Advertisement

ಅರಂತೋಡು ಪರಿಸರದಲ್ಲಿ ಕೋತಿ ಕಾಟ:ರೈತರಿಗೆ ಸಂಕಷ್ಟ

11:41 AM Feb 07, 2018 | |

ಬೆಳ್ಳಾರೆ : ಅರಂತೋಡು ಪರಿಸರದಲ್ಲಿ ಮಂಗಗಳ ಉಪಟಳ ಹೆಚ್ಚಿದ್ದು, ಬೆಳೆ ನಷ್ಟವಾಗುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಅರಂತೋಡು, ತೊಡಿಕಾನ, ಸಂಪಾಜೆ, ಕಲ್ಲುಗುಂಡಿ, ಸಂಪಾಜೆ ಗೂನಡ್ಕ, ಬೆಳ್ಳಾರೆ, ಐವರ್ನಾಡು, ಬಾಳಿಲ ಈ ಭಾಗದಲ್ಲಿ ಮಂಗಗಳು ಕೃಷಿಭೂಮಿಗೆ ಲಗ್ಗೆ ಇಡುತ್ತಿವೆ. ಸಂಪಾಜೆಯ ತಿರುಮಲ ಸೋನ ಅವರ ತೋಟದಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ.

ಹಳ್ಳಿಗಳಲ್ಲಿ ರೈತರ ತೋಟಗಳಿಗೆ ಗುಂಪು ಮಂಗಗಳು ಲಗ್ಗೆಯಿಡುವುದು ಜಾಸ್ತಿ. ಒಂದು ಗುಂಪಿನಲ್ಲಿ ಸುಮಾರು 75ರಿಂದ 80 ಮಂಗಗಳಿರುತ್ತವೆ. ದೊಡ್ಡ ಗಂಡು ಮಂಗವೊಂದು ಗುಂಪಿನ ಯಜಮಾನ. ಅದರ ಜತೆಗೆ ಐದಾರು ಹೆಣ್ಣು ಮಂಗಗಳೂ ಇರುತ್ತವೆ. ಯಜಮಾನ ಸ್ಥಾನದಲ್ಲಿರುವ ಮಂಗ ಅಪಾಯದ ಸೂಚನೆ ಕಂಡು ಬಂದರೆ ದೊಡ್ಡ ಸ್ವರ ಹೊರಡಿಸಿ, ಇಡೀ ಗುಂಪನ್ನು ಎಚ್ಚರಿಸುತ್ತದೆ. ಆಗ ಎಲ್ಲ ಮಂಗಗಳೂ ಗಿಡ, ಮರಗಳ ಪೊದೆಯಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇಲ್ಲವೇ ಓಡಿ ಹೋಗಿ ಅಪಾಯದಿಂದ ಪಾರಾಗುತ್ತವೆ.

ಕೆಲವೊಮ್ಮೆ ಒಂದೇ ಕೋತಿ ತೋಟಕ್ಕೆ ಬರುತ್ತದೆ. ಅದು ಇತರ ಮಂಗಗಳೊಂದಿಗೆ ಸೇರುವುದಿಲ್ಲ. ದೈತ್ಯ ಗಾತ್ರದ ಈ
ಕೋತಿಯ ಸ್ವಭಾವವೂ ಉಗ್ರವಾಗಿರುತ್ತದೆ. ಮಹಿಳೆಯರು, ಮಕ್ಕಳು ಓಡಿಸಲು ಪ್ರಯತ್ನಿಸಿದರೆ ತಾನೇ ಅಟ್ಟಿಸಿಕೊಂಡು ಬರುತ್ತದೆ. ಒಂದೇ ಕೋತಿ ಇರುವುದರಿಂದ ತೋಟಕ್ಕೆ ನುಗ್ಗಿ ಹಾವಳಿ ಮಾಡುವುದು ಬೇಗನೆ ಗೊತ್ತಾಗುವುದಿಲ್ಲ. ಗಿಡ-ಮರಗಳು ಅಲು ಗಾಡಿದರೆ, ತಿನ್ನುತ್ತಿರುವ ಹಣ್ಣು ಜಾರಿಬಿದ್ದಾಗ ಮಾತ್ರ ಅರಿವಿಗೆ ಬರುತ್ತದೆ.

ಬೆಳಗ್ಗೆ ನಾಲ್ಕು ಗಂಟೆಗೇ ಮಂಗಗಳ ದಿನಚರಿ ಆರಂಭವ ಆಗುತ್ತದೆ. ಕಾಡಿನಲ್ಲಿ ತಿನ್ನಲು ಏನೂ ಸಿಗದಿದ್ದರೆ ಸಮೀಪದ
ತೋಟಗಳಿಗೆ ದಾಳಿಯಿಡುತ್ತವೆ. ಇತ್ತೀಚೆಗೆ ಮಂಗಗಳು ರೈತರು ತೋಟಕ್ಕೆ ಕೋವಿ ತೆಗೆದುಕೊಂಡು ಹೋದರೂ ಭಯ ಪಡುವುದಿಲ್ಲ. ಆದರೆ, ಕವಣೆ ಕಲ್ಲಿಗೆ ಒಂದಿಷ್ಟು ಅಂಜುತ್ತವೆ. ಬಿಲ್ಲಿನಿಂದ ಕಲ್ಲು ವೇಗವಾಗಿ ಹೋಗಿ ತಾಗಿದರೆ ನೋವುಂಡ ಮಂಗಗಳು ಒಂದಷ್ಟು ದಿನ ಆ ತೋಟದ ಕಡೆಗೆ ತಲೆ ಹಾಕುವುದಿಲ್ಲ. ಆದರೆ, ರೈತರಿಗೆ ಮಂಗಗಳ ಕಾಟದಿಂದ ಶಾಶ್ವತ ಮುಕ್ತಿ ಕೊಡಿಸಲು ಮಂಕಿ ಪಾರ್ಕ್‌ನಂತಹ ಪರಿಣಾಮಕಾರಿ ಯೋಜನೆ ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ರೈತ ತಿರುಮಲ ಸೋನ ಹೇಳುತ್ತಾರೆ.

