ಸೃಷ್ಟಿ, ಸ್ಥಿತಿ, ಲಯಗಳಿಂದ ಈ ಪ್ರಪಂಚ ಉಂಟಾಗಿದೆ. ಹುಟ್ಟಿದ ಮನುಷ್ಯ ನಿಗೆ ಸಾವು ತಪ್ಪದು. ಹುಟ್ಟು ಆಕಸ್ಮಿಕ, ಸಾವು ನಿಚ್ಚಿತ. ಇದಕ್ಕೆ ಎರಡು ಮಾತಿಲ್ಲ. ಹುಟ್ಟಿದ ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ. ಇದ್ದಷ್ಟು ಸಮಯ ಏನನ್ನು ಸಾಧಿಸಿದ ಎಂಬುದು ಮುಖ್ಯ. ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿದು ಜೀವನ ಸಾಗಿಸಬೇಕು. ಜನಿಸಿದ ಮನುಷ್ಯನ ಸಾವು ಹೇಗೆ ಯಾವಾಗ ಬರುತ್ತದೆ ಎಂದು ಯಾರಿಗೂ ಹೇಳಲು ಬರುವುದಿಲ್ಲ. ನಮ್ಮ ಜೀವಿತದಲ್ಲಿ ಯಾರ ಹಂಗಿನಲ್ಲೂ ಇಲ್ಲದೆ ಸಾಯುವಾಗ ಆಯಾಸ ಪಡದೆ ಸಾಯಬೇಕಂತೆ. ನಮ್ಮ ಜೀವನದಲ್ಲಿ ಏರಿಳಿತ ಉಂಟಾದಾಗ ಅದು ನಮ್ಮ ಪೂರ್ವ ಜನ್ಮದ ಕರ್ಮ, ಇದು ಬ್ರಹ್ಮ ಬರೆದ ಹಣೆಬರಹ, ವಿಧಿ ಲಿಖೀತ ಎಂದು ಹೇಳುತ್ತೇವೆ. ಇದು ಒಳ್ಳೆಯದಾ ದರೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ, ಕೆಟ್ಟದಾದರೆ ದೇವರನ್ನು ದೂಷಿಸುತ್ತೇವೆ.
ನಾವು ಹುಟ್ಟಿದ ತತ್‌ಕ್ಷಣ ಬ್ರಹ್ಮನು ನಮ್ಮ ಹಣೆಯಲ್ಲಿ ನಾವು ಜೀವಂತ ಇರುವಷ್ಟು ಸಮಯ ಹೀಗೆಯೇ ಇರಬೇಕೆಂದು ಬರೆದಿರುತ್ತಾನೆ. ಈ ಬರಹವನ್ನು ಬರೆದ ಸ್ವತಃ ಬ್ರಹ್ಮನಿಂದಲೂ ಅಳಿಸಲು ಸಾಧ್ಯ ವಿಲ್ಲವಂತೆ.
ಒಮ್ಮೆ ಕೈಲಾಸ ಪರ್ವತದಿಂದ ಪಾರ್ವತಿ ಪರಮೇಶ್ವರರು ಜನರ ಜೀವನ ಕ್ರಮವನ್ನು ಪರೀಕ್ಷಿಸುವುದಕ್ಕಾಗಿ ಭೂಲೋಕಕ್ಕೆ ಬಂದರಂತೆ. ಕುಂಟನೊಬ್ಬ ಭಿಕ್ಷೆ ಬೇಡುವುದನ್ನು ಕಂಡು ಪಾರ್ವ ತಿಯು ಮರುಗಿ ಆತನಿಗೆ ಏನಾದರೂ ಸಹಾಯ ಮಾಡಬೇಕೆಂದು ಯೋಚಿಸಿದ ಳಂತೆ. ತನ್ನ ಪತಿಯನ್ನು ಕರೆದು “ನೋಡಿ ರಮಣ ಅಲ್ಲೊಬ್ಬ ಭಿಕ್ಷುಕ ಭಿಕ್ಷೆ ಬೇಡುತ್ತಾ ಬರುತ್ತಿದ್ದಾನೆ. ಅವನನ್ನು ನೋಡುವಾಗ ಈಗ ಸಾಯುತ್ತಾನೋ ಮತ್ತೆ ಸಾಯುತ್ತಾನೋ ಎಂದೆನಿಸುತ್ತದೆ. ಅವನಿಗೆ ಏನಾದರೂ ಸಹಾಯ ಮಾಡಿದರೆ ಸ್ವಲ್ಪ ಸಮಯ ಅವನು ನೆಮ್ಮದಿಯಿಂದ ಬಾಳಿಯಾನು. ಆದ್ದರಿಂದ ಏನಾದರೂ ಅವನಿಗೆ ಸಂಪತ್ತು ನೀಡಬೇಕು’ ಎಂದು ಪಾರ್ವತಿ ಭಿನ್ನವಿಸಿಕೊಳ್ಳುತ್ತಾಳೆ. ಆಗ ಪರಮೇಶ್ವರನು ಪಾರ್ವತಿಯನ್ನು ಕುರಿತು “ನೋಡು ರಮಣಿ, ಅವನು ಭಿಕ್ಷುಕ, ಭಿಕ್ಷೆ ಬೇಡಿ ಜೀವನ ಸಾಗಿಸುವುದೇ ಅವನ ಕಾಯಕ. ಅವನ ಹಣೆಯಲ್ಲಿ ಹಾಗೆಯೇ ಬರೆಯಲಾಗಿದೆ. ಅದನ್ನು ಬದಲಾಯಿ ಸಲು ಸಾಧ್ಯವಿಲ್ಲ. ನಾನು ಇವನಿಗೆ ಸಂಪತ್ತು ಕೊಟ್ಟರೂ ಅವನು ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದಾಗ ಪಾರ್ವತಿ ಆ ಭಿಕ್ಷುಕನಿಗೆ ಸಂಪತ್ತು ನೀಡಬೇಕೆಂದು ಪಟ್ಟು ಹಿಡಿಯುತ್ತಾಳೆ.
