ಬೆಂಗಳೂರು: ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ವಂಚಿತ ಅರ್ಜಿದಾರರಿಗೆ ಬಡ್ಡಿ ಸಹಿತ ಠೇವಣಿ ಹಿಂದಿರುಗಿಸಬೇಕು, ನಿವೇಶನ ಹಂಚಿಕೆಯಾದವರಿಗೆ ಬಾಕಿ ಮೊತ್ತ ಪಾವತಿಸಲು 4 ತಿಂಗಳ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿ ನಾಡಪ್ರಭು ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬಿಡಿಎ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅರ್ಜಿದಾರರ ಠೇವಣಿಗೆ ಒಂದು ವರ್ಷ ಕಾಲ ಬ್ಯಾಂಕ್‌ನಿಂದ ಬಡ್ಡಿ ಪಡೆದಿರುವ ಬಿಡಿಎ ಅರ್ಜಿದಾರರಿಗೆ ಬಡ್ಡಿ ನೀಡದೆ ಕೇವಲ ಠೇವಣಿ ಮೊತ್ತವನ್ನಷ್ಟೇ ವಾಪಸ್ ನೀಡಿದೆ. ಅವರಿಗೆ ಬಡ್ಡಿಯನ್ನೂ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ನಿವೇಶನ ಸಿಕ್ಕವರಿಗೆ ಹಣ ಪಾವತಿಸಲು ಕನಿಷ್ಠ ನಾಲ್ಕು ತಿಂಗಳ ಕಾಲಾವಕಾಶ ನೀಡಬೇಕು. ಬಡಾವಣೆಯಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ವಿಧಿಸಿರುವುದರಿಂದ ಗುತ್ತಿಗೆ ಅವಧಿಗೆ ಬದಲಾಗಿ ಶುದ್ಧ ಕ್ರಮ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, “”ಬಡಾವಣೆಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರಿಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ. ಫೆ.15ರೊಳಗೆ ಸಂಬಂಧಪಟ್ಟ ನಿವೇಶನದಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು,”ಎಂದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಡಿಎ ಆಯುಕ್ತ ರಾಜಕುಮಾರ ಖತ್ರಿ, ನಿವೇಶನದಾರರಿಗೆ ಗುತ್ತಿಗೆ ಅವಧಿ ಇಲ್ಲದೆಯೇ ಶುದ್ಧ ಕ್ರಮಪತ್ರ ನೀಡುವ ಬಗ್ಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ಬಿಡಿಎ ನಿಯಮಾವಳಿಗೆ ತಿದ್ದುಪಡಿ ತರಬೇಕಾಗುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯುವ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ.