Advertisement
ಅಜ್ಞಾತ ಸ್ಥಳದಿಂದ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಸುಮಾರು ಒಂದು ತಾಸಿಗೂ ಅಧಿಕ ಕಾಲ ಚಿತ್ರೀಕರಿಸಿದ ವಿಡಿಯೋದಲ್ಲಿ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಆಪ್ತ ಕಾರ್ಯದರ್ಶಿ ಮಂಜುನಾಥ್ ಎಂಬುವರು ನನಗೆ ಹಳೆಯ ನೋಟು ಬದಲಾಯಿಸಿಕೊಡಲು ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾನೆ. ಆದರೆ, ಆ ಹೆಸರಿನ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ನಮ್ಮಲ್ಲಿಲ್ಲ ಎಂದು ಮುಖ್ಯಮಂತ್ರಿಯವರ ಕಚೇರಿ ಮೂಲಗಳು ಸ್ಪಷ್ಟಪಡಿಸಿದೆ.
Related Articles
Advertisement
ವಿಡಿಯೋದಲ್ಲೇನಿದೆ.?“ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಅಂಬೇಡ್ಕರ್ ದಿನಾಚರಣೆಯಂದು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಏ.14ರಂದು ನನ್ನ ಮನೆ ಮೇಲೆ ದಾಳಿ ನಡೆಸಿ ನನಗೆ ಕೆಟ್ಟ ಹೆಸರು ತಂದಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಿಸುವ ದೇವಾಲಯವಿದ್ದಂತೆ. ಆದರೆ, ಇಂದು ಹಫ್ತಾ ವಸೂಲಿ ಮಾಡಿ ವಂಚಿಸುತ್ತಿದ್ದಾರೆ. ಅಂದು ಬೆಳಗ್ಗೆ 5 ಗಂಟೆಗೆ ದಾಳಿ ನಡೆಸಿದ್ದಾರೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ಕೇಳಿ ತಿಳಿದುಕೊಂಡೆ. ಕೂಡಲೇ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಹೇಳಿದೆ. ಆಗ ಗೌಡರು ದೆಹಲಿಯಲ್ಲಿದ್ದರು. ಮಾಧ್ಯಮದವರು ನನ್ನ ಮನೆ ಬಳಿ ಬರುವಷ್ಟರಲ್ಲೇ ಪೊಲೀಸರು ತಮ್ಮ ಕೈ ಚೆಳಕ ತೋರಿದ್ದಾರೆ. ಸಮಾಜ ಸೇವೆ ಮಾಡಲು ಕಟ್ಟಿಕೊಂಡಿರುವ ಸ್ನೇಹ ಸೇವಾ ಸಮಿತಿ ಕಚೇರಿಯಲ್ಲಿ ನಿಷೇಧಿತ ಹಳೆಯ 500,1000 ರೂಪಾಯಿ ನೋಟುಗಳು ಪತ್ತೆಯಾಗಿದ್ದಾಗಿ ಹೇಳುತ್ತಿದ್ದಾರೆ. ಇದು ಶುಧœ ಸುಳ್ಳು. ಇದಕ್ಕೂ ಮುನ್ನ ಐದು ಮಂದಿ ಮಧ್ಯವರ್ತಿಗಳು, ಕಾರು ಡೀಲರ್ ಕಿಶೋರ್, ವಕೀಲ ಮಧು, ಗಣೇಶ್, ಉಮೇಶ್ ನಮ್ಮ ಮನೆ ಬಳಿ ಬರುತ್ತಿದ್ದರು. ಆದರೆ, ಇವರ ಜತೆ ಯಾವುದೇ ಸಂಬಂಧವಿಲ್ಲ. ಆ ವ್ಯಕ್ತಿಗಳು ಒಂದು ದಿನ ಮನೆ ಬಳಿ ಬಂದು ನಾಲ್ವರು ಐಪಿಎಸ್ ಅಧಿಕಾರಿಗಳ 10 ಕೋಟಿ ಹಣ ಇದೆ. ಬದಲಾಯಿಸಿಕೊಡುವಂತೆ ಹೇಳಿದ್ದರು. ಇದಕ್ಕಾಗಿ ಎರಡು ತಿಂಗಳಿಂದ ನನ್ನ ಮನೆ ಬಳಿ ಇವರೇ ಬರುತ್ತಿದ್ದರು. ನಾನು ಯಾರ ಬಳಿ ಹೋಗಿಲ್ಲ. ಆದರೆ, ನೀವು ಹಣ ಬದಲಾಯಿಸಿ ಕೊಡದಿದ್ದರೆ ನಿನಗೆ ತೊಂದರೆ ಕೊಡುತ್ತಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ಮಂಜುನಾಥ್ ಎಂಬುವರಿಗೆ ಸೇರಿದ ಸಾವಿರಾರು ಕೋಟಿ ಹಣವಿದೆ ಎಂದಿದ್ದರು. