Advertisement

ಅಷ್ಟಮಿ ಚಂದ್ರನ ಇರುಳು ಶಂಖು ಹುಳಗಳ ಪ್ರೇಮದ ಕತೆ

09:48 AM Nov 11, 2019 | mahesh |

ಅಷ್ಟಮಿಯ ಚಂದ್ರ ಪಶ್ಚಿಮದ ಕಡಲಿನಲ್ಲಿ ನಡು ಇರುಳು ಕಳೆದು ಮುಳುಗುವುದನ್ನು ಕಾಣಲು ಬಂದಿದ್ದೆ. ಯಾರೂ ಇಲ್ಲದ ಕಡಲು. ಬಿಳಿಯ ಮರಳಲ್ಲಿ ದಿಣ್ಣೆಗಳ ಮಾಡುತ್ತ ಗುಳಿಗಳೊಳಗೆ ಹೋಗಿ ಬರುತ್ತ ಪೋಲಿಹುಡುಗರಂತೆ ಅಂಡಲೆಯುತ್ತಿದ್ದ ಕಡಲ ಏಡಿಗಳು ನನ್ನ ಹೆಜ್ಜೆಗಳ ಸದ್ದಿಗೆ ಬೆದರಿ ಲಾಠೀ ಪ್ರಹಾರಕ್ಕೆ ಒಳಗಾದವರಂತೆ ದಿಕ್ಕಾಪಾಲಾಗಿ ಓಡಾಡುತ್ತಿದ್ದವು. ಬಹುಶಃ ಮನುಷ್ಯ ಪಾದಗಳು ಕಡಲ ದಡದಲ್ಲಿ ಓಡಾಡಬಾರದ ಹೊತ್ತು ಇದು ಇದ್ದಿರಬಹುದು. ಮನುಷ್ಯ ವ್ಯವಹಾರಗಳೆಲ್ಲ ಮುಗಿದು ಕಡಲು ನಿರಾಳವಾದ ಮೇಲೆ ಮರುಳಲ್ಲಿ ಶುರುವಾಗುವ ಜಲಜೀವ ವ್ಯವಹಾರಗಳು. ನೀರಲ್ಲೂ ನೆಲದಲ್ಲೂ ಬದುಕಬಹುದಾದ ಈ ಜೀವಗಳು ಮನುಷ್ಯರೆಲ್ಲ ಹೋದ ಮೇಲೆ ದಡಕ್ಕೆ ಬರುತ್ತವೆ. ಕೆಲವು ಬೇಟಕ್ಕೆ, ಕೆಲವು ಸಂತಾನ ವೃದ್ಧಿಗೆ. ಇನ್ನು ಕೆಲವು ನೀರಿನಲ್ಲಿರುವ ಆಕ್ರಮಣಕಾರರಿಂದ ತಪ್ಪಿಸಿಕೊಂಡು ಸ್ವಲ್ಪ ಹೊತ್ತು ನಿರಾಳವಾಗಿರಲಿಕ್ಕೆ. ನಾನು ಬಂದಿರುವುದು ಬೇರೇನೂ ಕೆಲಸವಿಲ್ಲದೆ ಎಂಟನೆಯ ಚಂದ್ರ ಪಡುವಣದ ಕತ್ತಲಿನಲ್ಲಿ ಕಣ್ಮರೆಯಾಗುವುದನ್ನು ಕಾಣಲಿಕ್ಕೆ.

Advertisement

ಕಡಲ ಕನ್ಯೆಯೊಬ್ಬಳ ಅರೆತೆರೆದ ಸ್ತನದಂತೆ ಕಾಣಿಸುತ್ತಿದ್ದ ನಸುಗೆಂಪಿನ ಚಂದ್ರಮ ಕರಾಳಬಾಹುವಿನಂತೆ ಉದ್ದಕ್ಕೆ ಚಾಚಿಕೊಂಡಿದ್ದ ಕರ್ರಗಿನ ಮೇಘವೊಂದರ ಬಿರುಕುಗಳ ನಡುವಿನಿಂದ ಆಗೀಗ ಕಾಣಿಸಿಕೊಳ್ಳುತ್ತ ಯಾಮಾರಿಸುತ್ತಿದ್ದ. ಆದರೂ ಆಗಾಗ ನಾಚಿ ಕೊಂಡು ಕಾಣಿಸಿಕೊಳ್ಳುತ್ತಿದ್ದ ಅದರ ಮೋಹಕ ಬಣ್ಣಕ್ಕೆ ಮರುಳಾದ ಬಾಲಕನಂತೆ ದಡದ ಮೇಲೆ ನಡೆಯುತ್ತಿದ್ದೆ. ಕಾಲಕೆಳಗೆ ಬೆದರಿ ಓಡುತ್ತಿದ್ದ ಕಡಲ ಏಡಿಗಳ ದಂಡು. ಆಕಾಶ ದಲ್ಲಿ ಮಣಗಟ್ಟಲೆ ಹರಡಿಕೊಂಡಿದ್ದ ಬಗೆಬಗೆಯ ನಕ್ಷತ್ರಗಳು. ದೂರದಲ್ಲೆಲ್ಲೋ ನಿಲ್ಲಿಸಿದ್ದ ಮೀನುದೋಣಿಯಿಂದ ಮಿನುಗುತ್ತಿರುವ ನೀಲಿ ಬಣ್ಣದ ದೀಪ.

ಕಾಲ ಕೆಳಗೆ ಮರಳಿನ ಮೇಲೆ ಕಡಲ ಶಂಖವೊಂದು ತೂರಾಡುತ್ತ ನಡೆದು ಹೋಗುತ್ತಿತ್ತು. ದೇವಾಲಯಗಳಲ್ಲೂ, ಪೂಜಾ ಕೊಠಡಿಯಲ್ಲೂ, ಪೂಜಾರಿ, ಸಾಧು-ಸನ್ಯಾಸಿ, ಮಾಂತ್ರಿಕರ ಕೈಗಳಲ್ಲೂ ಅದರಿಂದ ಹೊಮ್ಮುತ್ತಿದ್ದ ಓಂಕಾರದ ಧ್ವನಿಯಲ್ಲೂ ಶಂಖಗಳನ್ನು ಕಂಡಿದ್ದ ನನಗೆ ಜೀವಂತ ಶಂಖವೊಂದು ಮರಳ ಮೇಲೆ ತನ್ನ ಕಾಲುಗಳನ್ನೆಳೆಯುತ್ತ ತೂರಾಡುತ್ತ ಈ ಅಪರಾತ್ರಿಯಲ್ಲಿ ಎತ್ತಲೋ ಹೊರಟಿರುವುದು ಕಂಡು ಚೋದ್ಯವೆನಿಸಿತು. ಅಪರಾತ್ರಿಯಲ್ಲಿ ಕಂಠದವರೆಗೆ ಮತ್ತನಾಗಿ ಒಲ್ಲದ ಮಡದಿಯ ಬಳಿ ಹೊರಟಿರುವ ಅಸಹಾಯಕ ಗಂಡನಂತೆ ಅದು ಕಾಣಿಸುತ್ತಿತ್ತು. ನಡುನಡುವಲ್ಲಿ ಏಡಿಗಳು ತೋಡಿರುವ ಗುಳಿಯೊಳಗೆ ಅದು ಬೀಳುತ್ತಿತ್ತು. ಮತ್ತೆ ಸಾವರಿಸಿಕೊಂಡು ತನ್ನ ಲಕ್ಷ್ಯದ ಕಡೆಗೆ ಮತ್ತೆ ಚಲಿಸುತ್ತಿತ್ತು. ಅದರ ಶಂಖಕವಚದೊಳಗಿಂದ ಆಗಾಗ ಹೊರಚಾಚುವ ಅದರ ಸೂಕ್ಷ್ಮಸಂವೇದಿ ಮೀಸೆಗಳು. ಕಪ್ಪಗಿನ ಚುಕ್ಕಿಗಳಂತಹ ಪುಟ್ಟ ಕಣ್ಣುಗಳು. ಕವಚದೊಳಗಿಂದ ಹೊರಬಂದು ಚಲಿಸುತ್ತಲೇ ಇರುವ ಏಡಿಯಂತಹ ಅದರ ಕಾಲುಗಳು. ನನಗೊಂದು ಸಂಶಯ ಮೂಡಿತು. ಇದು ಕಡಲ ಶಂಖು ಹುಳುವೇ ಯಾಕಾಗಿರಬೇಕು? ಜಾಣನಾದ ಏಡಿಯೊಂದು ಈ ಶಂಖುವಿನೊಳಗೆ ಸೇರಿಕೊಂಡು ವೈರಿಗಳಿಂದ ತಪ್ಪಿಸಿಕೊಂಡು ಯಾವುದೋ ಗಹನ ಕಾರ್ಯಕ್ಕಾಗಿ ಛದ್ಮವೇಷಧಾರಿಯಾಗಿ ಯಾಕೆ ಸಾಗುತ್ತಿರಬಾರದು ಎಂದೂ ಅನಿಸಿತು. ನನಗೂ ಬೇರೇನೂ ಘನಕಾರ್ಯಗಳಿಲ್ಲ. ಅದು ನೂರು ಹೆಜ್ಜೆ ಹಾಕಿದಾಗ ನಾನು ಒಂದು ಹೆಜ್ಜೆ ಹಾಕಿದರೂ ಸಾಕು. ಅದರ ನಿಶಾಸಂಚಾರದ ರಹಸ್ಯ ಬಯಲಾಗುವುದು. ಸುಮ್ಮನೇ ಟಾರ್ಚು ಬಿಟ್ಟು ಅದರ ಹಿಂದೆ ನಡೆಯತೊಡಗಿದೆ.

ಟಾರ್ಚಿನ ಪ್ರಖರ ಬೆಳಕಿಗೆ ಕೊಂಚ ಕಕ್ಕಾಬಿಕ್ಕಿಯಾದ ಅದು ಒಂದು ಕ್ಷಣ ಗಲಿಬಿಲಿಗೊಂಡರೂ ಮತ್ತೆ ತನ್ನ ಲಕ್ಷ್ಯದತ್ತ ತೂರಾಡಿಕೊಂಡು ಚಲಿಸತೊಡಗಿತು. ಯಾವುದೋ ಗಹನ ರಾಜತಾಂತ್ರಿಕ ಕಾರಣವಿರಲಾರದು, ಬದಲಾಗಿ ಯಾವುದೋ ಖಾಸಗೀ ತುರ್ತಿನ ಕೆಲಸವಿರಬೇಕು ಅಂದುಕೊಂಡೆ. ಅಂದುಕೊಂಡ ಹಾಗೆಯೇ ಆಯಿತು. ಎರಡು ಹೆಜ್ಜೆ ಚಲಿಸುವುದರಲ್ಲಿ ಅದರ ಗಾತ್ರದ ಅರ್ಧದಷ್ಟಿದ್ದ ಇನ್ನೊಂದು ಶಂಖುಹುಳವೊಂದು ಅದು ಯಾವುದೋ ಗುಳಿಯಿಂದ ಹೊರಬಂದು ಇದನ್ನು ಹಿಂಬಾಲಿಸತೊಡಗಿತು. ಮುಂದೆ ಹೋಗುತ್ತಿದ್ದ ಶಂಖುಹುಳು ತನ್ನ ನಡಿಗೆಯ ವೇಗವನ್ನು ಕಡಿಮೆಗೊಳಿಸಿ ಮರಳಲ್ಲಿ ಬಿದ್ದುಕೊಂಡಿದ್ದ ತೆಂಗಿನ ಕಡ್ಡಿಯೊಂದರ ಮೇಲೆ ತನ್ನ ಮುಂದಿನ ಪಾರ್ಶ್ವವನ್ನು ಹತ್ತಿಸಿ ಅಲ್ಲೇ ನಿಂತಿತು. ಹಿಂದಿಂದ ಹಿಂಬಾಲಿಸುತ್ತಿದ್ದ ಸಣ್ಣ ಗಾತ್ರದ ಶಂಖುಹುಳು ಅತಿ ಕ್ಷಿಪ್ರವಾಗಿ ಅದರ ಬೆನ್ನಮೇಲೇರಿ ಅದಕ್ಕಿಂತಲೂ ಕ್ಷಿಪ್ರವಾಗಿ ಕಾರ್ಯಶೀಲನಾಗಿ ಹಾಗೇ ಅಲ್ಲಿಂದ ನೆಲಕ್ಕುರುಳಿ ನಿಶ್ಚೇಷ್ಟಿತವಾಗಿ ಸುರುಟಿಕೊಂಡು ಬಿದ್ದುಕೊಂಡಿತು. ಸ್ವಲ್ಪ ಮುಂದಕ್ಕೆ ಚಲಿಸಿದ ಮೊದಲ ಶಂಖು ಹುಳ ತಾನೂ ನಿಶ್ಚೇಷ್ಟಿತವಾಗಿ ಇನ್ನೊಂದು ಗುಳಿಯಲ್ಲಿ ಬಿದ್ದುಕೊಂಡಿತು.