Advertisement

ಮಂಗಗಳ ಆಹಾರ ಬೇಟೆ
ರೈತರು ಕೃಷಿ ತೋಟಕ್ಕೆ ಸಾಮಾನ್ಯವಾಗಿ ಯಾವ ಹೊತ್ತಲ್ಲಿ ಬರುವುದಿಲ್ಲ ಎಂಬುದು ಮಂಗಗಳಿಗೆ ಗೊತ್ತು. ಅದೇ ಸಮಯ ಸಾಧಿಸಿ ತೋಟಗಳಿಗೆ ಲಗ್ಗೆಯಿಡುತ್ತವೆ. ತೆಂಗಿನ ಮರ ಏರಿದವೆಂದರೆ ಎಳನೀರಿನ ಗೊಂಚಲು ಖಾಲಿ ಆಯಿತೆಂದೇ ಅರ್ಧ. ಬಾಳೆ ಕಾಯಿ, ಮೂತಿಯನ್ನೂ ಬಿಡುವುದಿಲ್ಲ. ಅಡಿಕೆ ಸಿಪ್ಪೆ ಸುಲಿದು ಅದರ ರಸ ಹೀರುತ್ತವೆ. ಗೇರು ಹಣ್ಣು ಹಾಗೂ ಕೊಕ್ಕೋ ಬೀಜಗಳನ್ನೂ ತಿನ್ನುತ್ತವೆ. ತರಕಾರಿ ಬೆಳೆಸಿದ್ದರಂತೂ ಇವುಗಳಿಗೆ ಹಬ್ಬ. ಪಪ್ಪಾಯಿ, ಹಲಸಿನ ಹಣ್ಣು – ಯಾವುದನ್ನೂ ತಿನ್ನದೆ ಬಿಡುವುದಿಲ್ಲ. ತಿನ್ನುವುದು ಒತ್ತಟ್ಟಿಗಿರಲಿ, ಅವುಗಳ ಆಟಕ್ಕೆ ಫ‌ಸಲು ಹಾಳಾಗುವುದೇ ಹೆಚ್ಚು.

ಸಾಧನ ಖರೀದಿಸಿ
ಕೃಷಿ ತೋಟಗಳಲ್ಲಿ ಮಂಗಗಳ ಉಪಟಳ ಜಾಸ್ತಿಯಾಗಿದ್ದು, ರೈತ ನಷ್ಟ ಅನುಭವಿಸುತ್ತಿದ್ದಾನೆ. ಗ್ರಾ.ಪಂ. ಗಳು ಕೋತಿಗಳನ್ನು ಹಿಡಿಯುವ ಸಾಧನ ಖರೀದಿಸಿ, ಅಗತ್ಯವಿರುವ ರೈತರಿಗೆ ನೀಡಬೇಕು. ಮಂಗ ಹಿಡಿಯಲು ಸಾವಿರಾರು ರೂಪಾಯಿ ವ್ಯರ್ಥ ಮಾಡಿ ಜೇಬು ಗಟ್ಟಿ ಮಾಡುವ ಬದಲು ಇದು ಸುಲಭ ಮಾರ್ಗವಾಗಿದೆ.
– ಬಿ. ಸುಬ್ರಹ್ಮಣ್ಯ ಜೋಷಿ
ಕೃಷಿಕರು, ಬೆಳ್ಳಾರೆ 

ಖಾಲಿಯಾಗಿದೆ ಕಾಡು
ಮೊದಲೆಲ್ಲ ಮಂಗಗಳಿಗೆ ಅರಣ್ಯದಲ್ಲಿ ಹೇರಳವಾಗಿ ಹಣ್ಣು ಹಂಪಲುಗಳು ದೊರೆಯುತ್ತಿದ್ದವು. ಅರಣ್ಯ ನಾಶಗೊಳ್ಳುತ್ತಿದೆ. ಪರಿಣಾಮವಾಗಿ ಮಂಗಗಳಿಗೆ ಕಾಡಿನಲ್ಲಿ ಆಹಾರ ದೊರೆಯುತ್ತಿಲ್ಲ. ಇದರಿಂದ ಕೃಷಿ ತೋಟಗಳಿಗೆ ಮಂಗಗಳು ಲಗ್ಗೆ ಇಡುತ್ತಿವೆ.
– ಕೆ.ಜಿ. ಪಾಲಿಚಂದ್ರ
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸುಳ್ಯ

 ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next