ಹುಣಸೂರು: ವಿಶ್ವಕ್ಕೆ ಪರಿಸರದ ಪಾಠ ಹೇಳುವ ಅಮೆರಿಕಾ ವರ್ಷಕ್ಕೆ 520 ಕೋಟಿ ದಶಲಕ್ಷ ಮಿಲಿಯನ್ ಟನ್ ವಿಷಕಾರಿ ಅಂಶವನ್ನು ವಾತಾವರಣಕ್ಕೆ ಬಿಡುತ್ತಿರುವ ಅಮೆರಿಕ, ಭಾರತವನ್ನು ನಿಯಂತ್ರಿಸಲು ಬರುತ್ತಿರುವುದು ದೊಡ್ಡ ವಿಪರ್ಯಾಸವೆಂದು ಜೀವಶಾಸ್ತ್ರ ಉಪನ್ಯಾಸಕ ಎಚ್.ಎನ್.ಗಿರೀಶ್ ವ್ಯಂಗ್ಯವಾಡಿದರು. ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಡಾರ್ಮಿಂಗ್ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾಗತಿಕ ತಾಪಮಾನವೆಂಬುದು ಎಲ್ಲ ದೇಶಗಳವರನ್ನು ಚಿಂತೆಗೀಡುಮಾಡಿದೆ. ಮನುಷ್ಯನ ದುರಾಸೆ, ದುರ್ಬಳಕೆಯಿಂದ ಭುವಿಯ ಜ್ವರ ಹೆಚ್ಚುತ್ತಿದೆ. ಅತಿಯಾದ ವಾಹನ ಬಳಕೆಯಿಂದ ವಾತಾವರಣಕ್ಕೆ ಇಂಗಾಲದ ಡೈಯಾಕ್ಸೆ„ಡ್, ಮಿಥೇನ್ ಅಂಶ ಹೆಚ್ಚಾಗಿ ಓಝೋನ್ ಪದರಕ್ಕೆ ಹಾನಿಯಾಗುವ ಜೊತೆಗೆ ಇಡೀ ಪರಿಸರವು ಮಲಿನವಾಗುತ್ತಿದೆ. ಪರಿಸರ ಸಮತೋಲನಕ್ಕೆ ಶೇ.33 ಪ್ರಮಾಣದ ಅರಣ್ಯ ವಿರಬೇಕು. ಆದರೆ, ಭಾರತದಲ್ಲಿ ಶೇ. 21.6 ಹಾಗೂ ಕರ್ನಾಟಕದಲ್ಲಿ ಶೇ. 19 ಮಾತ್ರ ಅರಣ್ಯವಿದೆ. ಇದರಿಂದ ತಾಪಮಾನ ಹೆಚ್ಚಾಗುತ್ತಿದೆ ಎಂದರು.