ಸಾವಿರ ಸಾವಿರ ಗಾವುದ ದೂರದ ನೀಲ ಕಡಲ ನಡುವಿನ ಮಣ್ಣುಗುಡ್ಡೆಗಳಂತಹ ಈ ದ್ವೀಪಗಳ ಮರಳ ಅಂಗಳದ ಮೇಲೆ ಜಲಚರಗಳನ್ನೂ ಬಿಡದ ವ್ಯಾಮೋಹಗಳು. ಬಹುಶಃ ನೂರಾರು ವರ್ಷಗಳಷ್ಟು ಹಿಂದೆ ಬದುಕಿ ತನ್ನ ಚಿಪ್ಪನ್ನು ಕಡಲೊಳಗೆ ಬಿಟ್ಟು ಪರಮಾತ್ಮನಲ್ಲಿ ಐಕ್ಯವಾದ ಶಂಖದ ಹುಳುವಿನ ಕೋಶದೊಳಗೆ ಅಡಗಿಕೊಂಡು ಛದ್ಮವೇಷಧಾರಿಗಳಾಗಿ ಬಂದಿರುವ ಒಂದು ಹೆಣ್ಣು ಏಡಿ ಮತ್ತು ಇನ್ನೊಂದು ಗಂಡು ಏಡಿ. ಸುತ್ತಲೂ ಓಡಾಡುತ್ತಿರುವ ಇತರೇ ಏಡಿಗಳಿಂದ ತಪ್ಪಿಸಿಕೊಂಡು ತಮ್ಮ ಪ್ರೀತಿ ಯನ್ನು ಅತಿಕ್ಷಿಪ್ರವಾಗಿ ತೋಡಿಕೊಂಡು ನಿಶ್ಚೇಷ್ಟಿತರಾಗಿ ಶಂಖದ ಸಮೇತ ಮರಳಲ್ಲಿ ಬಿದ್ದುಕೊಂಡಿವೆ.

Advertisement

“ಅರೆಕ್ಷಣದ ಐಹಿಕ ಸುಖಕ್ಕಾಗಿ ಲೋಕದ ಪರಿವೆಯನ್ನೂ, ಇಸ್ಲಾಮನ್ನೂ, ಈಮಾನನ್ನೂ, ಫ‌ರಳ್‌ ಸುನ್ನತ್‌ಗಳನ್ನೂ, ಮುಂದೆ ಬರಲಿರುವ ಅಂತಿಮ ದಿನದ ತೀರ್ಮಾನವನ್ನೂ, ಆನಂತರ ಬರುವ ಜನ್ನತ್‌ ಎನ್ನುವ ಸುಖವನ್ನೂ, ಜಹನ್ನಮ ಎಂಬ ನರಕವನ್ನೂ ನೀನು ಮರೆಯಬಾರದು ಇಬಿಲೀಸೇ’ ಎಂದು ಬಾಲ್ಯಕಾಲದ ಖುರಾನು ಕಲಿಸುವ ಮಹಾನುಭಾವರು ನನ್ನ ಕಂಕುಳನ್ನು ತಮ್ಮ ಕೈಯಲ್ಲಿದ್ದ ಸಪೂರವಾದ ನಾಗರ ಬೆತ್ತದ ತುದಿಯಿಂದ ತಿವಿದು ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದರು. ಗಹನವಲ್ಲದ ತಪ್ಪಿಗಾಗಿ ಅವರು ಕೊಡುತ್ತಿದ್ದ ಶಿಕ್ಷೆ ಅದು. ಗಹನವಾದ ತಪ್ಪಿಗೆ ಶಿಕ್ಷೆ ಕಿವಿಯ ದಳಗಳನ್ನು ಎರಡು ಸುತ್ತು ಪೂರ್ತಿಯಾಗಿ ತಿರುಗಿಸುವುದು. ನಾನು ಅಂತಹ ಗಹನವಾದ ತಪ್ಪನ್ನೇನೂ ಮಾಡಿರಲಿಲ್ಲ. ಅದು ಯಾವ ತಪ್ಪು ಅಂತ ಈಗ ನೆನಪೂ ಆಗುತ್ತಿಲ್ಲ. ಅದು ಯಾವ ಐಹಿಕ ಸುಖವಾಗಿರಬಹುದು ಅಂತಲೂ ಗೊತ್ತಾಗುತ್ತಿಲ್ಲ. ಬಹುಶಃ ಖುರಾನು ರಾಗವಾಗಿ ಪಠಿಸುತ್ತಿರುವ ನಡುವೆ ಏನನ್ನೋ ನೆನಪಿಸಿಕೊಂಡು ಕಿಸಕ್ಕೆಂದು ನಕ್ಕಿದ್ದಕ್ಕೆ ಇರಬಹುದು. ಏನನ್ನು ನೆನಪಿಸಿಕೊಡಿದ್ದೆ ಎಂಬುದೂ ನೆನಪಾಗುತ್ತಿಲ್ಲ.

