Advertisement

Mother: ತಾಯಿಯ ಮಡಿಲು ನೆಮ್ಮದಿಯ ನೆರಳು

02:59 PM Dec 18, 2024 | Team Udayavani |

ಅಮ್ಮನ ಬಗ್ಗೆ ಎಷ್ಟೇ ಬರೆದರೂ ಮುಗಿಯುವುದಿಲ್ಲ. ಬರೆದಷ್ಟೂ ಅಕ್ಷಯವಾಗುತ್ತಾ ಹೋಗುತ್ತಾಳೆ. ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ ಎನ್ನುವಂತೆ ತನ್ನ ಇಡೀ ಜೀವನದಲ್ಲಿ ತನ್ನವರಿಗಾಗಿ ತನ್ನವರ ಖುಷಿಗಾಗಿ ತನ್ನೆಲ್ಲ ಸಂತೋಷವನ್ನು ಮುಡಿಪಿಡುವ ದೈವಿ ಸ್ವರೂಪಿಣಿಯೇ ಮಾತೆ.

Advertisement

ತಾನು ಬೆಳೆದು ಬಂದ ಕುಟುಂಬವನ್ನು ತೊರೆದು ಗಂಡನ ಮನೆಗೆ ಹೆಜ್ಜೆ ಇಟ್ಟಾಗಿಂದ ಶುರುವಾಗುವ ಆಕೆಯ ಕ್ಷಮಯಧರಿತ್ರಿಯ ಅಧ್ಯಾಯ ಕೊನೆಯ ಉಸಿರಿರುವ ತನಕವು ಅದೇ ಮುಗ್ಧ ವ್ಯಕ್ತಿತ್ವದಲ್ಲೇ ಹೊಂದಿಕೊಂಡಿರುತ್ತದೆ.

ತಾಯಿ ತನ್ನ ಜೀವವನ್ನೇ ಪಣಕಿಟ್ಟು ಅಸಹನೀಯ ವೇದನೆಯನ್ನು ಪಟ್ಟು, ಮುದ್ದಾದ ಪುಟ್ಟ ಜೀವಕ್ಕೆ ಜನ್ಮ ನೀಡುವ ಆಕೆ ತನ್ನ ರಕ್ತವನ್ನೇ ಬಸಿದು ಮುಗುವಿಗೆ ಹಾಲುಣಿಸಿ ಪ್ರತಿ ಮಗುವಿನ ಕಣ್ಣಿಗೆ ಕಾಣುವ ಮೊದಲ ದೇವತೆಯಾಗಿರುತ್ತಾಳೆ. ತನ್ನ ಬೆಚ್ಚಗಿನ ತೋಳಲ್ಲಿ ಬಹಳ ಜೋಪಾನವಾಗಿ ರಕ್ಷಣಾತ್ಮಕವಾಗಿ ತನ್ನ ಕಂದನನ್ನು ಬೆಳೆಸುತ್ತಾ ಬರುವ ಅವಳು ಮಗುವಿಗೆ ಚೂರು ಆರೋಗ್ಯದಲ್ಲಿ ಏರುಪೇರಾದರು ಅತೀವ ಚಿಂತೆಗೆ ಒಳಗಾಗುತ್ತಾಳೆ ಹಾಗೂ ತುಂಬಾ ಕಾಳಜಿಯಿಂದ ತನ್ನ ಕಂದನ ಆರೈಕೆ ಮಾಡುತ್ತಾಳೆ.

ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕೆಲವು ತಾಯಿ ಮಕ್ಕಳ ಸಂಬಂಧವೆನ್ನುವುದು ಸ್ನೇಹಿತರ ತರಹ ಇರುತ್ತದೆ. ಅಲ್ಲಿ ಚೇಷ್ಟೆ, ತಮಾಷೆ, ಪ್ರತಿದಿನದ ಆಗು ಹೋಗುಗಳ ಗೋಷ್ಠಿ ನಡೆಯುತ್ತಾ ಇರುತ್ತದೆ. ಅಮ್ಮನ ಜತೆ ಕೈಜೋಡಿಸಿ ಮಾಡುವ ಅಡುಗೆಗಳಲ್ಲಿ ಒಂದು ರುಚಿ ಇದ್ದರೇ, ಅದನ್ನು ಅಮ್ಮನ ಕೈತುತ್ತಿನ ಮೂಲಕ ತಿಂದಾಗ ಆ ಖಾದ್ಯದ ಸ್ವಾದಕ್ಕೆ ಇನ್ನೂ ಹೆಚ್ಚಿನ ರುಚಿ ಸಿಗುತ್ತದೆ. ಬಾಲ್ಯದಲ್ಲಿ ಅಮ್ಮನ ತೋಳಿನ ಬೆಚ್ಚಗಿನ ಗೂಡಲ್ಲಿ ಆರಾಮಾಗಿ ಮಲಗುತ್ತಿದ್ದಾಗ ಆಗುತ್ತಿದ್ದ ನೆಮ್ಮದಿ ಯವ್ವನದಲ್ಲಿ ಆಕೆಯ ಮಡಿಲಿನಲ್ಲಿ ತಲೆಯಿತ್ತು ಮಲಗಿದಾಗ, ಆಕೆಯು ತಲೆಯನ್ನು ತಟ್ಟಿ ಮಲಗಿಸುವಾಗ ಅದೆಷ್ಟೋ ಜೀವನದ ಕಷ್ಟಗಳು, ಕೆಲಸದ ಒತ್ತಡಗಳು ದೂರವಾಗಿ ನೆಮ್ಮದಿ ಮನದಲ್ಲಿ ಮನೆ ಮಾಡುವುದಂತು ಸುಳ್ಳಲ್ಲ.

ತಾಯಿಯ ಕಿರು ಬೆರಳನ್ನು ಹಿಡಿದು ಹೆಜ್ಜೆ ಹಾಕಲು ಕಲಿಯುವ ನಾವು ಆಕೆಯ ಕೊನೆಯ ಘಳಿಗೆಯಲ್ಲೂ ಕೂಡ ಆಕೆಯನ್ನು ಸಂತೋಷದಿಂದ ನೋಡಿಕೊಂಡಾಗ ಆಕೆಯು ಸಂತ್ರಪ್ತಿಯಾಗುತ್ತಾಳೆ ಹಾಗೂ ನಮ್ಮ ಜನ್ಮಕ್ಕೂ ಒಂದು ಅರ್ಥ ಬರುತ್ತದೆ. ಪ್ರಸಾದ್‌ ಆಚಾರ್ಯ ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next