ಸಾಗರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಹೋಗಿದ್ದ ಮತದಾರರೊಬ್ಬರ ಮೊಬೈಲ್ ಕಳ್ಳತನವಾಗಿರುವ ಘಟನೆ ಸೋಮವಾರ ನಡೆದಿದೆ.
ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಉದ್ಯಮಿ ವಿನಯ್ ಎನ್.ಆರ್. ಸೋಮವಾರ ಮತದಾನ ಮಾಡಲು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬೆಳಿಗ್ಗೆ 9:30ಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮತದಾನದ ಕೊಠಡಿ ಹೊರಗಿದ್ದ ಆರಕ್ಷಕರು ಮೊಬೈಲ್ ಇರಿಸಿ ಹೋಗುವಂತೆ ತಿಳಿಸಿದ್ದಾರೆ.
ವಿನಯ್ ಮೊಬೈಲ್ ತೆಗೆದು ಆರಕ್ಷಕರು ಸೂಚಿಸಿದ ಜಾಗದಲ್ಲಿ ಇರಿಸಿ ಮತದಾನಕ್ಕೆ ಹೋಗಿದ್ದಾರೆ. ಮತದಾನ ಮಾಡಿ ಹೊರಗೆ ಬಂದಾಗ ಬೆಲೆಬಾಳುವ ಮೊಬೈಲ್ ನಾಪತ್ತೆಯಾಗಿತ್ತು. ಇಟ್ಟ ಮೊಬೈಲ್ ನಾಪತ್ತೆಯಾಗಿರುವ ಬಗ್ಗೆ ಆರಕ್ಷಕರಿಗೆ ಕೇಳಿದರೆ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮತಗಟ್ಟೆ ಹತ್ತಿರ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಿನಯ್ ಚುನಾವಣೆ ಅಧಿಕಾರಿಗಳ ಬಳಿ ಸಿಸಿ ಕ್ಯಾಮರಾ ಫುಟೇಜ್ ಕೇಳಿದರೆ ಸಿಸಿ ಕ್ಯಾಮರಾ ಹಾಳಾಗಿದ್ದಾಗಿ ತಿಳಿಸಿದ್ದಾರೆ.
ಪ್ರಮುಖವಾದ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿ ಅದರ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಮತದಾನ ಕೇಂದ್ರದಲ್ಲಿ ಗಲಾಟೆ ನಡೆದರೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಚುನಾವಣಾಧಿಕಾರಿಗಳ ಬೇಜವಾಬ್ದಾರಿತನ ಇಲ್ಲಿ ಎದ್ದು ಕಾಣುತ್ತಿದೆ ಎಂದು ವಿನಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಕಳವಿಗೆ ಸಂಬಂಧಪಟ್ಟಂತೆ ವಿನಯ್ ನಗರ ಠಾಣೆಗೆ ದೂರು ನೀಡಿದ್ದಾರೆ.