ಹಾಳಾಗಿ ಹೋಗಲಿ. ನೆನಪಾದರೂ ಅದನ್ನೆಲ್ಲ ಇಲ್ಲಿ ಹೇಳಬೇಕೆಂದೇನೂ ಇಲ್ಲವಲ್ಲ. ಆ ವಯಸ್ಸಲ್ಲಿ ನೋಡಬಾರದನ್ನೇನನ್ನೋ ನೋಡಿ ಆಮೇಲೆ ಖುರಾನು ಓದುವಾಗ ನೆನಪಾಗಿರಬೇಕು! ಅದಕ್ಕೇ ಮಹಾನುಭಾವರು ಅರೆಕ್ಷಣದ ಐಹಿಕ ಸುಖಕ್ಕಾಗಿ ಸಿಗುವ ಸರಳವಾದ ನರಕ ಶಿಕ್ಷೆಯನ್ನು ನನಗೆ ನೆನಪಿಸಲೋ ಎಂಬಂತೆ ಆಗಷ್ಟೇ ಮುಡಿ ಮೊಳೆಯುತ್ತಿದ್ದ ನನ್ನ ಬಾಲ್ಯಕಾಲದ ಕಂಕುಳಿಗೆ ಬೆತ್ತದ ತುದಿಯಿಂದ ತಿವಿದಿದ್ದರು. ಹಾ! ಈಗ ನೆನಪಾಯಿತು. ಖುರಾನು ಓದುವಾಗ ನಡುವೆ ಈ ಕಂಕುಳಿನ ಕೂದಲನ್ನು ನೆನೆದುಕೊಂಡೇ ನಾನು ಕಿಸಕ್ಕನೆ ನಕ್ಕಿದ್ದು. ನೋಡಿದ್ದು ನಾನೊಬ್ಬನೇ ಆಗಿರಲಿಲ್ಲ. ಪಕ್ಕದಲ್ಲಿ ಖುರಾನು ಓದುತ್ತಿರುವಂತೆ ನಟಿಸುತ್ತಿದ್ದ ಪಕ್ಕದ ಮನೆಯ ಆಮಿನಾಳೂ ನನ್ನ ಕಂಕುಳಿನ ಕೂದಲು ನೋಡಿ ನಕ್ಕಿದ್ದಳು. ಮತ್ತು ತನಗೂ ಅದು ಬಂದಿದೆ ಎಂದು ತೋರಿಸಿದ್ದಳು. ನಾವಿಬ್ಬರು ಒಬ್ಬರನ್ನೊಬ್ಬರು ಹೀಗೆ ನೋಡುತ್ತಿರುವಾಗ ಅಲ್ಲಿಗೆ ನಾಗರಬೆತ್ತ ಹಿಡಿದುಕೊಂಡು ಬಂದಿದ್ದ ಮಹಾನುಭಾವರೂ ಇದನ್ನು ನೋಡಿದ್ದರು. ಮತ್ತು ನಮಗಿಬ್ಬರಿಗೂ ನಾಗರಬೆತ್ತದಿಂದ ತಕ್ಕ ಶಾಸ್ತಿಯನ್ನೂ ಮಾಡಿದ್ದರು. ಏಟು ತಿಂದು ಖುರಾನು ಓದಲು ತೊಡಗುವಾಗ ಮತ್ತೆ ಅದೆಲ್ಲ ನೆನಪಾಗಿ ನಾನು ಕಿಸಕ್ಕನೆ ನಕ್ಕಿದ್ದೆ. ಆಗ ಮಹಾನುಭಾವರು ಅರೆಕ್ಷಣದ ಐಹಿಕ ಸುಖ ಎಂದು ಮತ್ತೆ ಶಿಕ್ಷಿಸಿದ್ದರು.

