ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಮರೆಯಲಾಗದ್ದು. ಒಂದು ದಿನ ನಾನು ಕಾಲೇಜು ಬಿಟ್ಟು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಒಂದು ಅಜ್ಜಿ ನನ್ನ ಬಳಿ ಬಂದು, “ನೀನು ಎಲ್ಲಿಗೆ ಹೋಗುವುದು?’ ಎಂದು ಕೇಳಿದರು.
ನಾನು ಹೋಗುವ ಜಾಗದ ಹೆಸರು ಹೇಳಿದೆ. ಆಗ ಅಜ್ಜಿ ತನ್ನ ಸಾಮಾನು-ಸರಂಜಾಮುಗಳನ್ನು ಇಟ್ಟಲ್ಲಿಗೆ ಹೋಗಿ “ಇಲ್ಲಿಗೆ ಬಾ’ ಎಂದು ಕರೆದರು. ಏನಿರಬಹುದು ಎಂದು ಆಲೋಚಿಸಿಕೊಂಡು ಅವರ ಬಳಿ ಹೋದೆ.
ಅವರು ಕೈಯಲ್ಲಿ ಇದ್ದ ಚೀಟಿಯನ್ನು ನನ್ನ ಕೈಗಿತ್ತು, “ಇದು ನನ್ನ ಮಗನ ಮೊಬೈಲ್ ನಂಬರ್, ನಾನು ಬಂದು ಒಂದು ಗಂಟೆ ಆಯ್ತು. ಕರೆದುಕೊಂಡು ಹೋಗಲು ಇನ್ನು ಬಂದಿಲ್ಲ. ಒಂದು ಫೋನ್ ಮಾಡಿಕೊಡಬಹುದಾ?’ ಅಂತ ಕೇಳಿದರು. ನಾನು ತತ್‌ಕ್ಷಣ ಫೋನ್ ಮಾಡಿ ಅವರ ಕೈಗೆ ಕೊಟ್ಟೆ.
ಅಜ್ಜಿಯ ಮಗ ಯಾವುದೋ ಕೆಲಸದ ಒತ್ತಡದಿಂದಾಗಿ ಅಮ್ಮನನ್ನು ಕರೆದುಕೊಂಡು ಹೋಗುವ ವಿಚಾರವನ್ನು ಮರೆತಿದ್ದನಂತೆ. ನಂತರ ಬೇಗ ಬರುತ್ತೇನೆಂದು ಹೇಳಿ ಫೋನ್ ಇಟ್ಟರು.
ಯಾರೋ ಒಬ್ಬ ಅಪರಿಚಿತೆ ನಾನು ಕೇಳಿದಾಗ ಸಹಾಯ ಮಾಡಿದಳಲ್ಲ ಅನ್ನುವ ಖುಷಿಯಿಂದ ಅಜ್ಜಿ ತನ್ನ ಬ್ಯಾಗ್‌ನಿಂದ ಹತ್ತು ರೂಪಾಯಿಯ ನೋಟು ತೆಗೆದು “ತಗೋ ಮಗು’ ಅಂತ ಕೊಡಲು ಬಂದರು. ಅದಕ್ಕೆಲ್ಲ “ಹಣ ಯಾಕಜ್ಜಿ’ ಎಂದು ಹಣವನ್ನು ತೆಗೆದುಕೊಳ್ಳಲಿಲ್ಲ.
ಅಜ್ಜಿಗೆ ಮತ್ತೂ ಖುಷಿಯಾಗಿ, “ನಿನಗೆ ದೇವರು ಒಳ್ಳೆಯದು ಮಾಡಲಿ’ ಎಂದು ಆಶೀರ್ವಚಿಸಿದರು. ಆ ಒಂದು ಕ್ಷಣ ನನ್ನ ಜೀವನವಿಡೀ ನೆನಪಿನ ಬುತ್ತಿಯಲ್ಲಿರುತ್ತದೆ.
ಶಿಲ್ಪಾ ಕುಲಾಲ್
ದ್ವಿತೀಯ ಪತ್ರಿಕೋದ್ಯಮ ವಿಭಾಗ , ವಿವೇಕಾನಂದ ಪದವಿ ಕಾಲೇಜು, ಪುತ್ತೂರು