Advertisement

ಶಾಸಕರ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ

03:59 PM May 10, 2018 | Team Udayavani |

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳ ಕಾಲ ಅಧಿಕಾರಿದಲ್ಲಿದ್ದ ಶಾಸಕ ವರ್ತೂರು ಪ್ರಕಾಶ್‌ ಅವರ ದುರಾಡಳಿತದಿಂದಾಗಿ ನಗರದ ಅಭಿವೃದ್ಧಿ ಕಡೆಗಣನೆಯಾಗಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಆರೋಪಿಸಿದರು.

Advertisement

ನಗರದ ಟಮಕ, ಗಾಂಧಿನಗರ, ಮೆಕ್ಕೆ ವೃತ್ತ, ಕೋಟೆ, ಕುರುಬರಪೇಟೆ, ಮೋಚಿ ಪಾಳ್ಯಗಳಲ್ಲಿ ರೋಡ್‌ ಶೋ ನಡೆಸಿದ ನಂತರ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ನಗರ ಸಮಸ್ಯೆಗಳ ಗೂಡಾಗಿದೆ. ರಸ್ತೆಗಳೆಲ್ಲ ಹಾಳಾಗಿದ್ದು, ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅಗುತ್ತಿಲ್ಲ. ಕುಡಿಯಲು ನೀರಿಲ್ಲದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಶಾಸಕ ವರ್ತೂರು ಪ್ರಕಾಶ್‌ ಅವರ ನಿರ್ಲಕ್ಷ್ಯವೇ
ಕಾರಣ ಎಂದು ಆರೋಪಿಸಿದರು. 

ನೀರಿನ ಅನುದಾನ ದುರುಪಯೋಗ: ನಗರ ಪ್ರದೇಶಕ್ಕಾಗಿ ಕುಡಿಯುವ ನೀರಿಗೆ ಮೀಸಲಿರಿಸಿರುವ ಅಮ್ಮೇರಹಳ್ಳಿ ಹಾಗೂ ಮಡೇರಹಳ್ಳಿ ಕೆರೆ ನೀರನ್ನು ರಕ್ಷಿಸಿ, ಪೈಪ್‌ಲೈನ್‌ ಮೂಲಕ ನೀರು ಹರಿಸುವಲ್ಲಿ ವಿಫ‌ಲರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀರಿನ ಸೌಲಭ್ಯಕ್ಕಾಗಿ ಬಂದಿದ್ದ ಅನುದಾನವನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ ಎಂದು ದೂರಿದರು.

ರಾಶಿ ರಾಶಿ ಕಸ: ಸ್ವತ್ಛತೆ ಬಗ್ಗೆ ಜಪ ಮಾಡುವ ಕಾಂಗ್ರೆಸ್‌ನವರು ನಗರಸಭೆಯಲ್ಲಿ ಈಗ ಅಧಿಕಾರದಲ್ಲಿದ್ದಾರೆ. ನಗರದಲ್ಲಿ ಎಲ್ಲಿ ನೋಡಿದರೂ ರಾಶಿ ರಾಶಿ ಕಸ ಬಿದ್ದಿದೆ. ಸಮಸ್ಯೆಯನ್ನು ನಿವಾರಿಸಲು ಮುಂದಾಗುತ್ತಿಲ್ಲ. ಹಣ ಗಳಿಸುವಂತಹ ಕಾಮಗಾರಿಗಳಿಗೆ ಟೆಂಡರ್‌ ಕರೆಯುವುದರಲ್ಲಿ ನಿರತರಾಗಿದ್ದಾರೆಂದು ಟೀಕಿಸಿದರು. 

Advertisement

ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದು ಬಿಟ್ಟು, ಇಲ್ಲ ಸಲ್ಲದ ಆರೋಪ ಹೊರೆಸಿ ವರ್ಗಾವಣೆ ಮಾಡಿಸುತ್ತಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಇಲ್ಲಿ ಜಾಗವೇ ಇಲ್ಲವಾಗಿದೆ ಎಂದರು. 

ವರ್ತೂರು ಆಡಳಿತಕ್ಕೆ ಅಂತ್ಯ ಹಾಡಿ: ತಾವು ಅಧಿಕಾರದಲ್ಲಿದ್ದಾಗ ಪಕ್ಷಭೇದ ಮರೆತು ಜನಪರ ಕೆಲಸ ಮಾಡಿದ್ದೇನೆ. ಯಾವುದೇ ಅಧಿಕಾರಿಗೆ ತೊಂದರೆ ನೀಡಿಲ್ಲ. ಯಾರಿಂದಲೂ ನಯಾಪೈಸೆ ಪಡೆದಿಲ್ಲ. ಕೋಲಾರದ ಪ್ರತಿ ರಸ್ತೆಯೂ ಹಾಳಾಗಿದೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಎಲ್ಲಿ ನೋಡಿದರೂ ಧೂಳು ತುಂಬಿದ್ದು, ಜನತೆ ರೋಸಿ ಹೋಗಿದ್ದಾರೆ. ಈ ಬಾರಿ ಜೆಡಿಎಸ್‌ ಬೆಂಬಲಿಸುವ ಮೂಲಕ ವರ್ತೂರು ಪ್ರಕಾಶ್‌ ಆಡಳಿತಕ್ಕೆ ಅಂತ್ಯ ಹಾಡಬೇಕೆಂದರು. 

ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಚೆಲುವನಹಳ್ಳಿ ನಾಗರಾಜ್‌, ತಾಪಂ ಸದಸ್ಯ ಮುರಳಿ, ಮೂರಾಂಡಹಳ್ಳಿ ಗೋಪಾಲ್‌, ಟಿಂಬರ್‌ ಬಾಬು, ಕಿಲಾರಿಪೇಟೆ ಮೇಸ್ತ್ರೀ ನಾರಾಯಣ ಸ್ವಾಮಿ, ಮುಕ್ಕಡ್‌ ವೆಂಕಟೇಶ್‌, ನಾಗರಾಜ್‌ ಯಾದವ್‌, ಶಬರಿ, ತಾಲೂಕು ಅಧ್ಯಕ್ಷ ಬಾಬುಮೌನಿ, ಸುಗಟೂರು ಎಸ್‌.ವಿ.ನಾರಾಯಣಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next