Advertisement

ಮನೆ, ಮನೆ ಪಾತ್ರೆ ತೊಳೆದು ಪುತ್ರಿಯನ್ನು ಪಿಎಸ್ ಐಯನ್ನಾಗಿ ಮಾಡಿದ ತಾಯಿ

05:39 PM Jan 24, 2022 | Team Udayavani |

ಬಾಗಲಕೋಟೆ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಗೌಂಡಿ ಕೆಲಸ ಮಾಡಿ ತನ್ನ ಮೂವರು ಮಕ್ಕಳನ್ನು ಸಾಗಿಸುತ್ತಿದ್ದ ಮನೆಯ ಹಿರಿಯ ಜೀವವೇ ಹೋಯಿತು. ಐವರು ಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡು ಮನೆ ಮನೆಗೆ ಹೋಗಿ ಪಾತ್ರೆ ತೊಳೆದು ಜೀವನ ಸಾಗಿಸಲು ಮುಂದಾದ ತಾಯಿ, ಇಂದು ಮಗಳ ಸಾಧನೆ ಕಂಡು ಆನಂದಭಾಷ್ಪ ಸುರಿಸಿದರು.

Advertisement

ಈ ಸನ್ನಿವೇಶ ಕಂಡಿದ್ದು, ನವನಗರದ ಸೆಕ್ಟರ್‌ ನಂ. 36ರಲ್ಲಿ. ಕಲ್ಲವ್ವ ಬಸಪ್ಪ ವಡ್ಡರ, ಪತಿ ತೀರಿಕೊಂಡ ಬಳಿಕ ಕಷ್ಟಪಟ್ಟು ಬದುಕು ಮುನ್ನಡೆಸಿದಳು. ತನ್ನ ಮಕ್ಕಳ ಸಾಧನೆ ಕಣ್ತುಂಬಿಕೊಳ್ಳಲು ಚಿಕ್ಕ ಮಗಳಿಗೆ ಶಿಕ್ಷಣ ಕೊಡಿಸಿದಳು. ಆ ಚಿಕ್ಕ ಮಗಳು ತಾಯಿಯ ಆಸೆ ಕಮರಲು ಬಿಡಲಿಲ್ಲ. ಕಷ್ಟದಲ್ಲೇ ಕಲಿತು ಇಂದು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಆಯ್ಕೆಯಾಗಿದ್ದಾಳೆ. ಅಂತಹ ಕುಟುಂಬದಲ್ಲಿ ಈಗ ದೊಡ್ಡ ಸಂತಸ ಮನೆ ಮಾಡಿದೆ.

ಹೌದು. ನವನಗರದ ಸೆಕ್ಟರ್‌ ನಂ. 36ರ ನಿವಾಸಿ, ಮನೆ ಮನೆಗೆ ಪಾತ್ರೆ ತೊಳೆಯಲು ಹೋಗಿ ಜೀವನ ಸಾಗಿಸುವ ಕಲ್ಲವ್ವ ವಡ್ಡರ ಅವರ ಕಿರಿಯ ಪುತ್ರಿ ರೇಣುಕಾ ಬಸಪ್ಪ ವಡ್ಡರ ಈ ಹಿರಿಮೆಗೆ ಸಾಕ್ಷಿಯಾಗಿದ್ದಾಳೆ. ಸಧ್ಯ ಪಿಎಸ್‌ಐ ಆಗಿ ಆಯ್ಕೆಯಾಗಿರುವ ರೇಣುಕಾ, ನಾಲ್ಕು ವರ್ಷದವಳಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಕಲ್ಲವ್ವ ಮನೆ ಮನೆಗೆ ಹೋಗಿ ಪಾತ್ರೆ ತೊಳೆದು ಬದುಕು ಸಾಗಿಸಿದಳು.

ಅವಳಿಗೆ ಇನ್ನಿಬ್ಬರು ಪುತ್ರರೂ ಕೈಜೋಡಿಸಿ, ತಂದೆ ಮಾಡುತ್ತಿದ್ದ ಗೌಂಡಿ ಕೆಲಸವನ್ನೇ ಮುಂದುವರೆಸಿ ಬದುಕಿನ ಬಂಡಿ ಸಾಗಿಸಲು ತಾಯಿಗೆ ಹೆಗಲು ಕೊಟ್ಟರು. ರೇಣುಕಾ ವಡ್ಡರ ಶಿಕ್ಷಣಕ್ಕೆ ತಾಯಿ ಕಲ್ಲವ್ವ ಮತ್ತು ಸಹೋದರರು ಬೆನ್ನಿಗೆ ನಿಂತರು. ಪ್ಲಾಷ್ಟರ್‌ ಇಲ್ಲದ ಅರ್ದಂಬರ್ಧ ಸ್ಥಿತಿಯಲ್ಲಿರುವ ಚಿಕ್ಕ ಗೂಡಿನಂತಹ ಮನೆ. ಆ ಮನೆಯಲ್ಲಿ ಕಡು ಬಡತನದಲ್ಲಿ ಅರಳಿ ಸಾಧನೆ ಮೆರೆದ ಯುವತಿ. ಮಗಳ ಸಾಧನೆ ಕಂಡು ತಾಯಿಯ ಕಣ್ಣಂಚಲ್ಲಿ ಆನಂದಬಾಷ್ಪ. ಬಡತನವನ್ನು ಸವಾಲಾಗಿ ಮೆಟ್ಟಿನಿಂತು ಸಾಧನೆಗೈದ ಸಾಧಕಿಗೆ ರವಿವಾರ ನಗರದ ಹಲವರು ಸನ್ಮಾನಿಸಿ ಬೆನ್ನುತಟ್ಟಿದರು.

