ಉಡುಪಿ: ಮಹಾರಾಷ್ಟ್ರ ರಾಜ್ಯದಲ್ಲಿ ಆದ ಬೆಳವಣಿಗೆಯಿಂದ ಎಲ್ಲ ರಾಜಕೀಯ ಪಕ್ಷಗಳ ನೈತಿಕತೆ ಕುಸಿದಿದೆ ಎಂದು ಬೇಸರವಾಗುತ್ತಿದೆ ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ಪಕ್ಷಕ್ಕೆ ಬಹುಮತ ಬಾರದೆ ಇದ್ದಾಗ ಎಲ್ಲ ಪಕ್ಷಗಳೂ ಸೇರಿ ಸರಕಾರ ರಚಿಸಬಹುದು ಎಂದು ಹಿಂದೆಯೇ ಹೇಳಿದ್ದೆ. ಈಗ ನೈತಿಕತೆ ಇಲ್ಲದೆ ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ಬೇಸರ ತರುತ್ತದೆ ಎಂದರು.
ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಒಂದಾಗುವುದು, ಬಿಜೆಪಿ ಎನ್‌ಸಿಪಿ ಒಂದಾಗುವುದು ನೈತಿಕತೆ ಇಲ್ಲದಿರುವುದನ್ನು ಸೂಚಿಸುತ್ತದೆ. ಜನರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕರ್ನಾಟಕದ ಕುರಿತು ಪ್ರಶ್ನೆ ಕೇಳಿದಾಗ ಬಹುಮತ ಬಾರದೆ ಇದ್ದಾಗ ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಸರ್ವಪಕ್ಷಗಳ ಸರಕಾರ ಆಗಬೇಕಾದರೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಪಕ್ಷಗಳು ಸೇರುವಾಗಲೂ ತ್ಯಾಗ ಮಾಡಬೇಕಾಗುತ್ತದೆ. ಉದಾರತೆ ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿಯವರು ಇರುವಾಗ ಹಲವು ಪಕ್ಷಗಳನ್ನು ಇರಿಸಿಕೊಂಡು ಸರಕಾರ ರಚಿಸಿದ್ದರಲ್ಲವೆ ಎಂದರು.
ಸರಕಾರದ ವಶದಲ್ಲಿದ್ದ ದೇವಸ್ಥಾನಗಳನ್ನು ಬಿಟ್ಟುಕೊಡಲು ಕೇಂದ್ರ ಸರಕಾರ ಕಾನೂನು ರಚಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಷಯ ತಿಳಿದು ಹೇಳಿಕೆ ಕೊಡುವುದಾಗಿ ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರ ಒಂದು ವರ್ಗ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಪೀಲು ಸಲ್ಲಿಸುವುದಿಲ್ಲವೆಂದು ತಿಳಿಸಿದೆ ಎಂದರು. ಮುಸ್ಲಿಮ್ ಕಾನೂನು ಮಂಡಳಿ ಅರ್ಜಿ ಸಲ್ಲಿಸುತ್ತದೆ ಎಂದು ಹೇಳಿದಾಗ ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸುತ್ತದೋ ಎಂದು ನೋಡಬೇಕು ಎಂದರು.
ಪುರಿ ಗೋವರ್ಧನ ಪೀಠದ ಶ್ರೀನಿಶ್ಚಲಾನಂದಸರಸ್ವತೀ ಸ್ವಾಮೀಜಿಯವರನ್ನು ನಾಲ್ಕೈದು ಬಾರಿ ಭೇಟಿಯಾಗಿದ್ದೆ. ಒಂದು ಬಾರಿ ಪುರಿಯಲ್ಲಿಯೂ ಭೇಟಿ ಮಾಡಿದ್ದೆ. ಅವರ ಒಂದು ಟ್ರಸ್ಟ್‌ನಲ್ಲಿ ನಾವು ಟ್ರಸ್ಟಿಗಳಾಗಿಯೂ ಇದ್ದೆವು ಎಂದು ಪೇಜಾವರ ಶ್ರೀಗಳು ತಿಳಿಸಿದರು.