Advertisement

ಶಿಕ್ಷಣ ಇಲಾಖೆ ಅಧಿಕಾರಿಗಳ ಅಮಾನತಿಗೆ ಆಗ್ರಹ

10:28 AM Aug 31, 2017 | Team Udayavani |

ಸೇಡಂ: ಶಿಕ್ಷಣ ಇಲಾಖೆ ಅಧಿಕಾರಿಗಳೇ ಇಲಾಖೆಗೆ ದ್ರೋಹ ಬಗೆಯುತ್ತಿದ್ದರೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಬುಧವಾರ ರಾಜ್ಯ ಹೆದ್ದಾರಿ ತಡೆದು ಬೃಹತ್‌ ಪ್ರತಿಭಟನೆ ನಡೆಸಿತು.

Advertisement

ಪಟ್ಟಣದ ಅಂಬೇಡ್ಕರ್‌ ಪುತ್ಥಳಿ ಸ್ಥಳದಿಂದ ಕಲಬುರಗಿ ಕ್ರಾಸ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಸಂಸ ಕಾರ್ಯಕರ್ತರು ಶಿಕ್ಷಣ ಇಲಾಖೆ ಮತ್ತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಕಲಬುರಗಿ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಅಧಿಕಾರ ದುರುಪಯೋಗ
ಮಾಡಿಕೊಂಡವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಿಕ್ಷಕ ವೃತ್ತಿಯಲ್ಲಿರುವ ಮಲ್ಲಯ್ಯ ಗುತ್ತೇದಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ತಮ್ಮ ಮಕ್ಕಳ ದಾಖಲಾತಿಯನ್ನು ಸರ್ಕಾರಿ ಶಾಲೆಯಲ್ಲಿ ಮಾಡಿಸಿ, ಖಾಸಗಿ ಶಿಕ್ಷಣ ಕೊಡಿಸುತ್ತಿದ್ದಾರೆ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ಈ ಕುರಿತು ಮೇಲಾಧಿ ಕಾರಿಗಳ ಗಮನಕ್ಕೆ ಇದ್ದರೂ ಸುಮ್ಮನಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ಆರೋಪಿಸಿದರು.

ಪ್ರಭಾರಿ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಶಾಲಾ ಮಕ್ಕಳ ಸಮವಸ್ತ್ರ ಮತ್ತು ಶೂ ಖರೀದಿಯಲ್ಲಿ ಭಾರಿ ಅವ್ಯವಹಾರ
ಮಾಡಿದ್ದಾರೆ. ಶಿಕ್ಷಕ ಸುರೇಶ ಕುಲಕರ್ಣಿ ಶಿಕ್ಷಣ ಇಲಾಖೆಯಲ್ಲಿ ದಾಖಲಾತಿ ಇಲ್ಲದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಈ ಮೂವರು ಶಿಕ್ಷಣ ಇಲಾಖೆ ಕೊಳ್ಳೆ ಹೊಡೆಯುತ್ತಿದ್ದಾರೆ. ಕೂಡಲೇ ಇಂತವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಕೆಲಸ ಮಾಡುವ 200 ಜನ ಅತಿಥಿ ಶಿಕ್ಷಕರಿಗೆ ಗೌರವಧನ ನೀಡದೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೂಡಲೇ ಈ ರೀತಿ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

ನಂತರ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತ ಪರಶುರಾಮ ಮತ್ತು ತಹಶೀಲ್ದಾರ ಸುಬ್ಬಣ್ಣ ಜಮಖಂಡಿಗೆ ಮನವಿ ಪತ್ರ
ಸಲ್ಲಿಸಲಾಯಿತು. ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ, ದಸಂಸ ಗೌರವಾಧ್ಯಕ್ಷ ಅನಂತಪ್ಪ ಮೋತಕಪಲ್ಲಿ, ತಾಲೂಕಾಧ್ಯಕ್ಷ ಶಿವಪುತ್ರಪ್ಪ ಮೋಘಾ, ಉಪ ವಿಭಾಗೀಯ ಅಧ್ಯಕ್ಷ ಅಶೋಕ ಫಿರಂಗಿ, ಪ್ರಧಾನ ಕಾರ್ಯದರ್ಶಿ ವೆಂಕಟಪ್ಪ ಮೋತಕಪಲ್ಲಿ, ಅನೀಲ ರನ್ನೆಟ್ಲಾ, ಲೋಕೇಶ ಹಂದರಕಿ, ಭೀಮಶಪ್ಪ ಮುನಕನಪಲ್ಲಿ, ನಾಗೇಶ ಹೊಡೆಬೀರನಹಳ್ಳಿ, ಮೌನೇಶ ಬಡಿಗೇರ, ಸಂತೋಷ ಬಟಗೇರಾ, ಆನಂದಪ್ಪ ಚಂದಾಪುರ, ರವಿ, ಅಂಜಯ್ಯ
ಉರಕುಲ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next