Advertisement

ಮದ್ಯ ವ್ಯಸನಿ ಮಗನ ಇರಿದು ಕೊಂದ ತಾಯಿ!

11:18 AM Aug 20, 2017 | |

ಬೆಂಗಳೂರು: ಆತನಿಗಿನ್ನೂ 22ರ ಹರೆಯ. ದುಡಿಮೆ ಎಂದರೆ ಅವನಿಗೆ ಅಲರ್ಜಿ. ಕೆಲಸವಿಲ್ಲದೆ, ಪೋಕರಿಯಂತೆ ಬೀಗಿ ಬೀದಿ ಅಲೆಯುತ್ತಿದ್ದವನಿಗೆ ಒಂದಷ್ಟು ಜನ ಪುಂಡ ಗೆಳೆಯರು ಅವರ ಸಹವಾಸಕ್ಕೆ ಬಿದ್ದ ಆತ, ಮಾದಕ ದ್ರವ್ಯಗಳ ಚಟಕ್ಕೆ ಬಿದ್ದಿದ್ದ. ಸಾಲದೆಂಬಂತೆ ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕೈಲಿರುವ ಹಣ ಕಾಲಿಯಾದರೆ, ದುಡ್ಡಿಗಾಗಿ ತಾಯಿ, ಅಣ್ಣನನ್ನು ಪೀಡಿಸುತ್ತಿದ್ದ…

Advertisement

ಕಿರಿ ಮಗನ ಈ ವರ್ತನೆಯಿಂದ ಮನೆ ಸುತ್ತಮುತ್ತ ತಲೆ ಎತ್ತಿಕೊಂಡು ತಿರುಗಾಡದ ಸ್ಥಿತಿಗೆ ಆ ತಾಯಿ ಮತ್ತು ಅವರ ಹಿರಿಯ ಮಗ ತಲುಪಿದ್ದರು. ಅವನ ದುರ್ವರ್ತನೆ ಮಿತಿಮೀರಿದ್ದರಿಂದ ಬೇಸತ್ತ ತಾಯಿ, ತನ್ನ ಹಿರಿ ಮಗನ ನೆರವು ಪಡೆದು, ಮದ್ಯ ವ್ಯಸನಿ ಪುತ್ರನ್ನು ಚಾಕುವಿನಿಂದ ಇರಿದು ಕೊಂಡಿದ್ದಾರೆ. ಜಗಜೀವನರಾಮ ನಗರದ ವಿಎಸ್‌ ಗಾರ್ಡ್‌ನಲ್ಲಿರುವ ಕೊಳೆಗೇರಿಯಲ್ಲಿ ಶನಿವಾರ ಬೆಳಗ್ಗೆ ಘಟನೆ ನಡೆದಿದೆ.

ರಮೇಶ್‌ (22) ಹತ್ಯೆಯಾದವನು. ಹತ್ಯೆಗೈದ ತಾಯಿ ನಲ್ಲಮ್ಮ (45) ಮತ್ತು ಅವರ ಹಿರಿಯ ಪುತ್ರ ನಾಗರಾಜ್‌ (24)ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸಕ್ಕೆ ಹೋಗದೆ ಮಾದಕ ವ್ಯಸನಿಯಾಗಿದ್ದ ರಮೇಶ್‌, ಹಣಕ್ಕಾಗಿ ತಾಯಿ ಮತ್ತು ಅಣ್ಣನಿಗೆ ಪ್ರತಿ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಗಜೀವನರಾಮನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ನಲ್ಲಮ್ಮ ಕಳೆದ 20 ವರ್ಷಗಳಿಂದ ಇಬ್ಬರು ಮಕ್ಕಳ ಜತೆ ವಿಎಸ್‌ ಗಾರ್ಡ್‌ನ ಕೊಳೆಗೇರಿಯಲ್ಲಿ ವಾಸವಿದ್ದಾರೆ. ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕುಗೊಳಿಸಿರುವ ಇಬ್ಬರು ಮಕ್ಕಳ ಪೈಕಿ ಹಿರಿಯನಾದ ನಾಗರಾಜ್‌, ತಾಯಿ ನಲ್ಲಮ್ಮ ಜತೆ ಕೆಲ ಖಾಸಗಿ ಕಂಪೆನಿಗಳಲ್ಲಿ ಸ್ವತ್ಛತಾ ಕೆಲಸಕ್ಕೆ ಹೋಗುತ್ತಿದ್ದ. ಕೊಲೆಗೀಡಾದ ಪುತ್ರ ರಮೇಶ್‌ ಯಾವುದೇ ಕೆಲಸಕ್ಕೆ ಹೋಗದೆ ಮದ್ಯ ವ್ಯಸನಿಯಾಗಿದ್ದು, ಮಿತಿ ಮೀರಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಎಂದು ಹೇಳಲಾಗಿದೆ.

2 ಸಾವಿರ ಹಣ ಕೊಡು
ಶುಕ್ರವಾರ ರಾತ್ರಿ ಮದ್ಯ ಸೇವಿಸಲೆಂದು ಮನೆಯಿಂದ ಹೋದ ರಮೇಶ್‌, ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಬಂದಿದ್ದಾನೆ. ಈ ವೇಳೆ ಖರ್ಚಿಗೆ ಎರಡು ಸಾವಿರ ಹಣ ಕೊಡು ಎಂದು ತಾಯಿ ನಲ್ಲಮ್ಮನ್ನನು ಪೀಡಿಸಿದ್ದಾನೆ. ಇದ್ಕಕೆ ಒಪ್ಪದ ನಲ್ಲಮ್ಮ, ಸತಾಯಿಸಬೇಡ ಎಂದು ಒಂದೆರಡು ಏಟು ಕೊಟ್ಟಿದ್ದಾರೆ. ಕೋಪಗೊಂಡ ರಮೇಶ್‌, ಅಡುಗೆ ಮನೆಯಲ್ಲಿದ್ದ ಚಾಕು ತಂದು ತಾಯಿಯನ್ನು ಇರಿಯಲು ಯತ್ನಿಸಿದ್ದಾನೆ. ಇದನ್ನು ಕಂಡ ಸಹೋದರ ನಾಗರಾಜ್‌, ತಮ್ಮನನ್ನು ತಡೆದು ದೂರ ತಳ್ಳಿದ್ದಾನೆ. 

Advertisement

ಈ ವೇಳೆ ರಮೇಶ್‌ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಅವನ ಮಳಿ ಇದ್ದ ಚಾಕು ಕಿತ್ತುಕೊಂಡ ತಾಯಿ ಮತ್ತು ಮಗ ರಮೇಶನ ಎದೆ ಭಾಗ ಸೇರಿದಂತೆ ನಾಲ್ಕೈದು ಕಡೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ರಮೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ತಾಯಿ ನಲ್ಲಮ್ಮ ಮತ್ತು ಹಿರಿಯ ಪುತ್ರ ನಾಗರಾಜ್‌ನನ್ನು ಬಂಧಿಸಲಾಗಿದೆ ಎಂದು ಜೆ.ಜೆ.ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next