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ. ಮಂಜುನಾಥ್ ಬಳಿ ಐದು ಮಂದಿ ಮಧ್ಯವರ್ತಿಗಳಿದ್ದಾರೆ. ಆ ಪೈಕಿ ನಾಲ್ಕು ಜನ ಐಪಿಎಸ್ ಅಧಿಕಾರಿಗಳಿದ್ದಾರೆ. ಇವರಲ್ಲಿ ಇಬ್ಬರು ಕಮಿಷನರ್‌ಗಳು, ಇಬ್ಬರು ಡಿಸಿಪಿಗಳಿದ್ದಾರೆ. ಇವರ ಹೆಸರನ್ನು ಹೇಳಿದರೆ ನನ್ನನ್ನು ಕೊಂದು ಬಿಡುತ್ತಾರೆ. ಆ ಮಟ್ಟದ ಅಧಿಕಾರ ಅವರ ಬಳಿಯಿದೆ ಎಂದು ಹೇಳಿದ್ದಾನೆ. ಜೀವರಾಜ್ ಆಳ್ವಾ, ರಾಮಕೃಷ್ಣ ಹೆಗಡೆ ಕಾಲದಲ್ಲೂ ಹೀಗೆ ಮಾಡಿದ್ದರು. ಈ ಪೊಲೀಸ್ ಬುದ್ದಿ ನನಗೆ ಗೊತ್ತು. ನಾಗರಾಜ್ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅವನ್ನ ಬಳಿ ಹಣ ಇದೆ. ಗೆದ್ದೇ ಬಿಡುತ್ತಾನೆಂಬ ಭಯದಿಂದ ನನ್ನ ಮೇಲೆ ದುರುದ್ದೇಶ ಪೂರ್ವಕವಾಗಿ ದಾಳಿ ನಡೆಸಿದ್ದಾರೆ. ನನ್ನ ಪೂಣ್ಯ ನಾನು ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಪೊಲೀಸರೇ ಆ ಹಳೆ ನೋಟುಗಳನ್ನು ನನ್ನ ಮನೆಯಲ್ಲಿ ತಂದಿಟ್ಟಿದ್ದಾರೆ, ನನ್ನ ಮನೆಯಲ್ಲಿದ್ದ ಹೊಸ ನೋಟುಗಳನ್ನು ಬಾಚಿಕೊಂಡು ಹೋಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗೂಂಡುರಾವ್, ಸಂಸದ ಪಿ.ಸಿ.ಮೋಹನ್ ಕೆಟ್ಟ ರಾಜಕಾರಣಿಗಳು. ನನ್ನನ್ನು 8 ಬಾರಿ ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ. 2013ರಲ್ಲಿ ಉದ್ದೇಶಪೂರ್ವಕವಾಗಿ ಗೂಂಡಾ ಕಾಯ್ದೆ ಹಾಕಿಸಿದ್ದರು. ಒಟ್ಟಾರೆಯಾಗಿ ತಮಿಳನಾಗಿ ಹುಟ್ಟಿದ್ದೆ ತಪ್ಪಾಯಿತು. ತಮ್ಮ ಎದುರು ತಮಿಳಿಗನೊಬ್ಬ ಬೆಳೆಯುತ್ತಾನೆ ಎಂಬ ಹೊಟ್ಟೆ ಕಿಚ್ಚು. ಒಂದು ವೇಳೆ ನಾನು ಶಾಸಕನಾದರೆ ಹಾರ್ಟ್ ಆಫ್ ದಿ ಸಿಟಿ ನನ್ನ ಕೈಗೆ ಬರುತ್ತದೆ. ನನ್ನ ಕ್ಷೇತ್ರದಲ್ಲಿ ಬೇರೆಯವರು ಕಾಲಿಡಲು ಹೆದರುತ್ತಾರೆ. ಹೀಗಾಗಿ ಇವೆಲ್ಲ ಮಾಡಿಸುತ್ತಿದ್ದಾರೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೇವಲ 300 ಮತಗಳಿಂದ ಸೋತಿದ್ದೆ. ದಿನೇಶ್ ಗುಂಡೂರಾವ್ 2013ರಲ್ಲಿ ನನ್ನ ವಿರುದ್ಧ ಕೆಲವರನ್ನು ಬಿಟ್ಟು ಹಲ್ಲೆ ನಡೆಸಿದರು. ಈ ಬಗ್ಗೆ ದೂರು ನೀಡಿದರೆ ಇದಕ್ಕೆ ಪ್ರತಿ ದೂರು ನೀಡಿದ್ದರು. ಸೂತ್ರಧಾರ ಮಂಜುನಾಥ್
ನನ್ನ ವಿರುದ್ಧ ಇಷ್ಟೆಲ್ಲ ಷಡ್ಯಂತ್ರ ನಡೆಯಲು ಸಿಎಂ ವಿಶೇಷಾಧಿಕಾರಿ ಮಂಜುನಾಥ್ ಕಾರಣ. ಅವರೇ ಇದರ ಸೂತ್ರಧಾರಿ. ಈವರು ಸಾವಿರಾರು ಕೋಟಿ ಹಣ ಕೊಳ್ಳೆ ಹೊಡೆದು ಹಳೆ ನೋಟು ಬದಲಾಯಿಸಿ ಕೊಡುವಂತೆ ನನ್ನ ಬಳಿ 30 ಬಾರಿ ಕೆಲ ವ್ಯಕ್ತಿಗಳನ್ನು ಕಳುಹಿಸಿದ್ದರು. ನನ್ನ ಮನೆಯಲ್ಲಿ ಪತ್ತೆಯಾದ ಹಣ ನನ್ನದಲ್ಲ. ಇದರಲ್ಲಿ ಮಂಜುನಾಥ್ ಮತ್ತು ನಾಲ್ವರು ಐಪಿಎಸ್ ಅಧಿಕಾರಿಗಳದ್ದು ಇದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾನೆ.