Advertisement

ಪಂಚೇಂದ್ರಿಯಗಳ ಪ್ರಚೋದನೆ ಪರಿಪೂರ್ಣ ಪ್ರೇಮ

02:35 PM Aug 29, 2017 | |

ನಾಲಿಗೆಗೆ ರುಚಿಸುವ ತಿನಿಸುಗಳು ಕೂಡ ಶೃಂಗಾರಕ್ಕೆ ಪ್ರಚೋದನೆ ನೀಡುತ್ತವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಪ್ರೇಮಿ ತನ್ನ ನಾಲಿಗೆ /ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು. ಅದಕ್ಕೆಂದೇ ಹಿಂದಿನ ಕಾಲದಿಂದ ಊಟದ ಅನಂತರ ಎಲೆ ಅಡಿಕೆ ಹಾಕಿಕೊಳ್ಳುವ ಪದ್ಧತಿ ಇದೆ. 

Advertisement

ಪಂಚೇಂದ್ರಿಯಗಳನ್ನು ಪರಿಚಯಿಸಿ ಪ್ರಚೋದಿಸುವವನೇ ಪರಿಪೂರ್ಣ ಪ್ರೇಮಿ. ಪ್ರೇಮಿಗಳು ಯಾವ ಇಂದ್ರಿಯವನ್ನು ಕಡೆಗಣಿಸದೆ ಪರಿಪಕ್ವವಾಗಿ ಅರಿತುಕೊಳ್ಳುವುದರಿಂದ ಪ್ರೇಮ ಎಲ್ಲ ವಯಸ್ಸಿನಲ್ಲೂ ಚೈತನ್ಯದಾಯಕವಾಗಿರುತ್ತದೆ. ಕಣ್ಣು ಕಿವಿ ಆದ ಮೇಲೆ ಈಗ ಮೂಗಿನ ಸರದಿ.

ಮೂಗು: ಬಾಹ್ಯ ಸೌಂದರ್ಯಕ್ಕೆ ಮೆರುಗು ಕೊಡುವ ಅಂಗ. ಪರಿಪೂರ್ಣ ಪ್ರೇಮಿಯನ್ನು ಆಯ್ಕೆ ಮಾಡುವುದಕ್ಕೆ ಮೂಗು ಕೂಡ ಒಬ್ಬ ತೀರ್ಪುಗಾರ. ಮೂಗಿಗೆ ಬಹಳ ಪ್ರಿಯವಾದದ್ದು ಸುವಾಸನೆ. ಸುಗಂಧವನ್ನು ಆಳವಾಗಿ ಒಳಗೆಳೆದುಕೊಂಡಾಗ ನಮಗೆ ಮತ್ತೇರುತ್ತದೆ. ಅದು ಹಾಗೆಯೇ ಮೆಲ್ಲಗೆ ಕಣ್ಣು ಮುಚ್ಚಿಸುತ್ತದೆ. ದೇಹವು ಅವ್ಯಕ್ತ ಸುಖದಲ್ಲಿ ಮುಳುಗುತ್ತದೆ. ಇದನ್ನು ನಾವೆಲ್ಲ ಅನುಭವಿಸಿದ್ದೇವೆ. ಇದು ನನಗೆ ಎಷ್ಟೋ ಬಾರಿ ವಾಸ್ತವವಾಗಿ ಖಚಿತವಾಗಿದೆ. ಎಲ್ಲೋ ನಡೆದು ಹೋಗುತ್ತಿರುವಾಗ ಒಬ್ಬ ವ್ಯಕ್ತಿ ನನ್ನ ಮುಂದೆ ಹಾದು ಹೋದಾಗ ಅವನ ದೇಹದಿಂದ ಹೊರಹೊಮ್ಮುವ ಸುಗಂಧವಿದೆಯಲ್ಲ, ಅದು ಅವನು ಯಾರೆಂದು ಅವನ ಕಡೆ ತಿರುಗಿ ನೋಡುವಂತೆ ನನ್ನನ್ನು ಪ್ರಚೋದಿಸಿದೆ. ಆಗತಾನೇ ಅರಳಿರುವ ಮಲ್ಲಿಗೆ ಹೂವಿನ ಪರಿಮಳ ಹೇಗೆ ಮತ್ತೆ ಮತ್ತೆ ನಮ್ಮನ್ನು ಸೆಳೆದು ಮತ್ತೇರಿಸಬೇಕು. ಹಾಗೆ ನಮ್ಮ ದೇಹದ ಸುಗಂಧ ನಮ್ಮ ಪ್ರೇಮಿಗೆ ಮತ್ತೇರಿಸಬೇಕು. ಮೂಗು ತನಗಿಷ್ಟವಾಗದ ದುರ್ಗಂಧವನ್ನು ತಿರಸ್ಕರಿಸುತ್ತದೆ. ಥೂ…ಅವನ/ಅವಳ ಬಳಿ ಕೆಟ್ಟ ವಾಸನೆ ಎಂದು ನಮಗೆ ಸೂಚನೆ ನೀಡುವುದೇ ಮೂಗು. ದೇಹ ಮಾತ್ರವಲ್ಲ, ತನ್ನ ಪ್ರೇಮಿಯ ಮೂಗಿಗೆ ಹಿಡಿಸುವ ಆಹಾರ ಸೇವಿಸಿ ಸಂಗಾತಿಯ ಹತ್ತಿರ ಹೋದರೆ ಬಾಯಿಯಿಂದ ಬರುವ ಉಸಿರೇ ಸಂಗಾತಿಯನ್ನು ತೃಪ್ತಿ ಪಡಿಸಬಹುದು. ಬಾಯಿಯಿಂದ ದುರ್ನಾತ ಬರುತ್ತಿದ್ದರೆ ಸಂಗಾತಿಗೆ ಅವನ/ಅವಳ ಮೇಲಿರುವ ಪ್ರೇಮದ ಚೈತನ್ಯವೇ ಕಡಿಮೆಯಾಗಬಹುದು.

