ಹುಣಸೂರು: ಕಳೆದ 5 ವರ್ಷಗಳಿಂದ ದಲಿತರ ಉದ್ಧಾರಕ್ಕಾಗಿ 84 ಸಾವಿರ ಕೋಟಿ ರೂ. ಮೀಸಲಿಟ್ಟು, ಯೋಜನೆ ಜಾರಿಗೊಳಿಸದ ಅಧಿಕಾರಿಗಳನ್ನು ಜೈಲಿಗಟ್ಟುತ್ತೇನೆಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆ ಹಣವನ್ನು ಇತರೆ ಯೋಜನೆಗೆ ಬಳಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಂಸದ ಎಚ್.ವಿಶ್ವನಾಥ್ ಆರೋಪಿಸಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಜೆಡಿಎಸ್‌ನಿಂದ ನಡೆದ ದಲಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಜಗತ್ತಿನ ಮೇಧಾವಿ. ದೇಶಕ್ಕೆ ಸಾರ್ವಕಾಲಿಕ ಸಂವಿಧಾನ ನೀಡಿದ ಮೇರುಪ್ರತಿಭೆ. ಈ ಸಂವಿಧಾನವೇ ಭಾರತೀಯರ ಹೃದಯವಾಗಿದೆ ಎಂದು ಹೇಳಿದರು.
ಬಾಬು ಜಗಜೀವನರಾಂ ಗರೀಬಿ ಹಟಾವೋ ಮೂಲಕ ಬಡವರ ಕಲ್ಯಾಣ ಯೋಜನೆ ಜಾರಿಗೊಳಿಸಿದ್ದರು. ಅದೇರೀತಿ ಸಂವಿಧಾನದ ಆಶಯದಂತೆ ದೇಶ ಮೆಚ್ಚುವ ಕೆಲಸ ಮಾಡಿದ್ದ ಅರಸರ ಆದರ್ಶದಂತೆ ಆಡಳಿತ ನಡೆಸುತ್ತೇನೆ ಎಂದಿದ್ದ ಸಿದ್ದರಾಮಯ್ಯ ಮಾಡಿದ್ದು ಕೇವಲ ಲೂಟಿ ಮತ್ತು ಭ್ರಷ್ಟಾಚಾರದ ಆಡಳಿತ ಎಂದು ಆರೋಪಿಸಿದರು.
ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಖರ್ಚು ಮಾಡದ ಅಧಿಕಾರಿಗಳನ್ನು ಜೈಲಿಗಟ್ಟುತ್ತೇನೆಂದು ಹೇಳಿ ಇದೀಗ ಅದೇ ಹಣವನ್ನು ನೀರಾವರಿ,ರಸ್ತೆ, ಗ್ರಾಮೀಣಾಭಿವೃದ್ಧಿಗೆ ಖರ್ಚು ಮಾಡಿದ್ದಾರೆ. ಇನ್ನು ಈ ಹಣದಿಂದ 2 ಸಾವಿರ ಕೋಟಿ ರೂ. ತೆಗೆದು ರೈತರ ಸಾಲಮನ್ನಾ ವಿನಿಯೋಗಿಸಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು ತಾಲೂಕಿನಲ್ಲಿ ಅಭಿವೃದ್ಧಿ ಮಾಡಿದ್ದೇನೆನ್ನುವ ಶಾಸಕ ಎಚ್.ಪಿ.ಮಂಜುನಾಥ್ ತಾಲೂಕಿನಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರದ್ದದಾಗಿದೆ. ಜನರ ಹಣ ತಿಂದವರು ಉದ್ಧಾರವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಗೋವಿಂದಯ್ಯ ಮಾತನಾಡಿದರು. ನಗರಸಭಾಧ್ಯಕ್ಷ ಎಂ.ಶಿವಕುಮಾರ್, ಶಿವಶೇಖರ್, ಬಿಳಿಕೆರೆ ರಾಜು, ಹರಿಹರಾನಂದಸ್ವಾಮಿ, ನಿಂಗರಾಜಮಲ್ಲಾಡಿ, ಮುಖಂಡರಾದ ಗಣೇಶ್‌ಕುಮಾರಸ್ವಾಮಿ, ಶಂಕರ್, ಲ್ಯಾಂಪ್ಸ್ ಕೃಷ್ಣಯ್ಯ ಮಾತನಾಡಿದರು.
ಜಿಪಂ ಸದಸ್ಯ ಎಂ.ಬಿ.ಸುರೇಂದ್ರ, ಮುಖಂಡರಾದ ಡಿ.ಕೆ.ಕುನ್ನೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಹರಳಹಳ್ಳಿ ಮಾದೇಗೌಡ, ಶಿವಣ್ಣ, ತಿಮ್ಮನಾಯ್ಕ, ಅಣ್ಣಯ್ಯನಾಯ್ಕ, ಯುವ ಅಧ್ಯಕ್ಷ ಲೋಕೇಶ್, ಪುಟ್ಟರಾಜು ಇದ್ದರು.