Advertisement

ಹಾಲಿ-ಮಾಜಿ ಪುರಪಿತೃಗಳ ಎಂಎಲ್‌ಎ ಟಿಕೆಟ್‌ ಲಾಬಿ

01:09 PM Nov 23, 2017 | Team Udayavani |

ಬೆಂಗಳೂರು: ಪಾಲಿಕೆಯ ಮಾಜಿ ಹಾಗೂ ಹಾಲಿ ಸದಸ್ಯರು, ಮೇಯರ್‌, ಉಪಮೇಯರ್‌ಗಳು ಶಾಸಕರಾಗುವ ಕನಸು ಕಾಣುತ್ತಿದ್ದು, ಆಯಾ ಕ್ಷೇತ್ರಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಆ ಮೂಲಕ 2018ರ ವಿಧಾನಸಭೆರ ಚುನಾವಣೆಗೆ ಟಿಕೆಟ್‌ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. 

Advertisement

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಸುಮಾರು 50ಕ್ಕೂ
ಹೆಚ್ಚು ಪಾಲಿಕೆಯ ಹಾಲಿ, ಮಾಜಿ ಸದಸ್ಯರು ಮತ್ತು ಮಾಜಿ ಮೇಯರ್‌ ಹಾಗೂ ಉಪಮೇಯರ್‌ಗಳು ವರಿಷ್ಠರ ಗಮನ
ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಗೆ ನಿಲ್ಲುವ ಇಂಗಿತವನ್ನು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿರುವ ಸದಸ್ಯರು, ಟಿಕೆಟ್‌ಗಾಗಿ ಪಕ್ಷದ ಹಿರಿಯ ನಾಯಕರ ಮೂಲಕ ಲಾಭಿ ಆರಂಭಿಸಿದ್ದಾರೆ. ಇನ್ನು ಕೆಲವು
ಸದಸ್ಯರು ಟಿಕೆಟ್‌ ನೀಡದಿದ್ದರೆ ಪಕ್ಷ ಬದಲಿಸಲು ಸಹ ಸಿದ್ಧತೆ ನಡೆಸಿದ್ದು, ಚುನಾವಣೆ ಹತ್ತಿರವಾದಂತೆ ಪಕ್ಷಾಂತರ
ಪರ್ವ ಆರಂಭವಾಗು ಸಾಧ್ಯತೆಯಿದೆ.

ಪಾಲಿಕೆಯ ಮಾಜಿ, ಹಾಲಿ ಸದಸ್ಯರು ತಮ್ಮದೇ ಪಕ್ಷದ ಶಾಸಕರಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದ ಪಾಲಿಕೆ ಸದಸ್ಯರೊಂದಿಗೆ ಟಿಕೆಟ್‌ಗಾಗಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಹಾಲಿ ಶಾಸಕರಿಗೆ ಎದುರಾಗಲಿದೆ. ಹೀಗಾಗಿ ಪಕ್ಷದ ಮುಖಂಡರಿಗೆ ಟಿಕೆಟ್‌ ಹಂಚಿಕೆ ಸವಾಲಾಗಲಿದೆ.