ಈಗ ನೋಡಿದರೆ ಅವರ ಪೂರ್ವಜರ ನಾಡಾದ ಕಡಲ ನಡುವಿನ ಲಕ್ಷದ್ವೀಪಸಮೂಹದ ಪುಟ್ಟದ್ವೀಪವೊಂದರ ಮರಳ ತಟದಲ್ಲಿ ಮನುಷ್ಯರೆಲ್ಲರೂ ನಿದ್ದೆ ಹೋಗಿ, ಅಷ್ಟಮಿಯ ಚಂದ್ರನೂ ನಡು ಇರುಳು ಪಡುವಣದಲ್ಲಿ ಅಸ್ತಂಗತನಾಗಿ, ಆ ಕಲ್ಲೂ ನೀರೂ ಕರಗುವ ಹೊತ್ತು ಕಡಲಿನ ಅಲೆಗಳ ಕಲರವದ ಸದ್ದಿನ ಹಿನ್ನೆಲೆಯಲ್ಲಿ ನೂರಾರು ಶಂಖದ ಹುಳಗಳೂ, ಏಡಿಗಳೂ ಇನ್ನೂ ಏನೇನೆಂದು ಗೊತ್ತಾಗದ ಬಗೆಬಗೆ ಬಣ್ಣದ ಕವಡೆಯ ಜೀವಿಗಳೂ ಸಮುದ್ರ ತೀರದಲ್ಲಿ ಐಹಿಕ ಸುಖಗಳಲ್ಲಿ ಮುಳುಗೇಳುತ್ತಿದ್ದವು. ಯಾಕೋ ಮಹಾನುಭಾವರ ನೆನಪಾಗಿ ಒಂದು ನಿಮಿಷ ಕಣ್ಣು ಮುಚ್ಚಿದೆ. ತೆರೆದು ನೋಡಿದರೆ ಆಕಾಶದಲ್ಲಿ ಸಹಸ್ರ ಲಕ್ಷ ಕೋಟಿ ತಾರೆಗಳು ಆಕಾಶವನ್ನೆಲ್ಲ ಅಂಗಳ ಮಾಡಿಕೊಂಡು ಪರಮ ಅಲೌಕಿಕ ಧ್ಯಾನದಲ್ಲಿ ಮಗ್ನರಾಗಿರುವಂತೆ ಸುಮ್ಮನೆ ಮಿನುಗುತ್ತಿದ್ದವು.

ಇನ್ನೊಮ್ಮೆ ಕಣ್ಣುಮುಚ್ಚಿ ತೆರೆದರೆ ಅವಳೂ ಆಕಾಶದಲ್ಲಿ ತಾರೆಗಳ ನಡುವೆ ಕಿಸಕ್ಕನೆ ನಗುತ್ತಿದ್ದಳು. ನನ್ನ ಬಾಲ್ಯಕಾಲದ ಕಥೆಗಳನ್ನು ಕೇಳುತ್ತ ಕೇಳುತ್ತ ನಡುನಡುವೆ ಕಿಸಕ್ಕನೆ ನಗುತ್ತಿದ್ದ ನನ್ನ ಆತ್ಮ ಸಖೀ. ನರಕದ ರೌರವ ನೋವುಗಳನ್ನೆಲ್ಲ ಬದುಕಿರುವಾಗಲೇ ಅನುಭವಿಸಿ ಇನ್ನು ಈ ನರಕ ಮುಗಿಯಿತು ಎಂದು ನಿರಾಳವಾಗಿ ಆಕಾಶವನ್ನು ಸೇರಿಕೊಂಡವಳು ಅಲ್ಲಿಂದಲೇ ಎಲ್ಲವನ್ನೂ ನೆನಪಿಸಿಕೊಂಡು ಕಿಸಕ್ಕನೆ ನಗುತ್ತಿದ್ದಳು. ನಾನು ಬದುಕಿರುವುದು ಅವಮಾನ ಎಂಬಂತೆ ಅಲ್ಲಿಂದಲೇ ಅವಳು ನಗುತ್ತಿರುವ ಹಾಗೆ ನನಗೆ ಅದು ಕಾಣಿಸುತ್ತಿತ್ತು. “ನನ್ನದು ಎಲ್ಲ ಮುಗಿಯಿತು ಮಾರಾಯ. ನೀನು ಇನ್ನೂ ಅನಭವಿಸಲಿಕ್ಕಿದೆ’ ಎಂಬಂತೆ ನಗುತ್ತಿದ್ದ ಅವಳ ಹುಚ್ಚು ನಗು. ಮತ್ತೆ ಕಣ್ಣು ಮುಚ್ಚಿ ತೆರೆದು ಕ್ಯಾಮರಾ ಚೀಲಕ್ಕೆ ಹಾಕಿಕೊಂಡು ಆ ನಿರಾಳ ಇರುಳಿನಲ್ಲಿ ನಡೆಯತೊಡಗಿದೆ. ಕಡಲ ಬೆಳ್ಳಗಿನ ಮರಳ ದಡದಲ್ಲಿ ಉಭಯಚರಗಳು ಮತ್ತೆ ಹಾಗೇ ಮುಂದುವರಿಸಿದ್ದವು. ಕಂಡ¨ªೆಲ್ಲವನ್ನೂ, ಅನುಭವಿಸಿ¨ªೆಲ್ಲವನ್ನೂ ದಾಖಲಿಸುತ್ತ ಬದುಕುವ ಬರಹಗಾರನ ಬದುಕು ನರಕವೂ ಹೌದು ಸ್ವರ್ಗವೂ ಹೌದು ಎಂದು ನನ್ನ ಕಥೆಯೊಂದನ್ನು ಕೇಳಿದ ಮೇಲೆ ಅವಳು ಹೇಳಿದ್ದಳು.