ಎಷ್ಟೋ ಜನ ಪ್ರೀತಿಯ ಜತೆಗೂ ಅಡೆjಸ್ಟ್‌ ಮಾಡಿಕೊಂಡು ಬದುಕುತ್ತಾರೆ. ತನಗೆ ಬೇಕಾದ್ದನ್ನು ಪಡೆಯದೆ ತನ್ನವರಿಗೆ ಬೇಕಾದ್ದನ್ನು ನೀಡದಿದ್ದರೆ ಅವನು ಹೇಗೆ ಪರಿಪೂರ್ಣ ಪ್ರೇಮಿಯಾಗುತ್ತಾನೆ? ಯಾವಾಗಲೂ ತಮ್ಮ ದೇಹವನ್ನು ಶುದ್ಧವಾಗಿ, ಶುಚಿಯಾಗಿ (ಪ್ರೇಮದಲ್ಲಿ ರುಚಿಯಾಗಿ) ಸುಗಂಧಮಯವಾಗಿ ಇಟ್ಟುಕೊಳ್ಳುವುದು ಎಲ್ಲ ವಯಸ್ಸಿನ ಪ್ರೇಮಿಗಳಿಗೂ ಅತ್ಯವಶ್ಯಕ.  ಪ್ರೇಮ ಹೇಗೆ ಪರಿಶುದ್ಧವೋ ದೇಹವೂ ಹಾಗೇ ಇರಬೇಕಲ್ಲವೇ?

ನಾಲಿಗೆ: ರುಚಿಯನ್ನು ಸವಿಯುವುದರ ಜತೆಗೆ ಮಾತುಗಳು ಬಾಯಿಯಿಂದ ಹೊರಹೊಮ್ಮಲು ನಾಲಿಗೆಯೇ ಸಾಧನ. ಒಬ್ಬ ಪ್ರೇಮಿಗೆ ತನ್ನ ಪ್ರೇಯಸಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಎಷ್ಟು ಹಿತಕರವಾಗಿರುತ್ತದೆಯೋ ಅವನು ಆಡುವ ಮಾತುಗಳೂ ಅವಳಿಗೆ ಅಷ್ಟೇ ಸುಖ ಕೊಡಬೇಕು slip  of the toungue – ನಾಲಿಗೆ ಹೊರಳಿ ಆಡಿದ ಒಂದೇ ಒಂದು ಅಹಿತಕರ ಮಾತಾದರೂ ಅದನ್ನು ಬೇರೆ ಇಂದ್ರಿಯಗಳು ತಿರಸ್ಕರಿಸುತ್ತವೆ.

