ಬೆಂಗಳೂರು: ಮುಂಗಾರು ರಾಜ್ಯ ಪ್ರವೇಶಿಸುವುದು ಮತ್ತಷ್ಟು ವಿಳಂಬವಾಗಲಿದ್ದು, ಚಂಡಮಾರುತದ ಪರಿಣಾಮ ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ. ಜತೆಗೆ ದಕ್ಷಿಣ ಒಳನಾಡು ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.
ಅರಬ್ಬಿಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ. ಪರಿಣಾಮ ಮುಂಗಾರು ಮಾರುತಗಳು ವಾಯುಭಾರ ಕುಸಿತವಾದ ಕಡೆಗೆ ಚಲಿಸುತ್ತಿವೆ. ಇದರಿಂದಾಗಿ ಈವರೆಗೆ ಮುಂಗಾರು ಕರ್ನಾಟಕ ಪ್ರವೇಶಿಸಿಲ್ಲ.
ಮುಂಗಳವಾರ ಅರಬ್ಬಿಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾದರೆ, ಅದರ ಅಬ್ಬರ ಕಡಿಮೆಯಾದ ಬಳಿಕ ಮುಂಗಾರು ರಾಜ್ಯ ಪ್ರವೇಶಿಸಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನೀಲ್ ಗವಾಸ್ಕರ್ ಹೇಳಿದರು.
ಅದರಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕಲಬುರಗಿ, ರಾಮನಗರ, ಹಾಸನ, ಮಂಡ್ಯ, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಇನ್ನೂ ಎರಡು ದಿನಗಳು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.