ಬೆಂಗಳೂರು: ನಗರದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಮಳೆ ಕೆಲವು ದಿನದ ಬಿಡುವು ನೀಡಿತ್ತಾದರೂ, ಗುರುವಾರ ರಾತ್ರಿ ಮತ್ತೆ ಅಭºರಿಸಿದೆ. ಧಾರಾ ಕಾರ ಸುರಿದ ಪರಿಣಾಮ ನಗರದ ಕೆಲವು ಭಾಗಗಳು ಜಲಾವೃತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಗುರುವಾರ ರಾತ್ರಿ ಹತ್ತು ಗಂಟೆಗೆ ಆರಂಭವಾದ ಮಳೆ ಬೆಳಗ್ಗೆಯವರೆಗೆ ಸುರಿದಿದೆ.
ಭಾರಿ ಮಳೆಯಿಂದಾಗಿ ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ನೀರನ್ನು ಜನರು ರಾತ್ರಿಯೆಲ್ಲ ಹೊರಹಾಕುವ ಕೆಲಸದಲ್ಲಿ ತೊಡಗಿಕೊಳ್ಳುವಂತಾಯಿತು. ನಗರದ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ವಾಹನ ಸವಾರರು ಓಡಾಡಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳು ನೀರಿನಲ್ಲಿ ಮುಳುಗಡೆಯಾಗಿ ಸವಾರರು ತೊಂದರೆ ಅನುಭವಿಸಿದರು.
ನಗರದ ಶಾಂತಿನಗರ, ವಿಲ್ಸನ್ ಗಾರ್ಡನ್, ಕೆ.ಆರ್.ವೃತ್ತ, ಶಿವಾನಂದ ವೃತ್ತ, ಮಹದೇವಪುರ, ರಾಜಾಜಿನಗರ, ಗೊಟ್ಟಿಗೆರೆ ಹಾಗೂ ಹೆಣ್ಣೂರು ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದವು. ಜತೆಗೆ ಗೊಟ್ಟಿಗೆರೆಯ ಗುನ್ನೀನಾ ಐರಿಸ್, ಶಿವಗೌರಿ ಹಾಗೂ ಬೇಗೂರಿನ ಜಾನ್ ಅಪಾರ್ಟ್‌ಮೆಂಟ್‌ಗಳ ತಳಮಹಡಿಗಳು ಸಂಪೂರ್ಣ ಜಲಾವೃತಗೊಂಡಿದ್ದವು.
ಇಂದಿರಾನಗರ, ರಿಚ್‌ಮಂಡ್ ರಸ್ತೆ, ಕಗ್ಗದಾಸಪುರ, ಗಂಗಾನಗರ, ಹೆಣ್ಣೂರು ಸಿಟಿ ಸಿವಿಲ್ ಕೋರ್ಟ್ ಬಳಿ, ಯಲಹಂಕ ಉಪನಗರ, ಬಿಟಿಎಂ ಲೇಔಟ್, ಗುರಪ್ಪನಪಾಳ್ಯ, ಶೇಷಾದ್ರಿಪುರ, ಅರಮನೆ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಗಾಳಿ-ಮಳೆಗೆ 12ಕ್ಕೂ ಹೆಚ್ಚು ಮರಗಳು ಧರೆಗುರುಳಿದಿದ್ದು, ಶುಕ್ರವಾರ ಬೆಳಗ್ಗೆ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಅಹವಾಲು ಸ್ವೀಕರಿಸಿದ ಮೇಯರ್
ಮಳೆಯಿಂದ ಉಂಟಾದ ಅನಾಹುತ ಹಿನ್ನೆಲೆಯಲ್ಲಿ ಶುಕ್ರವಾರ ಮೇಯರ್ ಜಿ.ಪದ್ಮಾವತಿ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುರ್ತು ಪರಿಹಾರ ಕಾಮಗಾರಿಗೆ ಸೂಚನೆ ನೀಡಿದರು. ನಂತರ ಅಧಿಕಾರಿಗಳ ಸಭೆ ನಡೆಸಿ ಮಳೆ ನಿಯಂತ್ರಣ ಕೊಠಡಿಗೆ ಸಾರ್ವಜನಿಕರಿಂದ ಅಹವಾಲು ಬಂದ ತಕ್ಷಣ ನಿಯಂತ್ರಣ ಕೊಠಡಿಯಿಂದಲೇ ಹೆಚ್ಚುವರಿ ಸಿಬ್ಬಂದಿ ರವಾನಿಸುವಂತೆ ನಿರ್ದೇಶಿಸಿದರು.