Advertisement

ಮಾತೇ ಪ್ರೀತಿಯ ಆಸ್ತಿ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಇತ್ತೀಚೆಗಂತೂ ಮೊಬೈಲ್‌ ಬಂದ ಮೇಲೆ ಎಷ್ಟೋ ಜನ ಮುಖಪರಿಚಯವೇ ಇಲ್ಲದೆ ಬರೀ ಮಾತುಗಳನ್ನು ಕೇಳಿಕೊಂಡೇ ಪ್ರೀತಿಯಲ್ಲಿ ಬೀಳುವುದುಂಟು.

ನಾಲಿಗೆಗೆ ರುಚಿಸುವ ತಿನಿಸುಗಳು ಕೂಡ ಶೃಂಗಾರಕ್ಕೆ ಪ್ರಚೋದನೆ ನೀಡುತ್ತವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಪ್ರೇಮಿ ತನ್ನ ನಾಲಿಗೆ /ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು. ಅದಕ್ಕೆಂದೇ ಹಿಂದಿನ ಕಾಲದಿಂದ ಊಟದ ಅನಂತರ ಎಲೆ ಅಡಿಕೆ ಹಾಕಿಕೊಳ್ಳುವ ಪದ್ಧತಿ ಇದೆ. ಸುಣ್ಣ ನಾಲಿಗೆಯನ್ನು ಶುದ್ಧಿ ಮಾಡುವುದಲ್ಲದೆ ಬಾಯಿಯಿಂದ ಹೊರಹೊಮ್ಮುವ ಕೆಟ್ಟ ವಾಸನೆಯನ್ನು ತಡೆಗಟ್ಟುತ್ತದೆ. ಅಡಕೆ ಮತ್ತು ಎಲೆಯಲ್ಲಿ ಸುಗಂಧವಿದೆ.

ನಾಲಿಗೆ ಬೇರೆ ಇಂದ್ರಿಯಗಳಿಗಿಂತ ಒಂದು ಪಟ್ಟು ಹೆಚ್ಚು ಮಹತ್ವ ಪಡೆದಿದೆ. ಇಂತಹ ಇಂದ್ರಿಯ ತನ್ನ ಈ ವಿಶೇಷ ಸಾಮರ್ಥ್ಯದಿಂದ ಇನ್ನೊಂದು ಮಹಾಕಾರ್ಯಕ್ಕೆ ಮುಂದಾಗುತ್ತದೆ. ಅದೇ ಪ್ರೀತಿಸುವವರ ನಡುವೆ ಭಾವನೆಗಳ ತರಂಗ ಮೂಡಿಸುವ ಮೂಲವಾಗುತ್ತದೆ.

ಪ್ರೇಮಿಗಳಿಗೆ ಮಾತೇ ಚೈತನ್ಯ ತುಂಬುವುದು, ತನ್ನನ್ನು ಪ್ರೀತಿಸುವವರು ತಮ್ಮೊಟ್ಟಿಗೆ ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳಲಿ ಎಂಬುದು ಪ್ರೀತಿಸುವವರ ಮೊದಲ ಆಶಯವಾಗಿರುತ್ತದೆ. ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರೇಮಿಯಿಂದ ಬಯಸುವ ಸಾಮಾನ್ಯ ಸಂಗತಿಯೆಂದರೆ ಹಿತವಾದ, ಪ್ರೀತಿಯ ಮಾತುಗಳು. ಈ ಮಾತು ಎಂಬ ಮಾಯೆಯನ್ನು ಮನುಷ್ಯನಲ್ಲಿ ಹುಟ್ಟಿಸದಿದ್ದರೆ, ಮನುಷ್ಯನ ಪ್ರೀತಿಯು ಬೇರೆ ಪ್ರಾಣಿಗಳ ಪ್ರೀತಿಯಂತೆ ಸಂತತಿ ಉತ್ಪಾದನೆಗೆ ಮಾತ್ರ ಸೀಮಿತವಾಗಿರುತ್ತಿತ್ತು.