ರಾಜಾಜಿನಗರ
ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಮೇಯರ್‌ ಜಿ.ಪದ್ಮಾವತಿ ಅವರು ಪ್ರತ್ನಿಸುತ್ತಿದ್ದು, ಈಗಾಗಲೇ ಕ್ಷೇತ್ರದಲ್ಲಿ ತಾವೇ ಮುಂದಿನ ಕಾಂಗ್ರೆಸ್‌ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗೇ ವಿಜಯ ನಗರ ಹಾಗೂ
ಗೋವಿಂದರಾಜನಗರ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ ಮಾಜಿ ಮೇಯರ್‌ ಶಾಂತಕುಮಾರಿ, ಪಾಲಿಕೆ ಸದಸ್ಯರಾದ ಉಮೇಶ್‌ ಶೆಟ್ಟಿ, ಎಚ್‌.ರವೀಂದ್ರ, ಲಕ್ಷ್ಮೀನಾರಾಯಣ್‌ ಸೇರಿ ಹಲವರು ಪೈಪೋಟಿ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರ
ಕ್ಷೇತ್ರದಲ್ಲಿ ಜೆಡಿಎಸ್‌ನ ಪಾಲಿಕೆ ಮಾಜಿ ಸದಸ್ಯ ಆರ್‌.ಪ್ರಕಾಶ್‌, ಬಿಜೆಪಿಯ ರಾಮಚಂದ್ರ ಹಾಗೂ ಜೆಡಿಎಸ್‌ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಟಿಕೆಟ್‌ಗೆ ಗಾಳ ಹಾಕಿದ್ದಾರೆ. ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲು
ಮಾಜಿ ಉಪಮೇಯರ್‌ ಎಲ್‌.ಶ್ರೀನಿವಾಸ್‌ ಉತ್ಸುಕ ರಾಗಿದ್ದು, ಜಯನಗರ ಟಿಕೆಟ್‌ಗೆ ಕಾಂಗ್ರೆಸ್‌ನ ಮಾಜಿ
ಮೇಯರ್‌ ಮಂಜುನಾಥ ರೆಡ್ಡಿ, ಮಾಜಿ ಸದಸ್ಯ ಉದಯ ಶಂಕರ್‌, ಬಿಜೆಪಿ ಸದಸ್ಯ ಎನ್‌.ನಾಗರಾಜ್‌ ಪ್ರಯತ್ನಿಸುತ್ತಿದ್ದಾರೆ.

Advertisement

ಮಹಾಲಕ್ಷ್ಮಿ ಬಡಾವಣೆ
ಜೆಡಿಎಸ್‌ನ ಕೆ.ಗೋಪಾಲಯ್ಯ ಹಾಲಿ ಶಾಸಕರಾಗಿರುವ ಮಹಾಲಕ್ಷ್ಮಿ ಬಡಾವಣೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯ ಮಾಜಿ ಉಪಮೇಯರ್‌ ಎಸ್‌.ಹರೀಶ್‌, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಂ.ನಾಗರಾಜ್‌, ಪಾಲಿಕೆಯ ಹಾಲಿ ಸದಸ್ಯ, ಕಾಂಗ್ರೆಸ್‌ನ ಎಂ.ಶಿವರಾಜ್‌ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, ಕ್ಷೇತ್ರದಲ್ಲಿ ಹಲವು
ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಸೇರಿಸುವ ಮೂಲಕ ಬಲ ಪ್ರದರ್ಶಿಸುತ್ತಿದ್ದಾರೆ. 

ಪದ್ಮನಾಭನಗರ
ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಬಿಜೆಪಿಯ ಮಾಜಿ ಮೇಯರ್‌ ವೆಂಕಟೇಶ ಮೂರ್ತಿ ಸಿದ್ಧತೆ ನಡೆಸಿದ್ದು, ಯಾವ ಪಕ್ಷದಿಂದ ಟಿಕೆಟ್‌ ದೊರೆಯಲಿದೆ ಎಂಬುದು ಪ್ರಶ್ನೆಯಾಗಿದೆ. ಇನ್ನು ಶಿವಾಜಿನಗರದಲ್ಲಿ ಸ್ಪರ್ಧಿಸಲು ಬಿಜೆಪಿಯ ಮಾಜಿ ಸದಸ್ಯ ಗೋಪಿ ಹಾಗೂ ಪುಲಕೇಶಿ ನಗರದಲ್ಲಿನ ಚುನಾವಣೆ ನಿಲ್ಲಲು ಕಾಂಗ್ರೆಸ್‌ನ ಹಾಲಿ ಮೇಯರ್‌ ಸಂಪತ್‌ ರಾಜ್‌ ಹಾಗೂ ಪಾಲಿಕೆ ಸದಸ್ಯ ಜಾಕೀರ್‌ ಹುಸೇನ್‌ ಆಕಾಂಕ್ಷಿಗಳಾಗಿದ್ದಾರೆ.

