ಬೆಂಗಳೂರು: “ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಅಲ್ಲ, ಮೋದಿ ಸುನಾಮಿ ಎದ್ದಿದ್ದು, ಕರ್ನಾಟಕದಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿದ ಜಯ ಸಿಗಲಿದೆ’ ಎಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪ್ರಚಾರವನ್ನು ಗಂಭೀರವಾಗಿ ಬದ್ಧತೆಯಿಂದ ಮಾಡಲಾಗಿದೆ. ಒಂದು ಹಂತದ ಬಹಿರಂಗ ಪ್ರಚಾರ ಮುಗಿದ್ದು, ಏ.18ಕ್ಕೆ ಮತ್ತೆ ಕರ್ನಾಟಕಕ್ಕೆ ಮೋದಿ ಬರಲಿದ್ದಾರೆ. ತುಮಕೂರು, ಚಾಮರಾಜನಗರ, ಕಲಬುರಗಿ ಮೊದಲಾದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಸುಲಭದ ಜಯ ಸಾಧಿಸಲಿದ್ದಾರೆ ಎಂದರು.
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಜನರು ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಜೆಡಿಎಸ್ ರಾಜಕೀಯ ಸಂಸ್ಕೃತಿ ಹೇಗಿದೆ ಎಂಬುದು ಮಂಡ್ಯದಲ್ಲಿ ಬಹಿರಂಗಗೊಂಡಿದೆ.
ಪ್ರತಿಸ್ಪರ್ಧಿ ಮಹಿಳೆಯನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ. ಆ ಒಂದು ಕ್ಷೇತ್ರ ಗೆಲ್ಲಲು ಮಾಜಿ ಪ್ರಧಾನಿ, ಮುಖ್ಯಮಂತ್ರಿ ಸಹಿತವಾಗಿ ಸಚಿವ ಸಂಪುಟವೇ ಠಿಕಾಣಿ ಹೂಡಿದೆ ಎಂದು ಆರೋಪಿಸಿದರು.
ಮೋದಿ, ಅಮಿತ್ ಶಾ ಹಾಗೂ ರಾಷ್ಟ್ರೀಯ ನಾಯಕರ ರ್ಯಾಲಿ, ರೋಡ್ ಶೋ ಮತ್ತು ಬಹಿರಂಗ ಸಭೆ, ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ನಾಯಕರು ಹಾಗೂ ಕಾರ್ಯಕರ್ತರ ಮನೆ ಮನೆ ಭೇಟಿ ಹೀಗೆ ಮೂರು ರೀತಿಯಲ್ಲಿ ಬಿಜೆಪಿ ವ್ಯವಸ್ಥಿತ ಪ್ರಚಾರ ನಡೆಸಿದ್ದು, 22ಕ್ಕೂ ಅಧಿಕ ಸೀಟು ಗೆಲ್ಲಲಿದ್ದೇವೆ ಎಂದು ವಿವರ ನೀಡಿದರು.
ಬಿ.ಎಸ್.ಯಡಿಯೂರಪ್ಪ ಅವರ ನಕಲಿ ಡೈರಿ ಸೃಷ್ಟಿಸಿ ಅದನ್ನೇ ಪದೇಪದೆ ಸುದ್ದಿಯಾಗುವಂತೆ ಕಾಂಗ್ರೆಸ್ ಮಾಡುತ್ತಿದೆ. ಇದು ಚುನಾವಣೆ ಗಿಮಿಕ್ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಟಂಟ್ ಮಾಸ್ಟರ್ ಇದ್ದಂತೆ.
-ಮುರಳೀಧರ್ ರಾವ್, ರಾಜ್ಯ ಬಿಜೆಪಿ ಉಸ್ತುವಾರಿ