Advertisement

ಆಚರಣೆಗಳಿಗೆ ಧಕ್ಕೆಯಾಗದಂತೆ ಮೌಡ್ಯ ನಿಷೇಧ ಕಾಯ್ದೆ ಜಾರಿ

11:29 AM Sep 26, 2017 | |

ಬೆಂಗಳೂರು: “ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೌಡ್ಯ ನಿಷೇಧ ಕಾಯ್ದೆಯಿಂದ ಜನ ಸಾಮಾನ್ಯರ ನಂಬಿಕೆ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ‘ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. 

Advertisement

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಹಾರಾಷ್ಟ್ರ ಮಾದರಿಯ ಉದ್ದೇಶಿತ ಮೌಡ್ಯ ನಿಷೇಧ ವಿಧೇಯಕದ ಪರಿಶೀಲನೆಗೆ ನನ್ನ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಎಲ್ಲ ವಿಷಯಗಳನ್ನು ಎಲ್ಲ ಆಯಾಮಗಳಲ್ಲಿ ಪರಿಶೀಲಿಸಲಾಗಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು,’ ಎಂದು ತಿಳಿಸಿದರು.

ಮೌಡ್ಯ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಸೇರಿ 150ಕ್ಕೂ ಸ್ವಾಮೀಜಿಗಳು ಸರ್ಕಾರಕ್ಕೆ ಲಿಖೀತ ಮನವಿ ಸಲ್ಲಿಸಿದ್ದರು. ಸ್ವಾಮೀಜಿಗಳ ಮನವಿಯಲ್ಲಿದ್ದ ಪ್ರತಿಯೊಂದು ಅಂಶದ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ.

ವಿಧೇಯಕದ ಕರಡನ್ನು ಈ ಹಿಂದೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರಿಗೂ ತೋರಿಸಲಾಗಿತ್ತು. ಕಾಯ್ದೆ ವಿರೋಧಿಸಿ ಯಾರೂ ಲಿಖೀತ ಮನವಿ ಸಲ್ಲಿಸಿಲ್ಲ. ಹಾಗೊಂದು ವೇಳೆ ಆಕ್ಷೇಪಣೆಗಳು ಬಂದರೆ ಅದನ್ನೂ ಸಹ ಪರಿಗಣಿಸಲಾಗುವುದು. ಸಂಪುಟದಲ್ಲಿ ಮಂಡನೆಯಾದ ಬಳಿಕ ಸಾರ್ವಜನಿಕ ಚರ್ಚೆಗೂ ಅವಕಾಶವಿರುತ್ತದೆ ಎಂದು ತಿಳಿಸಿದರು.

ಕಾಯ್ದೆ ಜಾರಿಯಿಂದ ಮೌಡ್ಯ ತಡೆಯಲು ಸಾಧ್ಯವಿಲ್ಲವೆಂದು ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಒಂದು ಕಾಯ್ದೆ ಇದ್ದರೆ, ನಂಬಿಕೆಗಳ ಹೆಸರಲ್ಲಿ ನಡೆಯುವ ಮೌಡ್ಯ ಮತ್ತು ಅನಾಚಾರಗಳನ್ನು ತಡೆಯಬಹುದು. ಮೌಡ್ಯಗಳ ಬಗ್ಗೆ ಜಾಗೃತಿಯೂ ಮೂಡಿಸಬೇಕೆಂಬ ಸದುದ್ದೇಶದಿಂದ ಕಾಯ್ದೆ ಮಾಡಲಾಗುತ್ತಿದೆ ಎಂದು ಸಚಿವರು ಸಮರ್ಥಿಸಿಕೊಂಡರು. 

Advertisement

ಬಡ್ತಿ ಮೀಸಲಾತಿ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಅದನ್ನು ರಾಜ್ಯಪಾಲರು ವಾಪಸ್‌ ಕಳಿಸಿ ಅಧಿವೇಶನದಲ್ಲಿ ಮಂಡಿಸುವಂತೆ ಸಲಹೆ ನೀಡಿದ್ದಾರೆ. ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್‌ ಕೊನೆವರೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ವಿಧೇಯಕ ಮಂಡಿಸಲಾಗುವುದು ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: “ಕಾಂಗ್ರೆಸ್‌ ಪಕ್ಷದಲ್ಲಿ ಕಳ್ಳರಿದ್ದಾರೆ’ ಎಂದು ಶಾಸಕ ಕೆ.ಎನ್‌.ರಾಜಣ್ಣ ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ, ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ನಾನು ಮತ್ತು ರಾಜಣ್ಣ ಇಬ್ಬರೂ ಒಂದೇ. ಮಾಧ್ಯಮಗಳಿಗೆ ಹೇಳಿಕೆ ನೀಡುವ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಾಕೀತು ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರಿಗೂ ಈ ವಿಷಯ ಗೊತ್ತಿದೆ. ಹಾಗಾಗಿ ಈ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next