ಸೇಡಂ: ತಾಲೂಕಿನ ಯಾನಾಗುಂದಿ ಗ್ರಾಮದ ಸುಕ್ಷೇತ್ರ ಮಾಣಿಕ್ಯಗಿರಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನ ಭಾಗ್ಯ ಕೊನೆಗೂ ಭಕ್ತರಿಗೆ ದೊರೆತಿದೆ. ಪ್ರತಿ ಭಾನುವಾರ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯಾನಾಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ನೆಲೆಸಿರುವ ಗುಹೆಯ ಹೊರಭಾಗದ ಕೋಣೆಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅನಾರೋಗ್ಯ ಹಿನ್ನೆಲೆಯಲ್ಲಿ ಕೋಣೆಯ ಕೊನೇ ಭಾಗದಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೊರ ಭಾಗದಿಂದ ಭಕ್ತರು ಸಾಲುಗಟ್ಟಿ ಬರಲು ಸೂಚಿಸಲಾಗಿದೆ.
ಸಣ್ಣ ಗೇಟ್ ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. ಅಮ್ಮನವರ ಆರೋಗ್ಯ ಕಾಪಾಡುವ ಮತ್ತು ಸಾರ್ವಜನಿಕ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಕೋರ್ಟ್ ಮೆಟ್ಟಿಲೇರಿದ ಮೇಲೆ ಟ್ರಸ್ಟ್‌ನವರು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಸಾರ್ವಜನಿಕ ಪ್ರಕಟಣೆ ಇಲ್ಲ: ಅಮ್ಮನವರು ಕೋಟ್ಯಂತರ ಭಕ್ತರ ಆರಾಧ್ಯ ದೈವ. ಅವರ ಆರೋಗ್ಯದಲ್ಲಿ ಏರುಪೇರಾದ ಪ್ರಯುಕ್ತ ಅಮ್ಮನವರ ಮುಕ್ತ ದರ್ಶನ ಮತ್ತು ಆರೋಗ್ಯಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ನಂತರ, ಕೋರ್ಟ್ ಸಹ ಅಮ್ಮನವರ ಆರೋಗ್ಯದಲ್ಲಿ ಸಮಸ್ಯೆ ಇರುವ ಬಗ್ಗೆ ವರದಿ ಪಡೆದಿತ್ತು. ನಂತರ, ಎಚ್ಚೆತ್ತುಕೊಂಡ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಮ್ಮನವರಿಗೆ ಸುಸಜ್ಜಿತ ಬೆಡ್, ಕೋಣೆ ಮತ್ತು ಮಹಿಳಾ ಸೇವಕಿ ನೇಮಿಸಿತ್ತು.
ಈಗ ಪ್ರತಿ ಭಾನುವಾರ ಅಮ್ಮನವರ ದರ್ಶನ ಕಲ್ಪಿಸಲು ಮುಂದಾಗಿದೆ. ಆದರೆ, ಸಾರ್ವಜನಿಕವಾಗಿ ಎಲ್ಲೂ ಸಹ ಅಮ್ಮನವರು ದರ್ಶನ ನೀಡುತ್ತಿರುವ ಬಗ್ಗೆ ಪ್ರಕಟಣೆ ನೀಡಿಲ್ಲ. ಕೇವಲ ಭಕ್ತರಿಂದ ಭಕ್ತರಿಗೆ ದೊರೆಯುವ ಮಾಹಿತಿ ಆಧಾರದ ಮೇಲೆ ಜನ ಬರುತ್ತಿದ್ದಾರೆ.
ದರ್ಶನಕ್ಕೆ ಅವಕಾಶ ನೀಡುವ ಕುರಿತು ಕೋರ್ಟ್ ಮೆಟ್ಟಿಲೇರಿದ ಮೇಲೆ ಸುಸಜ್ಜಿತ ವ್ಯವಸ್ಥೆ, ಅಮ್ಮನವರಿಗೆ ಮಹಿಳಾ ಸೇವಕಿ ನೇಮಕ ಮತ್ತು ಪ್ರತಿ ಭಾನುವಾರ ಮುಕ್ತ ದರ್ಶನ ಕಲ್ಪಿಸಲು ಟ್ರಸ್ಟ್ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಅಮ್ಮನವರ ಬಗ್ಗೆ ನಿಜವಾದ ಕಾಳಜಿ ಇದ್ದದ್ದೇ ಆದಲ್ಲಿ ಇದನ್ನೆಲ್ಲಾ ಮೊದಲೇ ಮಾಡಬೇಕಿತ್ತು.
-ಶಿವಕುಮಾರ ನಿಡಗುಂದಾ, ಸಾಮಾಜಿಕ ಕಾರ್ಯಕರ್ತ, ಅರ್ಜಿದಾರ