ಕಾಡೊಂದರಲ್ಲಿ ನೂರಾರು ಸಂಖ್ಯೆಯಲ್ಲಿ ಕೋತಿಗಳ ಗುಂಪೊಂದು ವಾಸವಾಗಿತ್ತು. ಆದರೆ ಆ ವರ್ಷ ಮಳೆ ಕಡಿಮೆಯಾದ ಕಾರಣ ಕಾಡಿನಲ್ಲಿ ತಿನ್ನಲು ಫಲದ ಕೊರತೆಯಾಯಿತು. ಏನು ಮಾಡೋಣವೆಂದು ಸಭೆ ಸೇರಿ ಒಂದು ನಿರ್ಧಾರಕ್ಕೆ ಬಂದವು. ಅದರಂತೆ ಆಹಾರವನ್ನು ಅರಸುತ್ತಾ ಅವೆಲ್ಲಾ ವಲಸೆ ಹೊರಟವು. ಹಲವಾರು ಮೈಲುಗಳಷ್ಟು ದೂರ ಸಾಗಿದ ಬಳಿಕ ಅವುಗಳಿಗೆ ದೂರದಲ್ಲೊಂದು ಬಾಳೆತೋಟ ಕಾಣಿಸಿತು. ಪ್ರಯಾಣದಿಂದ ಅಲೆದು ಸುಸ್ತಾಗಿದ್ದ ಕೋತಿಗಳು ಬಾಳೆತೋಟ ಕಂಡೊಡನೆ ಸಂತಸದಿಂದ ನಲಿದಾಡಿದವು. ಶುರುವಿಗೆ ಬಾಳೆತೋಟದ ಯಜಮಾನ ಹತ್ತಿರದಲ್ಲಿದ್ದರೆ ಎಂಬ ಭಯ ಕಾಡಿತು. ಆದರೆ ಆ ತೋಟಕ್ಕೆ ಬೇಲಿಯೇ ಇರಲಿಲ್ಲ. ಅದು ಯಾರಿಗೂ ಸೇರಿದ ತೋಟವಾಗಿರಲಿಲ್ಲ. ತಾನಾಗಿಯೇ ಬೆಳೆದು ನಿಂತಿದ್ದ ಬಾಳೆ ತೋಟ ಅದಾಗಿತ್ತು. ಹೀಗಾಗಿ ಕೋತಿಗಳು ನಿಶ್ಚಿಂತೆಯಿಂದ ಬಾಳೆತೋಟಕ್ಕೆ ನುಗ್ಗಿ ಕಂಠಮಟ್ಟ ಬಾಳೆಹಣ್ಣುಗಳನ್ನು ತಿಂದು ತೇಗಿದವು.
ಬಾಳೆಹಣ್ಣು ತಿಂದು ಸುಧಾರಿಸಿಕೊಳ್ಳುತ್ತಿದ್ದ ಕೋತಿಗಳಿಗೆ ಬಾಯಾರಿಕೆಯಾಯಿತು. ತೋಟದಿಂದ ಸ್ವಲ್ಪ ದೂರದಲ್ಲಿ ಒಂದು ನೀರಿನ ಕೊಳವಿತ್ತು. ಆ ಕೊಳ ಸ್ವಚ್ಛವೂ ಸುಂದರವೂ ಆಗಿತ್ತು. ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತ ಕೆಲ ಪುಂಡ ಬುದ್ಧಿಯ ಕೋತಿಗಳು ನೀರಿಗಿಳಿಯಲು ಮುಂದಾದವು. ಆಗ ತಂಡದಲ್ಲಿದ್ದ ಹಿರಿಯ ಕೋತಿಯು ಅವುಗಳನ್ನು ತಡೆಯಿತು. ಇಷ್ಟು ಚೆನ್ನಾಗಿ ಆಕರ್ಷಕವಾಗಿದೆಯೆಂದರೆ ಇಲ್ಲೇನೋ ಅಪಾಯ ಇರಬಹುದೆಂದು ಬುದ್ಧಿ ಹೇಳಿತು. ಅಲ್ಲದೆ ಆ ಕೊಳದ ದಡದಲ್ಲಿ ಯಾವುದೇ ಪ್ರಾಣಿಗಳ ಹೆಜ್ಜೆ ಗುರುತಿರಲಿಲ್ಲ. ಇದರಿಂದ ಹಿರಿಯ ಕೋತಿಯ ಅನುಮಾನ ಬಲವಾಯಿತು. ಆದರೆ ತಾಳ್ಮೆ ಇರದ ಪುಂಡ ಕೋತಿಗಳು ಹಿರಿಯ ಕೋತಿಯ ಮಾತು ಕೇಳಲು ಸಿದ್ಧವಿರಲಿಲ್ಲ. ಸೀದಾ ಕೊಳದೊಳಕ್ಕೆ ಇಳಿದೇಬಿಟ್ಟವು.