ಗೋ ಸಗಣಿ ಮರುಬಳಸಿ: ಚೀನಾದಲ್ಲಿ ವಾತಾವರಣ ಕಲುಷಿತಗೊಂಡಿದೆ ಎಂದು ಕ್ರೀಡಾಪಟುಗಳೇ ತೆರಳದಂತಾಗಿತ್ತು. ಭಾರತವು ಅಮೆರಿಕಕ್ಕಿಂತ ನಾಲ್ಕು ಪಟ್ಟು ಕಡಿಮೆ ವಿಷಕಾರಕ ಅಂಶ ಬಿಡುತ್ತಿದ್ದರೂ ಆ ದೇಶ ನಮಗೆ ಪರಿಸರ ಪಾಠ ಹೇಳುತ್ತಿದೆ. ದನಕರುಗಳ ಸಗಣಿಯನ್ನು ಮರುಬಳಕೆ ಮಾಡದ ಪರಿಣಾಮದಿಂದಲೂ ಜಾಗತಿಕ ತಾಪಮಾನ ಉಂಟಾಗುತ್ತಿದೆ ಎನ್ನಲಾಗಿದೆ. ಇದನ್ನು ನಿಯಂತ್ರಿಸಲು ವಿದ್ಯಾರ್ಥಿ ದೆಸೆಯಿಂದಲೇ ಉದ್ಯುಕ್ತರಾಗಬೇಕೆಂದು ಹೇಳಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ವಲಯದ ಆರ್‌ಎಫ್ಒ ಕೆ.ಬಿ.ಶಿವರಾಂ ಕಾಲೇಜು ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದರು. ನಮ್ಮ ಜೀವನ ಶೈಲಿಯ ಕಾರಣದಿಂದಲೇ ಭೂಮಿಯ ತಾಪಮಾನ ಏರುತ್ತಿದೆ. ಪರಿಸರ ಸಮತೋಲನ ಕಾಪಾಡಿದರಷ್ಟೇ ನಿಯಂತ್ರಣಕ್ಕೆ ತರಬಹುದು. ಹಿಂದೆ ಅರಣ್ಯ ವಿಸ್ತಾರ ಸಾಕಷ್ಟಿತ್ತು. ಈಗಾಗಲೇ ಬಹಳ ಅರಣ್ಯ ನಾಶವಾಗಿದೆ. ಮರ ಕಡಿಯಲು ಮುಂದಾಗುವ ನಾವು ಬೆಳೆಸಲು ಆಸಕ್ತಿ ತೋರುವುದಿಲ್ಲ.
ಇದರ ಪರಿಣಾಮ ಮಳೆ ಕಡಿಮೆಯಾಗಿದೆ. ಬರ ಪ್ರತಿವರ್ಷ ಬರುತ್ತಲೇ ಇದೆ. ನದಿ, ಕೆರೆ-ಕಟ್ಟೆಗಳು ಬತ್ತಿ ಹೋಗುತ್ತಿವೆ. ಅಂತರ್ಜಲ ಪಾತಾಳಕ್ಕಿಳಿದಿದೆ. ಪರಿಸರ ಸಮತೋಲನವಾಗಲು ಸರಿಯಾದ ಮಾರ್ಗದಲ್ಲಿ ಕಸ ನಿರ್ವಹಣೆ ಆಗಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಗಿಡ ಬೆಳೆಸಬೇಕು. ಶೌಚಾಲಯ ಕಡ್ಡಾಯವಾಗಿ ಕಟ್ಟಿಸಿಕೊಳ್ಳಬೇಕು ಎಂದರು.
ಪ್ರತಿ ನಾಗರಿಕನ ಕರ್ತವ್ಯ: ಮರ ಕಡಿಯುವುದು, ವನ್ಯಜೀವಿ ಹತ್ಯೆ ಮಾಡುವುದು ಗಂಭೀರ ಅಪರಾಧ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮೂರಿನ ಜನರಿಗೆ ತಿಳಿಸಬೇಕು. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಯು ಸಂವಿಧಾನದ 51ಎ ಕಾಯ್ದೆ ಪ್ರಕಾರ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಇನ್ನಾದರೂ ಪರಿಸರ ಉಳಿವಿನ ಹಿತ ದೃಷ್ಟಿಯಿಂದ ಗಿಡ-ಮರ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚೆಲುವಯ್ಯ ಮಾತನಾಡಿ, ಪಠ್ಯದ ಜೊತೆಗೆ ಜೀವನ ಮೌಲ್ಯ ಕಲಿಸುವ ಶಿಕ್ಷಣ ಕಲಿಸಲಾಗುತ್ತಿದೆ ಎಂದರು. ಉಪನ್ಯಾಸಕರಾದ ಬೈಯಣ್ಣ, ಯೋಗಣ್ಣ, ಬಾಲಸುಬ್ರಹ್ಮಣ್ಯಂ ಮಾತನಾಡಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಗಳು ಭಾಗವಹಿಸಿದ್ದರು.