ಆಮೇಲೆ ಅದೇನೋ ಇನ್ನೂ ಹಲವು ಸಂಗತಿಗಳನ್ನು ಹೇಳಿ ಇನ್ನೂ ನಗಿಸಿದ್ದಳು. ಈಗ ನೋಡಿದರೆ ಎಲ್ಲ ನಕ್ಕು ಮುಗಿಸಿ ಮೇಲಕ್ಕೆ ತೆರಳಿ ಅಲ್ಲಿಂದ ನನ್ನ ಈಗಿನ ಅವಸ್ಥೆಗಳನ್ನು ನೆನೆದುಕೊಂಡು ಮತ್ತೆ ನಗುತ್ತಿದ್ದಳು. ಅವಳು ಇನ್ನೂ ಬದುಕಿರುವಳು ಎಂದುಕೊಂಡು ನನ್ನ ದಿನದಿನದ ಕಥೆಗಳನ್ನು ಅವಳಿಗೆ ಒಪ್ಪಿಸುತ್ತಿದ್ದೆ. ಅವಳು ಅಲ್ಲಿಂದಲೇ, “ಅದು ನೀ ಹೇಳುವ ಮೊದಲೇ ನನಗೆ ಗೊತ್ತಾಗುತ್ತದೆ. ಆದರೆ ಪರವಾಗಿಲ್ಲ ಹೇಳು. ನೀನು ಕಥೆ ಅನುಭವಿಸಿ ಹೇಳುವುದು ಮಜಾವಾಗಿರುತ್ತದೆ’ ಎಂದು ಮೇಲಿನಿಂದಲೇ ಆಜ್ಞಾಪಿಸುತ್ತಿದ್ದಳು.

“ಇನ್ನೇನು ಒಂದೆರಡು ವಾರದಲ್ಲಿ ಮಹಾನುಭಾವರ ಪಿಂಗಾಣಿ ತಟ್ಟೆಯ ಒರಿಜಿನಲ್‌ ಪಿಂಗಾಣಿ ತಟ್ಟೆ ಕಾಣಲು ಸಿಗುತ್ತದ’ ಎಂದು ನಾನು ಅವಳಲ್ಲಿ ಹೇಳಿದ್ದೆ. “ಹೌದು ಸಿಗುತ್ತದೆ. ಅದು ನನಗೆ ಗೊತ್ತು’ ಎಂದು ಅವಳು ಅಂದಿದ್ದಳು. “ಆ ತಟ್ಟೆ ಇರುವ ಮನೆಯ ಪಕ್ಕದಲ್ಲೇ ಒಬ್ಬ ಹಾಡು ಹೇಳುವ, ಆಡು ಕುಯಿದು ಮಾಂಸ ಮಾರುವ ಮುದುಕ ಸಿಕ್ಕಿದ್ದಾನೆ’ ಎಂದು ಅವಳಿಗೆ ಹೇಳಿದ್ದೆ. “ಹೌದು, ಅದನ್ನೂ ನಾನು ಇಲ್ಲಿಂದಲೇ ನೋಡಿದ್ದೇನೆ. ಆ ಕುರಿತು ನೀನು ಬರೆದಿರುವುದನ್ನೂ ಇಲ್ಲಿಂದಲೇ ಓದಿದ್ದೇನೆ. ನಿನ್ನ ಫ್ಯಾಂಟಸಿಗಳು ಸ್ವಲ್ಪ ಜಾಸ್ತಿ ಆಯ್ತು’ ಎಂದು ಅಲ್ಲಿಂದಲೇ ಮೂದಲಿಸಿದ್ದಳು.