ಚರ್ಮ: ಮನುಷ್ಯನ ಆಕಾರಕ್ಕೆ ಮತ್ತಷ್ಟು ಮೆರುಗು ಕೊಡುವುದು ಚರ್ಮ. ಉಳಿದ ಇಂದ್ರಿಯಗಳು ಸಣ್ಣ ಸಣ್ಣ ಆಕಾರಗಳಲ್ಲಿ ತಮ್ಮ ಕಾರ್ಯ ನಿರ್ವಹಿಸಿದರೆ, ಚರ್ಮ ಇಡೀ ದೇಹವನ್ನೇ ಆವರಿಸಿಕೊಂಡಿದೆ. ಚರ್ಮ ನಮ್ಮ ಸೌಂದರ್ಯವನ್ನು ಹೊರುವ ಅಂಗ. ಪ್ರೀತಿ ಮನುಷ್ಯನ ಬಾಳಲ್ಲಿ ಪ್ರವೇಶಿಸಿದಾಗ ಬಾಕಿ ಇಂದ್ರಿಯಗಳ ಚರ್ಮವೂ ಅದನ್ನು ಅನುಭವಿಸಲಾರಂಭಿಸುತ್ತದೆ. ಗಮನಿಸಬೇಕಾದ ವಿಷಯವೆಂದರೆ ಚರ್ಮಕ್ಕೆ ಉಂಟಾಗುವ ಸ್ಪರ್ಶವೇ ಪ್ರೀತಿಯಲ್ಲ ಚರ್ಮದ ಮೂಲಕ ಮನಸ್ಸನ್ನು ಮುಟ್ಟುವ ಭಾವನೆಯೇ ಪ್ರೀತಿಯಾಗಿರುತ್ತದೆ. ಸ್ಪರ್ಶ ಸುಖವೇ ಪ್ರೀತಿಯಲ್ಲ ಸ್ಪರ್ಶದಿಂದ ದೊರಕಿದ ಆನಂದ ನಮ್ಮಲ್ಲಿ ಪ್ರೀತಿಯನ್ನು ಹುಟ್ಟಿಸಬೇಕು.

ಉಳಿದೆಲ್ಲ ಇಂದ್ರಿಯಗಳೂ ತಮ್ಮ ಪ್ರೇಮಕ್ಕೆ ಇವನು/ಳು ಅರ್ಹ ಎಂದು ಖಚಿತಪಡಿಸಿಕೊಂಡ ಅನಂತರ ಚರ್ಮ ಸ್ಪರ್ಶಕ್ಕೆ ಮುಂದಾಗುತ್ತದೆ. ಬೇರೆ ಇಂದ್ರಿಯಗಳನ್ನು ತೃಪ್ತಿಪಡಿಸದೆ ಬರೀ ಸ್ಪರ್ಶದಿಂದ ಶುರುವಾಗುವ ಸಂಬಂಧ ಪರಿಪೂರ್ಣ ಪ್ರೀತಿಯಾಗಲಾರದು. ಅದು ದೈಹಿಕ ಸಂಬಂಧವಾಗುತ್ತದಷ್ಟೇ.

ಒಬ್ಬ ಪ್ರೇಮಿ ಪಂಚೇಂದ್ರಿಯಗಳನ್ನು ಪ್ರಚೋದಿಸಬೇಕಾದರೆ ಅವನು/ಳು ಎಲ್ಲ ಇಂದ್ರಿಯಗಳ ಬಯಕೆಗಳನ್ನು 

ಅರಿತಿರಬೇಕು. ಎಲ್ಲ ಇಂದ್ರಿಯಗಳನ್ನು ಪ್ರಚೋದಿಸಿದಾಗ ಅವು ಪ್ರೀತಿಸಲು ಮುಂದಾಗುತ್ತವೆ. ಆಗ ಉಂಟಾಗುವ ಅನುಭವವೊಂದು ಸಮಾಧಿ ಸ್ಥಿತಿ. ಪಂಚೇಂದ್ರಿಯಗಳಿಗೆ ಪ್ರಾಮುಖ್ಯ ಕೊಡದೆ ನಮಗೆ ತಿಳಿದ ಹಾಗೆ ಪ್ರೀತಿಸುವುದರಲ್ಲೇ ಇಷ್ಟು ಸುಖವಿದೆ ಎಂದಾದರೆ ಎಲ್ಲ  ಇಂದ್ರಿಯಗಳನ್ನು ಅರಿತು ತೃಪ್ತಿಪಡಿಸುವ ಪ್ರೀತಿ ಅದೆಂಥ ಮಾಂತ್ರಿಕತೆಯನ್ನು ಹೊಂದಿದ್ದೀತು… ನೀವೇ ಊಹಿಸಿ.

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next