ಇದನ್ನೇ ಹೊಂಚು ಹಾಕಿ ಕುಳಿತಿದ್ದ ಮೊಸಳೆಗಳು ತಮ್ಮ ರಾಕ್ಷಸಾಕಾರದ ಬಾಯನ್ನು ತೆರೆದು ಒಮ್ಮೆಲೆ ಪುಂಡ ಕೋತಿಗಳ ಮೇಲೆ ಬಿದ್ದವು. ಈ ಅನಿರೀಕ್ಷಿತ ದಾಳಿಯನ್ನು ನಿರೀಕ್ಷಿಸಿರದ ಕೋತಿಗಳು ಹೌಹಾರಿದವು. ಮೊಸಳೆ ಬಾಯಿಯಿಂದ ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದವು. ಆದರೆ ಮೂರು ನಾಲ್ಕು ಕೋತಿಗಳು ಮೊಸಳೆಗಳಿಗೆ ಆಹಾರವಾಗಿಯೇ ಬಿಟ್ಟವು. ಇವೆಲ್ಲವನ್ನೂ ಉಳಿದ ಕೋತಿಗಳು ದಡದಲ್ಲಿ ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದವು.
ಕೋತಿಗಳಿಗೆ ಏನು ಮಾಡುವುದೆಂದು ತೋಚಲೇಇಲ್ಲ. ಬಾಯಾರಿಕೆ ಬೇರೆ ಹೆಚ್ಚಾಗುತ್ತಿತ್ತು. ಆ ಕೊಳ ಬಿಟ್ಟರೆ ಹತ್ತಿರದಲ್ಲೆಲ್ಲೂ ನೀರಿನ ಸೆಲೆಯಿರಲಿಲ್ಲ. ನೀರು ಕುಡಿಯೋಣವೆಂದರೆ ಮೊಸಳೆಗಳು ಇನ್ನೂ ದಡದ ಬಳಿ ಹೊಂಚುಹಾಕಿ ಕುಳಿತಿದ್ದವು. ಆ ಸಮಯದಲ್ಲಿ ಹಿರಿಯ ಕೋತಿ ಒಂದು ಉಪಾಯ ಮಾಡಿತು. ಬಾಳೆ ತೋಟದ ಪಕ್ಕದಲ್ಲೇ ಬಿದಿರಿನ ಜೊಂಡು ಬೆಳೆದಿತ್ತು. ಅಲ್ಲಿಂದ ಐದಾರು ಉದ್ದನೆಯ ಬಿದಿರನ್ನು ತರಲು ಹೇಳಿತು. ಅದರಂತೆ ಬಲಶಾಲಿ ಕೋತಿಗಳು ಬಿದಿರಿನ ಕೋಲನ್ನು ತಂದವು. ಮೊಸಳೆಗಳೆಲ್ಲಾ ಅಚ್ಚರಿಯಿಂದ ನೋಡಹತ್ತಿದವು ಈ ಕೋತಿಗಳು ಏನು ಮಾಡುತ್ತಿವೆಯೆಂದು. ಹಿರಿಯ ಕೋತಿ ಒಂದು ಬಿದಿರಿನ ಕೊಳವೆಯನ್ನು ತಾನು ಹಿಡಿದು ಅದರ ತುದಿಯನ್ನು ಕೊಳದ ನೀರಿಗೆ ಇಳಿಸಿತು. ನಂತರ ಇನ್ನೊಂದು ತುದಿಯ್ನು ಬಾಯಿಗಿಟ್ಟು ನೀರನ್ನು ಹೀರಿತು. ಹಿರಿಯನ ಬುದ್ಧಿವಂತಿಕೆ ಕಂಡು ಕೋತಿಗಳೆಲ್ಲಾ ಹರ್ಷೋದ್ಗಾರ ಮಾಡಿದವು. ಮೊಸಳೆಗಳಂತೂ ಕೋಪದಿಂದ ಹಲ್ಲುಕಡಿದವು. ಕೋತಿಗಳೆಲ್ಲಾ ಕೊಳದಿಂದ ದೂರ ನಿಂತು ಬಿದಿರಿನ ಕೊಳವೆ ತೂರಿಸಿ ಸರದಿ ಪ್ರಕಾರ ಬಾಯಾರಿಕೆ ನೀಗಿಸಿಕೊಂಡವು.
ಪ. ನಾ. ಹಳ್ಳಿ ಹರೀಶ್ ಕುಮಾರ್, ತುಮಕೂರು