ಹೆಬ್ಟಾಳ ಕ್ಷೇತ್ರ
ಇಲ್ಲಿ ಜೆಡಿಎಸ್‌ನ ಮಾಜಿ ಉಪಮೇಯರ್‌ ಎಂ.ಆನಂದ್‌ ಪಕ್ಷದ ರಾಷ್ಟ್ರೀಯ, ರಾಜ್ಯಾಧ್ಯಕ್ಷರ ಮನವೊಲಿಕೆಗೆ ಮುಂದಾಗಿದ್ದಾರೆ. ಇನ್ನು ಚಾಮರಾಜಪೇಟೆ ಕ್ಷೇತ್ರ ಶಾಸಕ ಜಮೀರ್‌ ಅಹಮದ್‌ ಖಾನ್‌ ಜೆಡಿಎಸ್‌ ನಿಂದ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಜೆಡಿಎಸ್‌ ಪಾಲಿಕೆ ಸದಸ್ಯ ಇಮ್ರಾನ್‌ ಪಾಷ ಸ್ಪರ್ಧಿಸುವ
ಸಾಧ್ಯತೆಯಿದೆ. ಬಿಜೆಪಿಯ ಮಾಜಿ ಪಾಲಿಕೆ ಸದಸ್ಯ ಬಿ.ವಿ.ಗಣೇಶ್‌, ಕಾಂಗ್ರೆಸ್‌ನ ಬಿ.ಟಿ.ಶ್ರೀನಿವಾಸ ಮೂರ್ತಿ ಟಿಕೆಟ್‌ ಪಡೆಯುವ ರೇಸ್‌ನಲ್ಲಿದ್ದಾರೆ.

ಸರ್ವಜ್ಞನಗರ
ಕ್ಷೇತ್ರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ ಮತ್ತೂಮ್ಮೆ ಸ್ಪರ್ಧಿಸಲು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಯ್ನಾರಿ ನಡೆಸಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ಪಾಲಿಕೆ ಸದಸ್ಯ ದೇವದಾಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಶಾಂತಿನಗರದಲ್ಲಿ ಸ್ಪರ್ಧಿಸಲು ಬಿಜೆಪಿಯ ಹಾಲಿ ಸದಸ್ಯ ಗೌತಮ್‌ ಕುಮಾರ್‌, ಮಾಜಿ ಸದಸ್ಯರಾದ ಶ್ರೀಧರ್‌ರೆಡ್ಡಿ, ಗೀತಾಶ್ರೀನಿವಾಸರೆಡ್ಡಿ ರೇಸ್‌ನಲ್ಲಿದ್ದಾರೆ.

ಗಾಂಧಿನಗರ
ಗಾಂಧಿನಗರದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಟಿ.ಮಲ್ಲೇಶ್‌, ಎಸ್‌.ಎಚ್‌.ಪದ್ಮರಾಜ್‌ ಚುನಾವಣೆಗೆ ಸ್ಪರ್ಧಿಸಲು ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿದ್ದು, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯ
ಮಾಜಿ ಸದಸ್ಯರಾದ ಎನ್‌.ಆರ್‌.ರಮೇಶ್‌, ಪಿ.ಎನ್‌.ಸದಾಶಿವ, ಎ.ಎಲ್‌.ಶಿವಕುಮಾರ್‌, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌ ಅವರು ಅವಕಾಶ ನೀಡುವಂತೆ ವರಿಷ್ಠರ ಮೊರೆ ಹೋಗಿದ್ದಾರೆ.

ಬಸವನಗುಡಿ
ಪ್ರತಿಷ್ಠಿತ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಾಲಿಕೆಯ ಮಾಜಿ ಮೇಯರ್‌, ಬಿಜೆಪಿಯ ಕಟ್ಟೆ ಸತ್ಯ ನಾರಾಯಣ ಹಾಗೂ ಜೆಡಿಎಸ್‌ನ ತಿಮ್ಮೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಯಲಹಂಕ ವಿಧಾನಸಭೆ
ಕ್ಷೇತ್ರದಿಂದ ಮತ್ತೂಮ್ಮೆ ಜೆಡಿಎಸ್‌ ನಿಂದ ಕಣಕ್ಕಿಳಿಯಲು ಮಾಜಿ ಪಾಲಿಕೆ ಸದಸ್ಯರ ಹನುಮಂತೇಗೌಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದಾಸರಹಳ್ಳಿ ಕ್ಷೇತ್ರದ ಮೇಲೆ ಮಾಜಿ ಸದಸ್ಯ ತಿಮ್ಮನಂಜಯ್ಯ ಕಣ್ಣಿಟ್ಟಿದ್ದಾರೆ

●ವೇಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next