ಈಶ್ವರನು ಧನ, ಕನಕಗಳ ಗಂಟೊಂದನ್ನು ದೂರದಿಂದ ಬರುವ ಭಿಕ್ಷುಕನ ದಾರಿಯಲ್ಲಿ ಇರಿಸಿ ಮರೆಯಲ್ಲಿ ಪಾರ್ವತಿಯ ಜತೆಗೂಡಿ ನೋಡುತ್ತಿರುತ್ತಾನೆ. ಇತ್ತ ಭಿಕ್ಷುಕನು ತನ್ನಷ್ಟಕ್ಕೆ ಮಾತನಾಡುತ್ತಾ ಅಯ್ಯೋ ದೇವರೇ, ಭಿಕ್ಷೆ ಬೇಡಿ ಬೇಡಿ ಸಾಕಾಯಿತು. ನನ್ನ ಹಣೆಬರಹ, ನನಗೆ ದೇವರು ಕಣ್ಣಾದರೂ ಕೊಟ್ಟಿದ್ದಾರೆ. ಕಣ್ಣಿಲ್ಲದವರು ಜೀವನವನ್ನು ಹೇಗೆ ಸಾಗಿಸುತ್ತಾರೆಂದು ನೋಡಲು ಸ್ವಲ್ಪ ದೂರ ಕಣ್ಣು ಮುಚ್ಚಿಕೊಂಡು ನಡೆದು ಹೋಗುತ್ತಾನೆ, ಆ ಸಮಯಕ್ಕೆ ದೇವರು ಇರಿಸಿದ ಗಂಟು ದಾಟಿ ಹೋಗುತ್ತಾನೆ. ಅನಂತರ ಆ ಭಿಕ್ಷುಕನು ಮಾತನಾಡುತ್ತಾ ಕಣ್ಣಿಲ್ಲದವರು ಜೀವನ ಸಾಗಿಸುವುದೇ ಕಷ್ಟ. ನಾನೇ ಪರಮ ಸುಖೀ ಎಂದು ಭಿಕ್ಷೆ ಬೇಡುತ್ತಾ ಮುಂದೆ ಸಾಗುವನು.
ಜೀವನದಲ್ಲಿ ದೇವರು ನಮಗೆ ನೀಡಿರುವುದು ಪಂಚಾಮೃತವೆಂದು ತಿಳಿದು ಜೀವನ ಸಾಗಿಸಬೇಕು. ನಾವು ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ ಸುಖ ಇದ್ದಾಗ ಹಿಗ್ಗದೆ ಜೀವಿಸಬೇಕು. ಕಷ್ಟದ ಹಿಂದೆ ಸುಖವಿದೆ ಎಂದು ತಿಳಿಯಬೇಕು. ಅಲ್ಲದೆ ನಮಗಿಂತ ಕೆಳಗಿರುವವರನ್ನು ನೋಡಬೇಕು ಹಾಗೂ ಇವರಿಗಿಂತ ನಾನೇ ಶ್ರೇಷ್ಠ ಎಂದು ತಿಳಿಯಬೇಕು. ವಿಧಿ ಲಿಖೀತಕ್ಕೆ ದೇವರನ್ನು ನಿಂದಿಸದೆ ಆರೋಗ್ಯ ಭಾಗ್ಯವನ್ನು ಕರುಣಿಸಬೇಕೆಂದು ದೇವರಲ್ಲಿ ಬೇಡುವುದೇ ಸಾಧಕನ ಲಕ್ಷಣವಾಗಿದೆ.
- ದೇವರಾಜ ರಾವ್ ಎಂ., ಕಟಪಾಡಿ