣಿ, ವೈಶಾಲಿ ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಕಾಲೇಜು ಆಡಳಿತಾಧಿಕಾರಿ ಲೋಕೇಶ ಉಡಬಾಳೆ ನಿರೂಪಿಸಿದರು. ಸಂದೇಶ ಕುಲಕರ್ಣಿ ವಂದಿಸಿದರು.