“ಹೇಯ್‌! ಇನ್ನೊಂದು ವಿಷಯ ಗೊತ್ತಾ? ಈ ಆಡು ಕೊಯ್ಯುವ ಮುದುಕನೂ, ನಮ್ಮ ಮಹಾನುಭಾವರೂ ಒಂದೇ ದ್ವೀಪದವರು. ಅವರ ಹಾಗೆಯೇ ಇವರೂ ಹುಡುಗರ ಮುಂಜಿ ಮಾಡಿಸುವಾಗ ಹಾಡು ಹೇಳುತ್ತಿದ್ದವರು. ಈಗ ಕೈಗಳು ನಡುಗಲು ತೊಡಗಿ, ಗಂಟಲೂ ನಡುಗಲು ತೊಡಗಿ ಹಾಡು ಹೇಳುವುದನ್ನು ನಿಲ್ಲಿಸಿ ಆಡು ಕೊಯಿದು ಮಾರುತ್ತಿ¨ªಾರೆ’ ಎಂದೆ. “ಹೌದು, ನಿಮ್ಮಿಬ್ಬರ ಮಾತುಗಳನ್ನು ಇಲ್ಲಿಂದಲೇ ಕೇಳಿಸಿಕೊಂಡೆ’ ಅಂದಳು. “ಅವರಿಬ್ಬರೂ ಒಂದೇ ಹಾಯಿ ಹಡಗಲ್ಲಿ ಮಂಗಳೂರಿಂದ ದ್ವೀಪಕ್ಕೆ ಹೊರಟಿದ್ದರು. ಹಾಯಿ ಹಡಗು ಬಿರುಗಾಳಿಗೆ ಸಿಕ್ಕು ಕೇರಳದ ಬೇಪೂರಲ್ಲಿ ಬೇರೆ ಬೇರೆಯಾದರು ಗೊತ್ತಾ?’ ಎಂದೂ ಹೇಳಿದೆ.

“ಅದೂ ಗೊತ್ತು. ಆದರೆ ಮುಂದೇನಾಯ್ತು ಎಂಬುದನ್ನು ಮುಂದಿನ ವಾರ ಬರಿ. ಈ ವಾರ ಇಷ್ಟು ಸಾಕು’ ಎಂದು ಮತ್ತೆ ಕಿಲಕಿಲ ನಕ್ಕಳು.
“ದೇವಿಯೇ, ಎಲ್ಲ ಗೊತ್ತಿದ್ದರೆ ಮತ್ತೆ ಯಾಕೆ ಸತ್ತುಹೋದೆ?’ ಎಂದು ಕೇಳಿದೆ.

ಅವಳು ನಗುನಿಲ್ಲಿಸಿ ನಕ್ಷತ್ರಗಳ ನಡುವೆ ದೊಡ್ಡ ಕಣ್ಣು ಬಿಟ್ಟುಕೊಂಡು ಸುಮ್ಮನೆ ನೋಡುತ್ತಿದ್ದಳು. ಏಡಿಗಳೂ ಶಂಖುಹುಳುಗಳೂ ಓಡಾಡುತ್ತಿದ್ದವು. ಇಷ್ಟು ಚಂದದ ಲೋಕವನ್ನು ಇಷ್ಟು ಬೇಗ ಬಿಟ್ಟು ಹೋಗಿದ್ದಕ್ಕೆ ಅವಳಿಗೂ ನೋವಿದ್ದಂತೆ ಕಾಣಿಸುತ್ತಿತ್ತು.

ಅಬ್ದುಲ್‌ ರಶೀದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next