ಸಾಧನೆಗೆ ಬಡತನ ಅಡ್ಡಿ ಅಂತ ಬಹುತೇಕರು ಅಂದುಕೊಳ್ಳುತ್ತಾರೆ. ಆದರೆ ರೇಣುಕಾ ಮಾತ್ರ ಅದನ್ನೇ ಸವಾಲಾಗಿ ಸ್ವೀಕರಿಸಿ, ಸತತ ಪ್ರಯತ್ನ, ನಿರಂತರ ಓದಿನ ಮೂಲಕ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ನನ್ನ ಸಾಧನೆಗೆ ನನ್ನ ತಾಯಿ, ಸಹೋದರರು ಕುಟುಂಬದ ಎಲ್ಲರ ಸಹಕಾರವೇ ಕಾರಣ. ಅವರ ಪ್ರೋತ್ಸಾಹದಿಂದಲೇ ನಾನು ಇಂದು ಪಿಎಸ್‌ಐ ಆಗಲು ಸಾಧ್ಯವಾಗಿದೆ ಎಂದು ರೇಣುಕಾ ವಡ್ಡರ ಸಂತಸ ಹಂಚಿಕೊಂಡರು.

Advertisement

ರೇಣುಕಾ ತಂದೆ-ತಾಯಿಗೆ ಒಟ್ಟು ಐದು ಜನ ಮಕ್ಕಳು. ಇಬ್ಬರು ಸಹೋದರರು, ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯವರೇ ರೇಣುಕಾ ವಡ್ಡರ. ಮೊದಲಿನಿಂದಲೂ ಓದಿನಲ್ಲಿ ಜಾಣೆಯಿದ್ದ ರೇಣುಕಾ ಅವರನ್ನು ತಾಯಿ ಎಷ್ಟೇ ಕಷ್ಟ ಆಗಲಿ ಅಂತ ಮಂದಿ ಮನೆ ಪಾತ್ರೆ ತೊಳೆದು ಓದಿಸಿದರು. ಇಬ್ಬರು ಸಹೋದರರು ಗೌಂಡಿಗಳಿದ್ದು, ಅವರರು ರೇಣುಕಾ ಅವರಿಗೆ ಬೆನ್ನೆಲುಬಾಗಿ ನಿಂತು ಎಲ್ಲ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ರೇಣುಕಾ ವಡ್ಡರ್‌ 2013ರಲ್ಲಿ ಡಿಎಡ್‌ ಮುಗಿಸಿದ್ದು, 2016ರಲ್ಲಿ ಬಿಎ ಪದವಿ ಪಡೆದಿದ್ದಾರೆ. ಸದ್ಯ ತಾಯಿ, ಸಹೋದರರು ಎಲ್ಲರ ಪ್ರೋತ್ಸಾಹದಿಂದ ಬಡತನದಲ್ಲೂ ಕಷ್ಟಪಟ್ಟು ಓದಿದ ರೇಣುಕಾ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.

ಕುಟುಂಬದಲ್ಲಿ ತುಂಬಾ ಬಡತನ. ತಾಯಿ ಮನೆ ಮನೆಗೆ ಹೋಗಿ ಪಾತ್ರೆ ತೊಳೆದು ಅದರಿಂದ ಬರುವ ಹಣದಲ್ಲೇ ನಮ್ಮನ್ನೆಲ್ಲ ಸಾಕಿದ್ದರು. ನನ್ನ ಸಹೋದರರೂ ಗೌಂಡಿ ಕೆಲಸ ಮಾಡಿ, ಬದುಕು ಮುನ್ನಡೆಸಲು ತಾಯಿಯ ಜತೆಗೆ ಕೈ ಜೋಡಿಸಿದರು. ನಾನು ಜೀವನದಲ್ಲಿ ಏನಾದರೂ ಸಾಧಿ ಸಬೇಕೆಂಬ ಛಲ ಇತ್ತು. ಅದಕ್ಕೆ ತಾಯಿ-ಸಹೋದರರು, ನಮ್ಮ ಸೋದರ ಮಾವಂದಿರು ಎಲ್ಲರೂ ಸಹಕಾರ ನೀಡಿದರು. ಸ್ಮರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವ ಜತೆಗೆ ನಿರಂತರ ಅಧ್ಯಯನ ಮಾಡುತ್ತಿದ್ದೆ. ಇದೀಗ ನನ್ನ ಕನಸು ನನಸಾಗಿದೆ. ಸಧ್ಯ ಪಿಎಸ್‌ಐ ಆಗಿ ಆಯ್ಕೆಯಾಗಿದ್ದೇನೆ. ನಾನು ಕೆಎಎಸ್‌ ಮಾಡಬೇಕೆಂಬ ಗುರಿ ಇದೆ.
ರೇಣುಕಾ ವಡ್ಡರ, ಪಿಎಸ್‌ಐ ಆಗಿ ನೇಮಕಗೊಂಡ ಯುವತಿ

ಮನೆಗೆ ತೆರಳಿ ಸನ್ಮಾನ
ಕಡು ಬಡತನದಲ್ಲೂ ಸಾಧನೆ ಮಾಡಿದ ರೇಣುಕಾ ವಡ್ಡರ ಅವರನ್ನು ನಗರದ ಬುಡಾ ಸದಸ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಪ್ರಮುಖರಾದ ಪುಷ್ಪಾ ನಾಯ್ಕರ, ದುರ್ಗೇಶ ವಡ್ಡರ, ಲಕ್ಕಪ್ಪ ಬಂಡಿವಡ್ಡರ, ಗಿಡ್ಡಪ್ಪ ಬಂಡಿವಡ್ಡರ, ರಾಮು ಬಂಡಿವಡ್ಡರ ಮುಂತಾದವರು ರೇಣುಕಾಮನೆಗೆ ತೆರಳಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next